IND vs SL: ಭಾರತದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಈತ ಎಲ್ಲವನ್ನೂ ಮಾಡುತ್ತಿದ್ದಾನೆ; ಇರ್ಫಾನ್ ಪಠಾಣ್

ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಅಕ್ಟೋಬರ್- ನವೆಂಬರ್‌ನಲ್ಲಿ ಭಾರತದಲ್ಲಿಯೇ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ ಮೊಹಮ್ಮದ್ ಸಿರಾಜ್ ತಮ್ಮ ಹೆಸರನ್ನು ಭಾರತ ತಂಡದಲ್ಲಿ ಸೇರಿಸಲು ಎಲ್ಲವನ್ನೂ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಗುರುವಾರ, ಜನವರಿ 12ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು 4 ವಿಕೆಟ್‌ಗಳಿಂದ ಸೋಲಿಸಿದ ವೇಳೆ ಮೊಹಮ್ಮದ್ ಸಿರಾಜ್ ಪ್ರಮುಖ ಮೂರು ವಿಕೆಟ್ ಪಡೆದು ಮಿಂಚಿದರು.
ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಇರ್ಫಾನ್ ಪಠಾಣ್, ಮುಂಬರುವ ಏಕದಿನ ವಿಶ್ವಕಪ್‌ನ ದೃಷ್ಟಿಕೋನದಿಂದ, ಮೊಹಮ್ಮದ್ ಸಿರಾಜ್ ಅವರಿಗೆ ಭಾರತದ ತಂಡದಲ್ಲಿ ಸ್ಥಾನ ಪಡೆಯಲು ಎಲ್ಲವನ್ನೂ ಮಾಡಿದ್ದಾರೆ ಎಂದರು.

ಎರಡೂ ರೀತಿಯಲ್ಲಿಯೂ ಚೆಂಡು ಸ್ವಿಂಗ್ ಮಾಡಬಲ್ಲ
"50 ಓವರ್‌ಗಳ ವಿಶ್ವಕಪ್‌ನ ದೃಷ್ಟಿಕೋನದಿಂದ, ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಸಿರಾಜ್ ಅವರು ತಮ್ಮ ಹೆಸರನ್ನು ಮರೆಯಬಾರದು ಎಂದು ಎಲ್ಲವನ್ನೂ ಮಾಡಿದ್ದಾರೆ," ಎಂದು ಇರ್ಫಾನ್ ಪಠಾಣ್ ಹೇಳಿದರು.
ಮೊಹಮ್ಮದ್ ಸಿರಾಜ್ ಎರಡೂ ರೀತಿಯಲ್ಲಿಯೂ ಚೆಂಡು ಸ್ವಿಂಗ್ ಮಾಡಬಲ್ಲರು ಮತ್ತು ಹೊಸ ಚೆಂಡಿನಲ್ಲಿ ನಿಯಮಿತವಾಗಿ ಭಾರತಕ್ಕೆ ವಿಕೆಟ್‌ಗಳನ್ನು ತೆಗೆದುಕೊಡುತ್ತಿದ್ದಾರೆ ಎಂದು ಮಾಜಿ ಆಲ್‌ರೌಂಡರ್ ಇಫಾನ್ ಪಠಾಣ್ ತಿಳಿಸಿದರು.

ಸಿರಾಜ್ ಬೌಲಿಂಗ್ ಪ್ರದರ್ಶನದಲ್ಲಿ ಸುಧಾರಣೆ
"ಕೇವಲ ಶ್ರೀಲಂಕಾ ವಿರುದ್ಧದ ಸರಣಿ ಮಾತ್ರವಲ್ಲ, ಭಾರತ ಆಡುತ್ತಿರುವ ಪ್ರತಿಯೊಂದು ಸರಣಿಯಲ್ಲೂ ಮೊಹಮ್ಮದ್ ಸಿರಾಜ್ ಹೊಸ ಚೆಂಡಿನ ನಿಯಮಿತವಾಗಿ ವಿಕೆಟ್ ಕೀಳುತ್ತಿದ್ದಾರೆ. ಎರಡೂ ಕಡೆ ಸ್ವಿಂಗ್ ಮೂಲಕ ವೇಗವನ್ನೂ ಕಾಪಾಡಿಕೊಳ್ಳುತ್ತಾರೆ. ಅವರು ತಮ್ಮ ಏಕದಿನ ಫಾರ್ಮ್ ಅನ್ನು ಟಿ20 ಕ್ರಿಕೆಟ್‌ಗೆ ಪರಿವರ್ತಿಸಲು ಪ್ರಯತ್ನಿಸುತ್ತಾರೆ," ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟರು.
28 ವರ್ಷದ ಮೊಹಮ್ಮದ್ ಸಿರಾಜ್ ಅವರು ನಿರಂತರವಾಗಿ ಆಡುವುದರಿಂದ ತುಂಬಾ ಆತ್ಮವಿಶ್ವಾಸವನ್ನು ಪಡೆಯುತ್ತಿದ್ದಾರೆ, ಅವರ ಬೌಲಿಂಗ್ ಪ್ರದರ್ಶನದಲ್ಲಿ ಸುಧಾರಣೆ ಕಂಡಿದೆ ಎಂದು ಪಠಾಣ್ ಹೇಳಿದರು.

ಜನವರಿ 15ರಂದು ತಿರುವನಂತಪುರದಲ್ಲಿ ಮೂರನೇ ಪಂದ್ಯ
ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಅವರ ಬಿಗಿ ಬೌಲಿಂಗ್ ದಾಳಿ ಮತ್ತು ನಂತರ, ಕೆಎಲ್ ರಾಹುಲ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ.
ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಮೂರು ವಿಕೆಟ್ ಕಬಳಿಸಿ, ಶ್ರೀಲಂಕಾ ತಂಡವನ್ನು 215 ರನ್‌ಗಳಿಗೆ ನಿಯಂತ್ರಿಸಿದರು. ಶ್ರೀಲಂಕಾ ನೀಡಿದ್ದ 216 ರನ್‌ಗಳ ಗುರಿಯನ್ನು ಭಾರತ ಇನ್ನೂ ಏಳು ಓವರ್‌ಗಳು ಬಾಕಿ ಇರುವಂತೆಯೇ ತಲುಪಿತು.
ಗುವಾಹಟಿ ಮತ್ತು ಕೋಲ್ಕತ್ತಾದಲ್ಲಿ ಗೆದ್ದ ನಂತರ, ಭಾರತ ತಂಡವು ಭಾನುವಾರ, ಜನವರಿ 15ರಂದು ತಿರುವನಂತಪುರದಲ್ಲಿ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದು, ವೈಟ್‌ವಾಶ್ ಮಾಡಲು ಎದುರು ನೋಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications