ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ಕೊನೆಗೂ ನಾಯಕನ ಘೋಷಣೆ, ಪ್ರಮುಖರು ಔಟ್!

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ ಇದೀಗ ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಸರಣಿಗಳನ್ನು ಗೆದ್ದು ಬೀಗಿದೆ. ಇತ್ತಂಡಗಳ ನಡುವೆ ನಡೆದ ಏಕದಿನ ಸರಣಿಯಲ್ಲಿ ವೈಟ್ ವಾಶ್ ಸಾಧನೆ ಮಾಡಿದ ಟೀಮ್ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದೆ. ಹಾಗೂ ವಿಂಡೀಸ್ ವಿರುದ್ಧದ ಅಂತಿಮ ಪಂದ್ಯ ಭಾನುವಾರದಂದು ನಡೆಯಲಿದ್ದು ಈ ಸರಣಿ ಮುಗಿದ ಬೆನ್ನಲ್ಲೇ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಹಾಗೂ ಈ ಸರಣಿ ಮೂಲಕ ಟೀಮ್ ಇಂಡಿಯಾಗೆ ನೂತನ ಟೆಸ್ಟ್ ನಾಯಕ ಕೂಡ ಸಿಕ್ಕಿದ್ದಾರೆ.
ಇನ್ನು ಕಳೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದ ವಿರಾಟ್ ಕೊಹ್ಲಿ ನಂತರದ ದಿನಗಳಲ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ಕಳೆದುಕೊಂಡಿದ್ದರು. ಹೀಗೆ ವಿರಾಟ್ ಕೊಹ್ಲಿ ನಂತರ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ಇನ್ನು ಸೀಮಿತ ಓವರ್ ತಂಡಗಳ ನಾಯಕತ್ವದಿಂದ ಕೆಳಗಿಳಿದಿದ್ದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ನಂತರ ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಆದರೆ ಬಿಸಿಸಿಐ ಭಾರತ ಟೆಸ್ಟ್ ತಂಡದ ನೂತನ ನಾಯಕನನ್ನು ಮಾತ್ರ ಇಲ್ಲಿಯವರೆಗೂ ಘೋಷಿಸಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ನಂತರ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್ ಸರಣಿಗಳು ಮಾತ್ರ ಇದ್ದ ಕಾರಣ ಬಿಸಿಸಿಐ ಭಾರತ ಟೆಸ್ಟ್ ತಂಡದ ನೂತನ ನಾಯಕನನ್ನು ಘೋಷಿಸುವ ಕೆಲಸಕ್ಕೆ ಕೈ ಹಾಕಿರಲಿಲ್ಲ.
ಆದರೆ ಇದೀಗ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ಭಾರತ ಟೆಸ್ಟ್ ತಂಡದ ಮುಂದಿನ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿದೆ. ಇದರ ಜತೆಗೆ ಕಳಪೆ ಪ್ರದರ್ಶನ ನೀಡುತ್ತಿದ್ದ ಆಟಗಾರರಿಗೆ ಬಿಸಿಸಿಐ ಕೊಕ್ ನೀಡಿದ್ದು, ಪ್ರಕಟವಾಗಿರುವ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಮಾಹಿತಿ ಮುಂದೆ ಓದಿ.

ಭಾರತ ಟೆಸ್ಟ್ ತಂಡದ ನೂತನ ನಾಯಕನ ಘೋಷಣೆ
ಶ್ರೀಲಂಕಾ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ 18 ಆಟಗಾರರ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಭಾರತ ಟೆಸ್ಟ್ ತಂಡದ ನಾಯಕ ಎಂದು ಘೋಷಿಸಿದೆ. ಈ ಮೂಲಕ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾಗಿದ್ದು ಟೀಮ್ ಇಂಡಿಯಾವನ್ನು ಎಲ್ಲಾ ಆವೃತ್ತಿಗಳಲ್ಲಿಯೂ ಮುನ್ನೆಡೆಸಲಿದ್ದಾರೆ.

ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡ
ಶ್ರೀಲಂಕಾ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಬ್ ಪಂತ್, ಕೆಎಸ್ ಭರತ್, ಆರ್ ಅಶ್ವಿನ್ (ಫಿಟ್‌ನೆಸ್ ಆಧಾರದ ಮೇಲೆ), ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್, ಜೆ ಬುಮ್ರಾ, ಎಂ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೌರಭ್ ಕುಮಾರ್

ತಂಡದಲ್ಲಿಲ್ಲ ಪ್ರಮುಖರು
ಇನ್ನು ಬಿಸಿಸಿಐ ಈ ಹಿಂದೆಯೇ ನೀಡಿದ್ದ ಎಚ್ಚರಿಕೆಯಂತೆ ಇದೀಗ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ ಮತ್ತು ಇಶಾಂತ್ ಶರ್ಮಾರನ್ನು ಭಾರತ ಟೆಸ್ಟ್ ತಂಡದಿಂದ ಕೈಬಿಟ್ಟಿದೆ. ಹಲವು ದಿನಗಳಿಂದ ಕಳಪೆ ಪ್ರದರ್ಶನ ನೀಡುತ್ತಿದ್ದ ಈ ಆಟಗಾರರು ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದರೆ, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕೆಎಲ್ ರಾಹುಲ್ ಕೂಡ ಅಲಭ್ಯರಾಗಿದ್ದಾರೆ.

ಭಾರತ ಮತ್ತು ಶ್ರೀಲಂಕಾ ಟೆಸ್ಟ್ ಸರಣಿ ಯಾವಾಗ?
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ದಿನಾಂಕ ಮತ್ತು ವಿವರ ಈ ಕೆಳಕಂಡಂತಿದೆ.
ಪ್ರಥಮ ಟೆಸ್ಟ್ ಪಂದ್ಯ: ಮಾರ್ಚ್ 4ರಿಂದ 8ರವರೆಗೆ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ದ್ವಿತೀಯ ಟೆಸ್ಟ್ ಪಂದ್ಯ: ಮಾರ್ಚ್ 12ರಿಂದ ಮಾರ್ಚ್ 16ರವರೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications