ವಿಶ್ವಕಪ್ ಟೂರ್ನಿ ಸನಿಹದಲ್ಲಿರುವ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅರ್ಥವಿಲ್ಲದ ಪ್ರಯೋಗ ಮುಂದುವರಿದಿದೆ. ಈ ಹಂತದಲ್ಲಿ ಇದಕ್ಕೆ ಸರಿಯಾದ ಬೆಲೆಯನ್ನೇ ಭಾರತ ತೆರುವಂತಾಗಿದ್ದು ವೆಸ್ಟ್ ಇಂಡಿಸ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯವನ್ನು ಭಾರತ ಭಾರೀ ಅಂತರದಿಂದ ಕಳೆದುಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಸಂಪೂರ್ಣ ವೈಫಲ್ಯ ಕಂಡ ಭಾರತ 6 ವಿಕೆಟ್‌ಗಳ ಅಂತರದ ಸೋಲು ಕಂಡಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಿಂದ ಹೊರಗುಳಿದಿದ್ದರೆ ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ ಈ ಪ್ರಯೋಗ ಯಶಸ್ಸು ನೀಡಲಿಲ್ಲ.

ಟೀಮ್ ಇಂಡಿಯಾ ಪರವಾಗಿ ಈ ಪಂದ್ಯದಲ್ಲಿಯೂ ಬ್ಯಾಟಿಂಗ್‌ನಲ್ಲಿ ಮಿಂಚಿದ್ದು ಇಶಾನ್ ಕಿಶನ್ ಹಾಗೂ ಶುಬ್ಮನ್ ಗಿಲ್ ಮಾತ್ರ. ಮೊದಲ ವಿಕೆಟ್‌ಗೆ ಈ ಜೋಡಿ 90 ರನ್‌ಗಳ ಅದ್ಭುತ ಜೊತೆಯಾಟವನ್ನೇ ನೀಡಿತ್ತು. ಆದರೆ ಅದಾದ ಬಳಿಕ ಅನುಭವಿಸಿದ್ದು ಭಾರೀ ದೊಡ್ಡ ಕುಸಿತ. ಬಹಳ ಸಮಯದ ಬಳಿಕ ಮತ್ತೆ ತಂಡದಲ್ಲಿ ಅವಕಾಶ ಪಡೆದುಕೊಂಡ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿಯೂ ಅವಕಾಶವನ್ನು ಬಾಚಿಕೊಳ್ಳುವಲ್ಲಿ ವಿಫಲವಾದರು. ಕೇವಲ 9 ರನ್‌ಗೆ ವಿಕೆಟ್ ಕಳೆದುಕೊಂಡರು.
ಉಳಿದೆಲ್ಲಾ ಬ್ಯಾಟರ್‌ಗಳು ಕೂಡ ನೀರದ ಪ್ರದರ್ಶನ ನೀಡಿದ ಕಾರಣ ಮುಂದಿನ 91 ರನ್‌ಗಳಿಸುವಷ್ಟರಲ್ಲಿ ಭಾರತ ಉಳಿದ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಭಾರತ 181 ರನ್‌ಗಳಿಗೆ ಆಲೌಟ್ ಆಗಿದ್ದು ವಿಂಡೀಸ್ ಪಡೆಗೆ ಸುಲಭ ಗುರಿಯನ್ನು ನಿಗದಿಪಡಿಸಿತು. ನಂಯತರ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆ ಮೂಡಿಸಿತ್ತು.
ಆದರೆ ಬೌಲಿಂಗ್‌ನಲ್ಲಿಯೂ ಕಳೆದ ಪಂದ್ಯದ ರೀತಿಯ ಯಶಸ್ಸು ಪಡೆಯಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಅಲ್ಪ ಮೊತ್ತದ ಗುರಿ ಮುಂದಿದ್ದ ಕಾರಣ ವಿಂಡೀಸ್ ಪಡೆ ಈ ಪಂದ್ಯದಲ್ಲಿ ಎಚ್ಚರಿಕೆಯಿಂದ ಪ್ರದರ್ಶನ ನೀಡಿ ಯಶಸ್ಸು ಸಾಧಿಸಿದೆ. ಕೈಲ್ ಮೇಯರ್ಸ್ 36 ರನ್‌ಗಳಿಸಿದರೆ ನಾಯಕ ಶಾಯ್ ಹೋಪ್ ಅಜೇಯ 63 ಹಾಗೂ ಕೆಸಿ ಕರ್ಟಿ ಅಜೇಯ 48 ರನ್‌ಗಳಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡ ಭಾರತ ನೀಡಿದ ಗುರಿಯನ್ನು 4 ವಿಕೆಟ್ ಕಳೆದುಕೊಂಡು ಇನ್ನೂ 15 ಓವರ್‌ಗಳು ಬಾಕಿಯಿರುವಂತೆಯೇ ಗೆದ್ದು ಬೀಗಿದೆ.
ಮೊದಲ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಗೆದ್ದಿದ್ದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ದೊಡ್ಡ ಅಂತರದ ಸೋಲು ಅನುಭವಿಸಿದೆ. ಹೀಗಾಗಿ ಮೂಲಕ ಪಂದ್ಯಗಳ ಏಕದಿನ ಸರಣಿ ಈಗ 1-1 ಅಂತರದಿಂದ ಸಮಬಲಗೊಂಡಿದೆ. ಹೀಗಾಗಿ ಸರಣಿಯ ಅಂತಿಮ ಪಂದ್ಯ ನಿರ್ಣಾಯಕವೆನಿಸಿದೆ.
ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶಾಯ್ ಹೋಪ್ (ಸಿ & ಡಬ್ಲ್ಯೂಕೆ), ಶಿಮ್ರಾನ್ ಹೆಟ್ಮೆಯರ್, ಕೀಸಿ ಕಾರ್ಟಿ, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್
ಬೆಂಚ್: ಓಶೇನ್ ಥಾಮಸ್, ಕೆವಿನ್ ಸಿಂಕ್ಲೇರ್, ರೋವ್ಮನ್ ಪೊವೆಲ್, ಡೊಮಿನಿಕ್ ಡ್ರೇಕ್ಸ್
ಶುಭಮನ್ ಗಿಲ್, ಇಶಾನ್ ಕಿಶನ್ (wk), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (c), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್
ಬೆಂಚ್: ಯುಜ್ವೇಂದ್ರ ಚಹಾಲ್, ಜಯದೇವ್ ಉನದ್ಕತ್, ರುತುರಾಜ್ ಗಾಯಕ್ವಾಡ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ