ಮಾಡಬಾರದ ತಪ್ಪು ನಾವು ಮಾಡಿದೆವು!: ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಮಾತು

ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ಅವರ ಅಮೋಗ ಜೊತೆಯಾಟದಿಂದಾಗಿ ಟೀಮ್ ಇಂಡಿಯಾ ಅದ್ಭುತ ಹೋರಾಟವನ್ನು ನಡೆಸಿತಾದರೂ ತಂಡವಾಗಿ ಲಂಕಾ ವಿರುದ್ಧ ಶರಣಾಗಿದೆ.
ಈ ಪಂದ್ಯದ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸೋಲಿಗೆ ಕಾರಣವಾದ ಪ್ರಮುಖ ಅಂಶವನ್ನು ಬೊಟ್ಟು ಮಾಡಿದ್ದಾರೆ. ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಪವರ್‌ಪ್ಲೇ ಅವಧಿಯಲ್ಲಿ ಕಳಪೆಯಾಗಿ ಆಡಿದ್ದು ಇದುವೇ ನಮಗೆ ಆಘಾತ ನೀಡತು ಎಂದಿದ್ದಾರೆ. ಅಲ್ಲದೆ ಕೆಲ ಮೂಲಭೂತ ತಪ್ಪುಗಳನ್ನು ನಾವು ಮಾಡಿದ್ದು ಈ ಹಂತದಲ್ಲಿ ಅಂಥಾ ತಪ್ಪುಗಳು ನಡೆಯಬಾರದು ಎಂದಿದ್ದಾರೆ. ಅರ್ಷ್‌ದೀಪ್ ಸಿಂಗ್ ಅವರ ನೋಬಾಲ್ ಉದ್ದೇಶಿಸಿ ಹಾರ್ದಿಕ್ ಪಾಂಡ್ಯ ಈ ಸಂದರ್ಭದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ನೋಬಾಲ್ ಎಸೆಯುವುದು ಅಪರಾಧ
"ನಿಮಗೆ ಕೆಟ್ಟ ದಿನಗಳು ಇರಬಹುದು. ಆದರೆ ಮೂಲಭೂತ ಸಂಗತಿಗಳನ್ನು ನೀವು ಬಿಟ್ಟುಬಿಡಬಾರದು. ಇಂಥಾ ಹಂತದಲ್ಲಿ ಅದು ಬಹಳ ಕಠಿಣವಾಗುತ್ತದೆ" ಎಂದು ಅರ್ಶ್‌ದೀಪ್ ಸಿಂಗ್ ನೋ ಬಾಲ್ ಎಸೆದ ವಿಚಾರವಾಗಿ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ. ಮುಂದುವರಿದ ಹಾರ್ದಿಕ್ "ಈ ಹಿಂದೆ ಕೂಡ ಅವರು ನೋ ಬಾಲ್‌ಗಳನ್ನು ಎಸೆದಿದ್ದಾರೆ. ಇದು ಆರೋಪ ಮಾಡುವುದಲ್ಲ, ಆದರೆ ನೋ ಬಾಲ್ ಎಸೆಯುವುದು ದೊಡ್ಡ ಅಪರಾಧ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾರ್ದಿಕ್ ಪಾಂಡ್ಯ

5 ನೋ ಬಾಲ್ ಎಸೆದ ಅರ್ಶ್‌ದೀಪ್
ಇನ್ನು ಈ ಪಂದ್ಯದಲ್ಲಿ ಕೇವಲ ಎರಡು ಓವರ್‌ಗಳ ಬೌಲಿಂಗ್ ಮಾಡಿದ ಅರ್ಶ್‌ದೀಪ್ ಸಿಂಗ್ ಬರೊಬ್ಬರಿ 5 ನೋ ಬಾಲ್ ಎಸೆದಿದ್ದಾರೆ. ಈ ಮೂಲಕ ಶ್ರೀಲಂಕಾ ಬೃಹತ್ ಮೊತ್ತ ಪೇರಿಸಲು ಪ್ರಮುಖ ಕಾರಣವಾದರು. ತಮ್ಮ ಮೊದಲ ಓವರ್‌ನಲ್ಲಿಯೇ ಅರ್ಶ್‌ದೀಪ್ ಸಿಂಗ್ ಹ್ಯಾಟ್ರಿಕ್ ನೋಬಾಲ್ ಎಸೆದಿದ್ದರು. ಬಳಿಕ 19 ಓವರ್ ಎಸೆಯಲು ಬಂದ ಯುವ ಆಟಗಾರ ಈ ಹಂತದಲ್ಲಿಯೂ ಎರಡು ನೋಬಾಲ್ ಬೊಟ್ಟುಕೊಟ್ಟರು. ಇದು ಇದು ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಈ ಮೂಲಜ ಟಿ20 ಸರಣಿಯೊಂದರಲ್ಲಿ ಭಾರತದ ಪರವಾಗಿ ಅತೀ ಹೆಚ್ಚು ನೋಬಾಲ್ ಎಸೆದ ಬೌಲರ್ ಎಂಬ ಕೆಟ್ಟ ದಾಖಲೆ ಬರೆದಿದ್ದಾರೆ ಅರ್ಷ್‌ದೀಪ್. ಇನ್ನು ಈ ಪಂದ್ಯದಲ್ಲಿ ಒಟ್ಟು ಭಾರತದ ಬೌಲರ್‌ಗಳು ಒಟ್ಟು 7 ನೋಬಾಲ್ ಎಸೆದಿರುವುದು ಕೂಡ ಭಾರತದ ಕೆಟ್ಟ ದಾಖಲೆಯಾಗಿದೆ.

ಸರಣಿ ಸಮಬಲಗೊಳಿಸಿದ ಲಂಕಾ
ಇನ್ನು ಈ ಪಂದ್ಯದಲ್ಲಿ ಶ್ರೀಲಂಕಾ ಮೊದಲಿಗೆ ಅಬ್ಬರದ ಬ್ಯಾಟಿಂಗ್ ನಡೆಸಿ 206 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಆರಂಭದಲ್ಲಿಯೇ ಭಾರೀ ಕುಸಿತ ಕಂಡಿತು. ಒಂದು ಹಂತದಲ್ಲಿ 57 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಪರಿಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ಜೋಡಿ ಆಸರೆಯಾದರು. ತಲಾ ಅರ್ಧ ಶತಕ ಬಾರಿಸಿದ ಸೂರ್ಯಕುಮಾರ್ ಹಾಗೂ ಅಕ್ಷರ್ ಪಟೇಲ್ ಕೊನೆಯ ಕ್ಷಣದವರೆಗೂ ಹೋರಾಡಿದರು. ಸೂರ್ಯಕುಮಾರ್ ವಿಕೆಟ್ ಕಳೆದುಕೊಂಡ ಬಳಿಕ ಶಿವಂ ಮಾವಿ ಜೊತೆಗೂಡಿ ಅಕ್ಷರ್ ಪಟೇಲ್ ಗೆಲುವಿನ ಆಸೆ ಜೀವಂತವಾಗಿಸಿದರಾದರೂ ಅಂತಿಮವಾಗಿ ಟೀಮ್ ಇಂಡಿಯಾ 16 ರನ್‌ಗಳ ಸೋಲು ಅನುಭವಿಸಿದೆ. ಈ ಮೂಲಕ ಶ್ರೀಲಂಕಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಭಾರತ ಆಡುವ ಬಳಗ: ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್
ಬೆಂಚ್: ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಮುಖೇಶ್ ಕುಮಾರ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ
ಬೆಂಚ್: ಲಹಿರು ಕುಮಾರ, ಅವಿಷ್ಕ ಫೆರ್ನಾಂಡೋ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ದುನಿತ್ ವೆಳ್ಳಾಲಗೆ, ನುವಾನ್ ತುಷಾರ, ಸದೀರ ಸಮರವಿಕ್ರಮ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications