
ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಜಯಗಳಿಸುವುದರ ಮೂಲಕ ವೈಟ್ ವಾಷ್ ಸಾಧನೆಯನ್ನು ಮಾಡಿರುವ ಟೀಂ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸಲಿದೆ. ಹೌದು, ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಮಾರ್ಚ್ 4ರಿಂದ ಆರಂಭಗೊಳ್ಳುತ್ತಿದೆ. ಇತ್ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಮಾರ್ಚ್ 4ರಂದು ಆರಂಭವಾಗಲಿದ್ದು ಮೊಹಾಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ನಂತರ ಕಣಕ್ಕಿಳಿಯಲಿರುವ ಪ್ರಥಮ ಟೆಸ್ಟ್ ಪಂದ್ಯ ಇದಾಗಿದೆ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿರುವ 100ನೇ ಟೆಸ್ಟ್ ಪಂದ್ಯ ಎಂಬ ವಿಶೇಷತೆಗೆ ಈ ಪಂದ್ಯ ಪಾತ್ರವಾಗಿದೆ.
ಇನ್ನು ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವುದರ ಕುರಿತು ಈಗಾಗಲೇ ಭಾರತದ ಹಲವಾರು ದಿಗ್ಗಜ ಕ್ರಿಕೆಟಿಗರು ವಿಡಿಯೋ ಮೂಲಕ ಮಾತನಾಡಿ ಸಂದೇಶವನ್ನು ರವಾನಿಸಿದ್ದು, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ರೀತಿಯ ಹಲವಾರು ದಿಗ್ಗಜ ಕ್ರಿಕೆಟಿಗರು ವಿರಾಟ್ ಕೊಹ್ಲಿಗೆ ಶುಭಾಶಯ ಕೋರಿದ್ದಾರೆ. ಇದೀಗ ಈ ಸಾಲಿಗೆ ಭಾರತದ ಮತ್ತೋರ್ವ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಸೇರಿಕೊಂಡಿದ್ದು, ತನ್ನ ಆಪ್ತ ವಿರಾಟ್ ಕೊಹ್ಲಿಗೆ ವಿಭಿನ್ನ ರೀತಿಯಲ್ಲಿ ಶುಭ ಹಾರೈಸಿದ್ದಾರೆ.
ಹೌದು, ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಭಾರತ ಕೋಚ್ ಸ್ಥಾನದಿಂದ ಕೆಳಗಿಳಿದ ರವಿಶಾಸ್ತ್ರಿ ಅದಕ್ಕೂ ಮುನ್ನ ವೀಕ್ಷಕ ವಿವರಣೆಗಾರನಾಗಿ ಕೆಲಸ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಬ್ಯಾಟ್ಸ್‌ಮನ್ ಓರ್ವ ಅತ್ಯುತ್ತಮ ಹೊಡೆತ ಬಾರಿಸಿ ಚೆಂಡನ್ನು ಬೌಂಡರಿಗೆ ಅಟ್ಟಿದರೆ ರವಿಶಾಸ್ತ್ರಿ ಆ ಹೊಡೆತವನ್ನು ಟ್ರೇಸರ್ ಬುಲೆಟ್ ಎಂದು ಬಣ್ಣಿಸುತ್ತಿದ್ದರು. ಆ ಪದವನ್ನು ವಿಶೇಷವಾಗಿ ಬಳಸುತ್ತಿದ್ದ ರವಿಶಾಸ್ತ್ರಿ ಇದೀಗ ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಸಂದರ್ಭದಲ್ಲಿ ಬಳಸಿ ಶುಭ ಕೋರಿದ್ದಾರೆ. ರವಿಶಾಸ್ತ್ರಿ ಹೇಳುವ ರೀತಿಯೇ ವಿರಾಟ್ ಕೊಹ್ಲಿ ಕೂಡ ಟ್ರೇಸರ್ ಬುಲೆಟ್ ಕಾಮೆಂಟರಿ ಮಾಡಿದ್ದು, ಸದ್ಯ ತನ್ನ ಮತ್ತು ವಿರಾಟ್ ಕೊಹ್ಲಿಯ ಈ ವಿಶೇಷ ವಿಡಿಯೋವನ್ನು ರವಿಶಾಸ್ತ್ರಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನೂರನೇ ಟೆಸ್ಟ್ ಪಂದ್ಯವನ್ನು ಸಂಭ್ರಮಿಸಲು ನೂರು ಕಾರಣಗಳಿವೆ ಎಂದಿರುವ ರವಿಶಾಸ್ತ್ರಿ ಇದೊಂದು ಅದ್ಭುತವಾದ ಶತಕ ಎಂದು ವಿರಾಟ್ ಕೊಹ್ಲಿಯ ನೂರನೇ ಟೆಸ್ಟ್ ಪಂದ್ಯವನ್ನು ಪ್ರಶಂಸಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಬ್ ಪಂತ್, ಕೆಎಸ್ ಭರತ್, ಆರ್ ಅಶ್ವಿನ್ (ಫಿಟ್‌ನೆಸ್ ಆಧಾರದ ಮೇಲೆ), ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್, ಜೆ ಬುಮ್ರಾ, ಎಂ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೌರಭ್ ಕುಮಾರ್
ಟೆಸ್ಟ್ ಸರಣಿಗೆ ಪ್ರಕಟವಾಗಿರುವ ಶ್ರೀಲಂಕಾ ತಂಡ: ದಿಮುತ್ ಕರುಣಾರತ್ನೆ (ನಾಯಕ), ಪಾತುಮ್ ನಿಸ್ಸಾಂಕ, ಲಹಿರು ತಿರಿಮನ್ನೆ, ಧನಂಜಯ ಡಿ ಸಿಲ್ವಾ (ಉಪನಾಯಕ), ಕುಸಾಲ್ ಮೆಂಡಿಸ್ (ಫಿಟ್‌ನೆಸ್ ಆಧಾರದ ಮೇಲೆ), ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ, ಚಮಿಕಾ ಕರುಣಾರತ್ನೆ, ಲಹಿರು ಎಫ್‌ಕ್ ಕುಮಾರ, ಸುರಂಗ ಕುಮಾರ, ಸುರಂಗ , ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಲಸಿತ್ ಎಂಬುಲ್ದೇನಿಯ.