ಭಾರತ vs ಶ್ರೀಲಂಕಾ: ಹರ್ಷಲ್ ಪಟೇಲ್ ಮೇಲೆ ಶನಕ ಅಬ್ಬರ; ಟೀಮ್ ಇಂಡಿಯಾಗೆ ಪೈಪೋಟಿಯುತ ಗುರಿ

ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯುತ್ತಿದೆ. ಇತ್ತ ಇತ್ತೀಚೆಗಷ್ಟೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಸರಣಿಗಳಲ್ಲಿಯೂ ಕೂಡ ವೈಟ್ ವಾಷ್ ಸಾಧನೆ ಮಾಡಿರುವ ಟೀಂ ಇಂಡಿಯಾ ಸದ್ಯ ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ಸಾಲು ಸಾಲು ಗೆಲುವುಗಳನ್ನು ಸಾಧಿಸಿರುವ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಮೊದಲಿಗೆ 3 ಪಂದ್ಯಗಳ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ.
ಇತ್ತಂಡಗಳ ನಡುವೆ ಟಿ ಟ್ವೆಂಟಿ ಸರಣಿಯ ಚೊಚ್ಚಲ ಪಂದ್ಯ ಫೆಬ್ರವರಿ 24ರ ಗುರುವಾರದಂದು ಲಕ್ನೋ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ 62 ರನ್‌ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿ ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿತು. ಹೀಗೆ ಟೀಮ್ ಇಂಡಿಯಾ ವಿರುದ್ಧದ ಚೊಚ್ಚಲ ಟಿ ಟ್ವೆಂಟಿ ಪಂದ್ಯದಲ್ಲಿ ಸೋತಿರುವ ಶ್ರೀಲಂಕಾ ಇಂದು ( ಫೆಬ್ರವರಿ 26 ) ಧರ್ಮಶಾಲಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡು ಶ್ರೀಲಂಕಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪತುಮ್ ನಿಸ್ಸಾಂಕ 75 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿ ಉತ್ತಮ ಆರಂಭವನ್ನು ಕಟ್ಟಿಕೊಟ್ಟರೆ, ಮತ್ತೋರ್ವ ಆರಂಭಿಕ ಆಟಗಾರ ಧನುಷ್ಕಾ ಗುಣತಿಲಕ 38 ರನ್ ಗಳಿಸಿದರು. ಹೀಗೆ ಶ್ರೀಲಂಕಾ ಉತ್ತಮ ಆರಂಭವನ್ನು ಪಡೆದುಕೊಂಡರೆ ಮಧ್ಯಮ ಕ್ರಮಾಂಕದ ಆಟಗಾರರು ಕೈಕೊಟ್ಟರು. ಚರಿತ ಅಸಲಂಕಾ 2, ಕಮಿಲ್ ಮಿಶರಾ 1 ಮತ್ತು ದಿನೇಶ್ ಚಂಡಿಮಾಲ್ 9 ರನ್ ಕಲೆ ಹಾಕಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ದಸುನ್ ಶನಕ 19 ಎಸೆತಗಳಲ್ಲಿ 47 ರನ್ ಚಚ್ಚುವುದರ ಮೂಲಕ ಟೀಮ್ ಇಂಡಿಯಾಗೆ ಪೈಪೋಟಿಯುತ ಗುರಿಯನ್ನು ನೀಡುವಲ್ಲಿ ಯಶಸ್ವಿಯಾದರು. ಒಟ್ಟಾರೆಯಾಗಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿದ ಶ್ರೀಲಂಕಾ ಟೀಮ್ ಇಂಡಿಯಾಗೆ ಗೆಲ್ಲಲು 184 ರನ್‌ಗಳ ಗುರಿ ನೀಡಿದೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜಾ ಈ ಐವರು ಬೌಲರ್‌ಗಳು ಬೌಲಿಂಗ್ ಮಾಡಿದ್ದು ಎಲ್ಲಾ ಆಟಗಾರರೂ ಸಹ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಈ ಪೈಕಿ ಜಸ್ಪ್ರೀತ್ ಬುಮ್ರಾ 6ರ ಎಕಾನಮಿಯಲ್ಲಿ 24 ರನ್ ನೀಡಿದರೆ, ಹರ್ಷಲ್ ಪಟೇಲ್ 4 ಓವರ್ ಬೌಲಿಂಗ್ ಮಾಡಿ 52 ರನ್ ನೀಡಿ ಸಿಕ್ಕಾಪಟ್ಟೆ ದುಬಾರಿಯಾದರು. ಅದರಲ್ಲಿಯೂ ಅಂತಿಮ ಓವರ್ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ ಆ ಒಂದು ಓವರ್‌ನಲ್ಲಿಯೇ ಒಂದು ವೈಡ್ ಸಹಿತ 23 ರನ್ ನೀಡಿದರು. ಶ್ರೀಲಂಕಾದ ನಾಯಕ ದಸುನ್ ಶನಕ ಹರ್ಷಲ್ ಪಟೇಲ್ ಅಂತಿಮ ಓವರ್‌ನಲ್ಲಿ 2 ಬೌಂಡರಿ ಮತ್ತು 2 ಸ್ಫೋಟಕ ಸಿಕ್ಸರ್ ಚಚ್ಚಿದರು.
ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ, ಚರಿತ್ ಅಸಲಂಕ, ದನುಷ್ಕ ಗುಣತಿಲಕ, ದಿನೇಶ್ ಚಂಡಿಮಲ್(ವಿಕೆಟ್ ಕೀಪರ್), ದಸುನ್ ಶನಕ(ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಪ್ರವೀಣ್ ಜಯವಿಕ್ರಮ, ಬಿನೂರ ಫೆರ್ನಾಂಡೋ, ಲಹಿರು ಕುಮಾರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications