
ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದ್ದು, ಮೊದಲಿಗೆ ನಡೆಯುತ್ತಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋಲುವುದರ ಮೂಲಕ ಹಿನ್ನಡೆಯನ್ನು ಅನುಭವಿಸಿದೆ. ಹೀಗೆ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತಿರುವ ಶ್ರೀಲಂಕಾ ಇಂದು ( ಫೆಬ್ರವರಿ 27 ) ಟೀಮ್ ಇಂಡಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಟಿ ಟ್ವೆಂಟಿ ಪಂದ್ಯದಲ್ಲಿ ಜಯ ಸಾಧಿಸಿ ವೈಟ್ ವಾಶ್ ಮುಖಭಂಗದಿಂದ ಪಾರಾಗುವ ಉದ್ದೇಶದೊಂದಿಗೆ ಕಣಕ್ಕಿಳಿದಿದೆ.
ಹೀಗೆ ಟೀಮ್ ಇಂಡಿಯಾ ವಿರುದ್ಧದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದು, ಟೀಮ್ ಇಂಡಿಯಾಗೆ ಗೆಲ್ಲಲು 147 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕೇವಲ 28 ರನ್‌ಗಳಿಗೆ ತನ್ನ ಮೊದಲ 4 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತು. ಹೌದು, 8.3 ಓವರ್‌ಗಳಲ್ಲಿಯೇ ತನ್ನ ಮೊದಲ 4 ವಿಕೆಟ್‍ಗಳನ್ನು ಕಳೆದುಕೊಂಡ ಶ್ರೀಲಂಕಾ 100ರ ಗಡಿ ದಾಟುವುದು ಕಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗತೊಡಗಿದವು. ಶ್ರೀಲಂಕಾ ತಂಡದ ಆರಂಭಿಕ ಆಟಗಾರರಾದ ಪತುಮ್ ನಿಸಾಂಕ 1 ರನ್ ಗಳಿಸಿ ಔಟ್ ಆದರೆ, ಧನುಷ್ಕಾ ಗುಣತಿಲಕ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಚರಿತ ಅಸಲಂಕಾ 4 ರನ್ ಗಳಿಸಿದರು ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಯಂತ ಲಿಯಾನಾಗೆ 9 ರನ್ ಕಲೆ ಹಾಕಿದರು. ಹೀಗೆ ಮೊದಲ ನಾಲ್ಕರು ಆಟಗಾರರನ್ನು ವೇಗವಾಗಿ ಕಳೆದುಕೊಂಡ ಶ್ರೀಲಂಕಾ ತಂಡಕ್ಕೆ ಆಸರೆಯಾದದ್ದು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ದಶುನ್ ಶನಕ. ಹೌದು, 38 ಎಸೆತಗಳಲ್ಲಿ ಅಜೇಯ 74 ರನ್ ಚಚ್ಚಿದ ದಸುನ್ ಶನಕ 9 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು. ಈ ಮೂಲಕ 8.3 ಓವರ್‌ಗಳಲ್ಲಿ ಕೇವಲ 28 ರನ್ ಗಳಿಸಿದ್ದ ಶ್ರೀಲಂಕಾ ತಂಡ 20 ಓವರ್ ಮುಗಿಯುವ ಸಮಯಕ್ಕೆ 146 ರನ್‌ಗಳನ್ನು ತಲುಪುವಂತೆ ಮಾಡಿದರು. ಇನ್ನುಳಿದಂತೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಿನೇಶ್ ಚಾಂಡಿಮಲ್ 25 ರನ್ ಕಲೆಹಾಕಿದರೆ, 12 ರನ್ ಗಳಿಸಿದ ಚಮಿಕಾ ಕರುಣರತ್ನೆ ಅಜೇಯರಾಗಿ ಉಳಿದರು.
ಇನ್ನು ಟೀಮ್ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವೇಶ್ ಖಾನ್ 2 ವಿಕೆಟ್ ಪಡೆದು ತನ್ನ ಚೊಚ್ಚಲ ಪಂದ್ಯದಲ್ಲಿಯೇ ಮಿಂಚಿದರು. ಇನ್ನುಳಿದಂತೆ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಹಾಗೂ ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತ ಆಡುವ ಬಳಗ: ರೋಹಿತ್ ಶರ್ಮಾ(ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಅವೇಶ್ ಖಾನ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದನುಷ್ಕ ಗುಣತಿಲಕ, ಚರಿತ್ ಅಸಲಂಕ, ದಿನೇಶ್ ಚಂಡಿಮಲ್(ವಿಕೆಟ್ ಕೀಪರ್), ಜನಿತ್ ಲಿಯಾನಗೆ, ದಸುನ್ ಶನಕ(ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಜೆಫ್ರಿ ವಾಂಡರ್ಸೆ, ಬಿನೂರ ಫೆರ್ನಾಂಡೋ, ಲಹಿರು ಕುಮಾರ