IND vs WI 2nd Test: ಮಿಂಚಿದ ಸಿರಾಜ್, ರೋಹಿತ್, ಇಶಾನ್; ಕೊನೆಯ ದಿನ ಭಾರತದ ಗೆಲುವಿಗೆ ಬೇಕು 8 ವಿಕೆಟ್
ಭಾನುವಾರ, ಜುಲೈ 23ರಂದು ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ 4ನೇ ದಿನದಂದು ಪ್ರವಾಸಿ ಭಾರತ ತಂಡ ಆಲ್‌ರೌಂಡ್ ಪ್ರದರ್ಶನ ನೀಡಿದ್ದು, 2ನೇ ಟೆಸ್ಟ್‌ನಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.
ಭಾರತದ 438 ರನ್‌ಗಳಿಗೆ ಪ್ರತ್ಯುತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡ 255 ರನ್‌ಗಳಿಗೆ ಸರ್ವಪತನ ಕಂಡಿತು. ಮೂರನೇ ದಿನದಾಟದಂತ್ಯಕ್ಕೆ ವೆಸ್ಟ್ ಇಂಡೀಸ್ 5 ವಿಕೆಟ್‌ಗೆ 229 ರನ್ ಗಳಿಸಿತ್ತು. ಆದರೆ, ನಾಲ್ಕನೇ ದಿನದಾಟದ ಆರಂಭಿಸಿ ಕೇವಲ 26 ರನ್‌ಗಳಿಗೆ ಉಳಿದ 5 ವಿಕೆಟ್ ಕಳೆದುಕೊಂಡಿತು.

ಭಾರತದ ವೇಗಿ ಮೊಹಮ್ಮದ್ ಸಿರಾಜ್ 23.1 ಓವರ್‌ಗಳಲ್ಲಿ 60 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದರೆ, ರವೀಂದ್ರ ಜಡೇಜಾ 25 ಓವರ್‌ಗಳಲ್ಲಿ 37 ರನ್ ನೀಡಿ 2 ವಿಕೆಟ್, ಮುಖೇಶ್ ಕುಮಾರ್ 18 ಓವರ್‌ಗಳಲ್ಲಿ 48 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ರವಿಚಂದ್ರನ್ ಅಶ್ವಿನ್ 1 ವಿಕೆಟ್ ಕಿತ್ತರು.
ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗಳ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಬಜ್‌ಬಾಲ್ ರೀತಿ ಬ್ಯಾಟಿಂಗ್ ಪ್ರದರ್ಶಿಸಿತು. ಕೇವಲ 24 ಓವರ್‌ಗಳಲ್ಲಿ 2 ವಿಕೆಟ್‌ಗೆ 181 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡು, ಆತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ 365 ರನ್‌ಗಳ ಗುರಿ ನೀಡಿತು.
ಭಾರತ ತಂಡದ ಪರ ಯಶಸ್ವಿ ಜೈಸ್ವಾಲ್ 30 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 38 ರನ್ ಗಳಿಸಿ ಔಟಾದರೆ, ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು. ಇನ್ನು ಶುಭ್ಮನ್ ಗಿಲ್ 29 ರನ್ ಮತ್ತು ಇಶಾನ್ ಕಿಶನ್ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 52 ರನ್ ಚಚ್ಚಿದರು.

ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಕ್ರಮವಾಗಿ 35 ಮತ್ತು 33 ಎಸೆತಗಳಲ್ಲಿ ತಮ್ಮ ವೇಗದ ಅರ್ಧಶತಕಗಳನ್ನು ಬಾರಿಸಿದರು.
365 ರನ್‌ಗಳ ಗುರಿ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್ ತಂಡ ನಾಲ್ಕನೇ ದಿನದಾಟದಂತ್ಯಕ್ಕೆ 32 ಓವರ್‌ಗಳಲ್ಲಿ 2 ವಿಕೆಟ್‌ಗೆ 76 ರನ್ ಗಳಿಸಿದೆ. ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ವೆಸ್ಟ್ ಇಂಡೀಸ್ ನಾಯಕ ಕ್ರೇಗ್ ಬ್ರಾಥ್‌ವೈಟ್ ಮತ್ತು ಕಿರ್ಕ್ ಮೆಕೆಂಜಿ ವಿಕೆಟ್ ಪಡೆದರು.
ಸದ್ಯ ಐದನೇ ದಿನದಾಟಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡದ ಟಗೆನರೈನ್ ಚಂದ್ರಪಾಲ್ 24 ರನ್ ಮತ್ತು ಜೆರ್ಮೈನ್ ಬ್ಲಾಕ್‌ವುಡ್ 20 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.
ಆರ್. ಅಶ್ವಿನ್ ಅವರು ಕಿರ್ಕ್ ಮೆಕೆಂಜಿ ವಿಕೆಟ್ ಪಡೆಯುತ್ತಿದ್ದಂತೆ ಅಶ್ವಿನ್ ಮತ್ತು ರವೀಂದ್ರ ಜಡೇಜಾಗೆ ಟೆಸ್ಟ್‌ನಲ್ಲಿ ಜೋಡಿಯಾಗಿ 500ನೇ ವಿಕೆಟ್ ಮೈಲುಗಲ್ಲು ಸಾಧಿಸಿದರು. ಇನ್ನು ಪ್ರವಾಸಿ ಭಾರತ ತಂಡವು 2-0 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಬಯಸಿದ್ದು, ಗೆಲುವಿಗೆ 8 ವಿಕೆಟ್‌ಗಳ ಅವಶ್ಯಕತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications