For Quick Alerts
ALLOW NOTIFICATIONS  
For Daily Alerts
 

ಶ್ರೇಯಸ್ - ಜಡೇಜಾ ಅಬ್ಬರ: ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ20 ಗೆದ್ದು ಸರಣಿ ವಶಪಡಿಸಿಕೊಂಡ ಭಾರತ

IND vs SL: Team India won by 7 wickets against Sri Lanka in the second T20

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಸದ್ಯ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆಯುತ್ತಿದ್ದು, ಟೀಮ್ ಇಂಡಿಯಾ 2-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹೌದು, ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದ್ದು, ಮೊದಲಿಗೆ ಟಿ ಟ್ವೆಂಟಿ ಸರಣಿಯಲ್ಲಿ ಸೋಲನ್ನು ಅನುಭವಿಸಿದೆ. ಇತ್ತ ಇದಕ್ಕೂ ಮುನ್ನ ಭಾರತ ಪ್ರವಾಸವನ್ನು ಕೈಗೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ವೈಟ್ ವಾಷ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧವೂ ಸಹ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.

ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಈ ಟಿ ಟ್ವೆಂಟಿ ಸರಣಿಯ ಚೊಚ್ಚಲ ಪಂದ್ಯದಲ್ಲಿ 62 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಮುನ್ನಡೆಯನ್ನು ಕಾಯ್ದುಕೊಂಡಿದ್ದ ಟೀಮ್ ಇಂಡಿಯಾ ಇಂದು ( ಫೆಬ್ರವರಿ 26 ) ಧರ್ಮಶಾಲಾದ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಎದುರಾಳಿ ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪತುಮ್ ನಿಸ್ಸಾಂಕ 75 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿ ಉತ್ತಮ ಆರಂಭವನ್ನು ಕಟ್ಟಿಕೊಟ್ಟರೆ, ಮತ್ತೋರ್ವ ಆರಂಭಿಕ ಆಟಗಾರ ಧನುಷ್ಕಾ ಗುಣತಿಲಕ 38 ರನ್ ಗಳಿಸಿದರು. ಹೀಗೆ ಶ್ರೀಲಂಕಾ ಉತ್ತಮ ಆರಂಭವನ್ನು ಪಡೆದುಕೊಂಡರೆ ಮಧ್ಯಮ ಕ್ರಮಾಂಕದ ಆಟಗಾರರು ಕೈಕೊಟ್ಟರು. ಚರಿತ ಅಸಲಂಕಾ 2, ಕಮಿಲ್ ಮಿಶರಾ 1 ಮತ್ತು ದಿನೇಶ್ ಚಂಡಿಮಾಲ್ 9 ರನ್ ಕಲೆ ಹಾಕಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ದಸುನ್ ಶನಕ 19 ಎಸೆತಗಳಲ್ಲಿ 47 ರನ್ ಚಚ್ಚುವುದರ ಮೂಲಕ ಟೀಮ್ ಇಂಡಿಯಾಗೆ ಪೈಪೋಟಿಯುತ ಗುರಿಯನ್ನು ನೀಡುವಲ್ಲಿ ಯಶಸ್ವಿಯಾದರು. ಒಟ್ಟಾರೆಯಾಗಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿದ ಶ್ರೀಲಂಕಾ ಟೀಮ್ ಇಂಡಿಯಾಗೆ ಗೆಲ್ಲಲು 184 ರನ್‌ಗಳ ಗುರಿ ನೀಡಿತು.

ಇನ್ನು ಕಳೆದ ಪಂದ್ಯಕ್ಕೆ ಹೋಲಿಸಿದರೆ ಈ ಪಂದ್ಯದಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಿದ ಶ್ರೀಲಂಕಾ ಬೌಲಿಂಗ್‌ನಲ್ಲಿ ಪೈಪೋಟಿ ನೀಡಲಿದೆ ಎಂದು ಊಹಿಸಲಾಗಿತ್ತು. ಅದರಂತೆ ಟೀಮ್ ಇಂಡಿಯಾ ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಅವರನ್ನು ವೇಗವಾಗಿ ಪೆವಿಲಿಯನ್ ಕಡೆಗೆ ಕಳುಹಿಸಿದ ಶ್ರೀಲಂಕಾ ಬೌಲಿಂಗ್ ಪಡೆ ನಂತರ ಮಂಕಾಯಿತು. ಹೌದು, ರೋಹಿತ್ ಶರ್ಮಾ 1 ರನ್ ಗಳಿಸಿ ಔಟ್ ಆದರೆ, ಇಶಾನ್ ಕಿಶನ್ 16 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ 44 ಎಸೆತಗಳಲ್ಲಿ 74 ರನ್ ಬಾರಿಸಿ ಅಜೇಯರಾಗಿ ಉಳಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 25 ಎಸೆತಗಳಲ್ಲಿ 39 ರನ್ ಬಾರಿಸಿದರೆ, ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ 18 ಎಸೆತಗಳಲ್ಲಿ ಅಜೇಯ 45 ರನ್ ಕಲೆ ಹಾಕಿದರು. ಈ ಮೂಲಕ ಭಾರತ 17.1 ಓವರ್‌ಗಳಲ್ಲಿಯೇ 186 ರನ್ ಬಾರಿಸುವುದರ ಮೂಲಕ ಇನ್ನೂ 17 ಎಸೆತಗಳು ಬಾಕಿ ಇರುವಾಗಲೇ ವಿಜಯ ಪತಾಕೆಯನ್ನು ಹಾರಿಸಿತು. ಹೀಗೆ ಈ ಪಂದ್ಯದಲ್ಲಿ 7 ವಿಕೆಟ್‍ಗಳ ಜಯ ಸಾಧಿಸಿದ ಟೀಮ್ ಇಂಡಿಯಾ ಸರಣಿಯನ್ನು ಕೈವಶ ಮಾಡಿಕೊಂಡು ಮತ್ತೊಂದು ಸರಣಿಯಲ್ಲಿ ವೈಟ್ ವಾಷ್ ಸಾಧನೆ ಮಾಡುವ ಸನಿಹದಲ್ಲಿದೆ. ಹಾಗೂ ಶ್ರೀಲಂಕಾ ವಿರುದ್ಧದ ಈ ಗೆಲುವು ಟೀಮ್ ಇಂಡಿಯಾದ ಸತತ 11ನೇ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಗೆಲುವಾಗಿದೆ.

ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್

ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ, ಚರಿತ್ ಅಸಲಂಕ, ದನುಷ್ಕ ಗುಣತಿಲಕ, ದಿನೇಶ್ ಚಂಡಿಮಲ್(ವಿಕೆಟ್ ಕೀಪರ್), ದಸುನ್ ಶನಕ(ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಪ್ರವೀಣ್ ಜಯವಿಕ್ರಮ, ಬಿನೂರ ಫೆರ್ನಾಂಡೋ, ಲಹಿರು ಕುಮಾರ

Story first published: Saturday, February 26, 2022, 22:51 [IST]
Other articles published on Feb 26, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+