
ಆಧುನಿಕ ಕ್ರಿಕೆಟ್‌ನ ಸ್ಟಾರ್ ಬ್ಯಾಟ್ಸ್‌ಮನ್ ಆಗಿರುವ ಭಾರತದ ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 166 ರನ್ ಗಳಿಸಿ ತಮ್ಮ ತಂಡಕ್ಕೆ ಐತಿಹಾಸಿಕ ಗೆಲುವಿಗೆ ಸಹಾಯ ಮಾಡಿದರು. ಈ ಮೂಲಕ ಬ್ಯಾಟಿಂಗ್‌ನಲ್ಲಿ ಆಕಾಶದೆತ್ತರದ ಫಾರ್ಮ್ ಅನ್ನು ಮುಂದುವರೆಸಿದರು.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರ ಎರಡನೇ ಶತಕ ಬಾರಿಸುವ ಮೂಲಕ ಭಾರತವು ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಜೊತೆಗೆ ತಯಾರಾಗುತ್ತಿರುವ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದಾರೆ.
70ರಿಂದ 71ನೇ ಅಂತಾರಾಷ್ಟ್ರೀಯ ಶತಕ ಗಳಿಸಲು ಸುದೀರ್ಘ ಸಮಯ ತೆಗೆದುಕೊಂಡಿರುವ ವಿರಾಟ್ ಕೊಹ್ಲಿ ಈಗ 74ನೇ ಶತಕ ಬಾರಿಸಲು ಕೇವಲ ನಾಲ್ಕು ಸಾಕಾಯಿತು.
ಕ್ರಿಕೆಟ್ ಜಗತ್ತು ವಿರಾಟ್ ಕೊಹ್ಲಿಯ ಪ್ರತಿಭೆಯನ್ನು ಶ್ಲಾಘಿಸುತ್ತಿದ್ದಂತೆ, ಭಾರತದ ಮಾಜಿ ನಾಯಕನನ್ನು ಶ್ರೀಲಂಕಾದ ಮಾಜಿ ಸ್ಟಾರ್ ಆಟಗಾರ ಫರ್ವೀಜ್ ಮಹರೂಫ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನ 'ಸಾರ್ವಕಾಲಿಕ ಶ್ರೇಷ್ಠ' ಎಂದು ಲೇಬಲ್ ನೀಡಿದ್ದಾರೆ.

"ಸರಳವಾಗಿ ಹೇಳಬೇಕೆಂದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ. ಲಿಯೋನೆಲ್ ಮೆಸ್ಸಿ ಫುಟ್‌ಬಾಲ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಗಿದ್ದರೆ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ," ಎಂದು ಫರ್ವೀಜ್ ಮಹರೂಫ್ ಭಾನುವಾರ ಪಂದ್ಯದ ನಂತರ ಹೇಳಿದರು.
"2023ರ ಏಕದಿನ ವಿಶ್ವಕಪ್ ಭಾರತದಲ್ಲಿಯೇ ನಡೆಯಲಿದೆ. ಅವರು 2011ರಲ್ಲಿ ಟ್ರೋಫಿ ಗೆದ್ದಿದ್ದಾರೆ ಮತ್ತು ಕೊಹ್ಲಿ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಿದರೆ, ಈ ಬಾರಿಯೂ ಅವರ ವಿಶ್ವಕಪ್ ಆಗಲಿದೆ. ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್ ಅನ್ನು ವೇಗಗೊಳಿಸುವ ರೀತಿ, ಬೌಲರ್‌ಗಳನ್ನು ದಂಡಿಸುವ ಕಲೆ ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಳ್ಳುವ ಪರಿಯನ್ನು ಜಗತ್ತಿನಲ್ಲಿ ಯಾರೂ ಮಾಡುತ್ತಾರೆಂದು ನಾನು ಭಾವಿಸುವುದಿಲ್ಲ," ಎಂದು ಫರ್ವೀಜ್ ಮಹರೂಫ್ ತಿಳಿಸಿದರು.
ಇದೇ ವೇಳೆ, ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಮಾತನಾಡಿ, "ವಿರಾಟ್ ಕೊಹ್ಲಿ ಕೊನೆಯ 4 ಪಂದ್ಯಗಳಲ್ಲಿ 3ನೇ ಶತಕ ಗಳಿಸಿದ್ದನ್ನು ನೋಡಿ ಆಶ್ಚರ್ಯವಾಗಲಿಲ್ಲ. ಕಳೆದ 2-3 ವರ್ಷಗಳ ಕಾಲ ತನ್ನನ್ನು ಕಾಡಿದ ಕಳಪೆ ಫಾರ್ಮ್‌ನಿಂದ ಅಂತಿಮವಾಗಿ ಹೊರಬಂದಿದ್ದಾರೆ. ಇದನ್ನು ದೀರ್ಘಕಾಲದವರೆಗೆ ಮುಂದುವರಿಸುತ್ತಾನೆ ಎಂಬ ವಿಶ್ವಾಸವಿದೆ," ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟರು.

"ವಿರಾಟ್ ಕೊಹ್ಲಿ ಫಾರ್ಮ್‌ಗೆ ಬಂದಾಗ, ಅದನ್ನು ವರ್ಷಗಳ ಕಾಲ ಆ ಫಾರ್ಮ್ ಅನ್ನು ಮುಂದುವರೆಸುತ್ತಾರೆ. ಅವರು ಕೊನೆಯ 4 ಏಕದಿನ ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಗಳಿಸಿದ್ದು ಆಶ್ಚರ್ಯವೇನಿಲ್ಲ. 166 ರನ್ ಬಾರಿಸಿರುವುದೂ ನನಗೆ ಆಶ್ಚರ್ಯವಾಗುವುದಿಲ್ಲ," ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ವಿರಾಟ್ ಕೊಹ್ಲಿ ಕುರಿತು ಮಾತನಾಡಿದರು.