
ಇಂದು (ಭಾನುವಾರ, ಜನವರಿ 15) ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು ಭಾರತ ತಂಡ ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಹೀಗಾಗಿ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡ ಮೊದಲು ಬೌಲಿಂಗ್ ಮಾಡಲಿದೆ.
ಭಾರತ vs ಶ್ರೀಲಂಕಾ ನಡುವಿನ 3ನೇ ಏಕದಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.
ಗುವಾಹಟಿ ಮತ್ತು ಕೋಲ್ಕತ್ತಾದಲ್ಲಿ ನಡೆದ ಮೊದಲೆರಡು ಏಕದಿನ ಪಂದ್ಯಗಳನ್ನು ಕ್ರಮವಾಗಿ 67 ರನ್ ಮತ್ತು 4 ವಿಕೆಟ್‌ಗಳ ಅಂತರದಲ್ಲಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದ್ದು, ಮೂರನೇ ಪಂದ್ಯವನ್ನು ಗೆದ್ದು ವೈಟ್‌ವಾಶ್ ಮಾಡಲು ಎದುರು ನೋಡುತ್ತಿದೆ.
ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಎರಡನೇ ಪಂದ್ಯದಲ್ಲಿ ವಿಫಲರಾದರೂ, ಬೌಲರ್‌ಗಳು ತಮ್ಮ ಜವಾಬ್ದಾರಿ ನಿಭಾಯಿಸಿದರು. ಅಲ್ಲದೇ ವಿಕೆಟ್ ಕೀಪರ್ ಕೆಎಲ್ ರಾಹುಲ್ ಪಂದ್ಯ ವಿಜೇತ ಬ್ಯಾಟಿಂಗ್ ಮಾಡಿದರು.
ಭಾರತ ತಂಡವು ಮೂರನೇ ಪಂದ್ಯದಲ್ಲಿ ಎರಡು ಬದಲಾವಣೆ ಮಾಡಿದ್ದು, ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ವೇಗಿ ಉಮ್ರಾನ್ ಮಲಿಕ್ ಅವರಿಗೆ ವಿಶ್ರಾಂತಿ ನೀಡಿದೆ. ಇನ್ನು ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿದೆ.
ಅದೇ ರೀತಿ ಶ್ರೀಲಂಕಾ ತಂಡದಲ್ಲಿಯೂ ಎರಡು ಬದಲಾವಣೆ ಮಾಡಲಾಗಿದೆ. ಧನಂಜಯ ಡಿ ಸಿಲ್ವಾ ಬದಲಿಗೆ ಅಶೆನ್ ಬಂಡಾರ ಮತ್ತು ದುನಿತ್ ವೆಲ್ಲಲಾಜೆ ಬದಲಿಗೆ ಜೆಫ್ರಿ ವಾಂಡರ್ಸೆ ಅವರನ್ನು ಆಯ್ಕೆ ಮಾಡಲಾಗಿದೆ.
ಭಾರತ vs ಶ್ರೀಲಂಕಾ 3ನೇ ಏಕದಿನ ಪಂದ್ಯದ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
ಶ್ರೀಲಂಕಾ: ಅವಿಷ್ಕಾ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಅಶೇನ್ ಬಂಡಾರ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಜೆಫ್ರಿ ವಾಂಡರ್ಸೆ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತ, ಲಹಿರು ಕುಮಾರ.