
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಮೂರನೇ ದಿನದಾಟ ಆರಂಭವಾಗುತ್ತಿದ್ದಂತೆ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ 174 ರನ್‌ಗಳಿಗೆ ಆಲ್ ಔಟ್ ಆಗಿದೆ. ಈ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 574 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಘೋಷಿಸಿತ್ತು. ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಅಜೇಯ 175 ರನ್ ಚಚ್ಚುವುದರ ಮೂಲಕ ಶ್ರೀಲಂಕಾಗೆ ಖಳನಟನಾಗಿ ಪರಿಣಮಿಸಿದ್ದರು. ಹೀಗೆ ಟೀಮ್ ಇಂಡಿಯಾ ಎರಡನೇ ದಿನದಾಟದಂದು ಡಿಕ್ಲೇರ್ ಮಾಡಿಕೊಂಡ ನಂತರ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತ್ತು.
ಹೀಗೆ ತೃತೀಯ ದಿನದಾಟ ಆರಂಭಿಸಿದ ಶ್ರೀಲಂಕಾ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ್ದು 66 ರನ್‌ಗಳಿಗೆ ತನ್ನ ಉಳಿದ 6 ವಿಕೆಟ್‍ಗಳನ್ನು ಕಳೆದುಕೊಳ್ಳುವುದರ ಮೂಲಕ 174 ರನ್‌ಗಳಿಗೆ ಆಲ್ ಔಟ್ ಆಗಿ 400 ರನ್‌ಗಳ ಹಿನ್ನಡೆಯೊಂದಿಗೆ ಫಾಲೋಆನ್ ನಿಯಮಕ್ಕೆ ಒಳಗಾಗಿದೆ. ಶ್ರೀಲಂಕಾ ಪರ ಚರಿತ ಅಸಲಂಕಾ 22, ನಿರೋಷನ್ ಡಿಕ್ವೆಲ್ಲಾ 2, ಸುರಂಗ ಲಕ್ಮಲ್ 0, ಲಸಿತ್ ಎಂಬುಲ್ದೆನಿಯಾ 0, ವಿಶ್ವ ಫೆರ್ನಾಂಡೊ 0 ಮತ್ತು ಲಹಿರು ಕುಮಾರ 0 ಗಳಿಸಿ ನೀರಸ ಪ್ರದರ್ಶನ ನೀಡಿದ್ದಾರೆ. ಇನ್ನು ಶ್ರೀಲಂಕಾ ಪರ ಎರಡನೇ ದಿನದಾಟದಂದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಪತುಮ್ ನಿಸ್ಸಾಂಕ 133 ಎಸೆತಗಳಿಗೆ 61 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಇನ್ನು ಶ್ರೀಲಂಕಾಗೆ ಬ್ಯಾಟಿಂಗ್ ಮೂಲಕ ಖಳನಾಯಕನಾಗಿ ಪರಿಣಮಿಸಿದ್ದ ರವೀಂದ್ರ ಜಡೇಜಾ ಇದೀಗ ಬೌಲಿಂಗ್‌ನಲ್ಲೂ ಸಹ ಅಬ್ಬರಿಸಿದ್ದಾರೆ. 13 ಓವರ್ ಬೌಲಿಂಗ್ ಮಾಡಿರುವ ರವೀಂದ್ರ ಜಡೇಜಾ 4 ಓವರ್ ಮೇಡನ್ ಸಹಿತ 41 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ರವೀಂದ್ರ ಜಡೇಜಾ 5 ವಿಕೆಟ್‍ಗಳ ಗೊಂಚಲನ್ನು ಪಡೆದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ಟೀಮ್ ಇಂಡಿಯಾಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಸದ್ಯ 400 ರನ್‌ಗಳ ಬೃಹತ್ ಹಿನ್ನಡೆಯನ್ನು ಅನುಭವಿಸಿರುವ ಶ್ರೀಲಂಕಾ ಫಾಲೋಆನ್ ನಿಯಮಕ್ಕೆ ಒಳಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದೆ. ಇನ್ನುಳಿದಂತೆ ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.
ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ದಿಮುತ್ ಕರುಣಾರತ್ನೆ (ನಾಯಕ), ಲಹಿರು ತಿರಿಮನ್ನೆ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಸುರಂಗ ಲಕ್ಮಲ್, ವಿಶ್ವ ಫೆರ್ನಾಂಡೋ, ಲಸಿತ್ ಎಂಬುಲ್ದೇನಿಯ, ಲಹಿರು ಕುಮಾರ