ಭಾರತ vs ವಿಂಡೀಸ್: ವಿರಾಟ್ ಕೊಹ್ಲಿ ಸ್ಥಾನ ಕಬಳಿಸಲು ಈ ಮೂವರ ನಡುವೆ ಪೈಪೋಟಿ!

ವಿರಾಟ್ ಕೊಹ್ಲಿ ಕಿಂಗ್ ಆಫ್ ಕ್ರಿಕೆಟ್ ಎಂದೇ ಖ್ಯಾತಿಯನ್ನು ಪಡೆದಿರುವಂತ ಆಟಗಾರ. ತನ್ನ ಅತ್ಯದ್ಭುತ ಬ್ಯಾಟಿಂಗ್ ಮೂಲಕ ಈಗಾಗಲೇ ಹಲವಾರು ದಾಖಲೆಗಳನ್ನು ಸೃಷ್ಟಿ ಮಾಡಿರುವ ಕೊಹ್ಲಿ ಸಕ್ರಿಯ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಹಾಗೂ ಶತಕ ಬಾರಿಸಿರುವ ಆಟಗಾರ ಎಂಬ ಖ್ಯಾತಿಯನ್ನು ಹೊಂದಿದ್ದಾರೆ.
ಆದರೆ ಕಳೆದೆರಡು ವರ್ಷಗಳಿಂದ ಕಳಪೆ ಫಾರ್ಮ್ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿಯೂ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಪೈಕಿ 31 ರನ್ ಕಲೆ ಹಾಕಿದ ವಿರಾಟ್ ಕೊಹ್ಲಿ ಟಿ ಟ್ವೆಂಟಿ ಸರಣಿಯಲ್ಲಿ 2 ಪಂದ್ಯಗಳನ್ನಾಡಿ ಕೇವಲ 12 ರನ್ ಬಾರಿಸಿದ್ದರು ಮತ್ತು ಇಂಗ್ಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಿಂದ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಕೊಹ್ಲಿ ಅಂತಿಮ 2 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 16 ಮತ್ತು 17 ರನ್ ಕಲೆ ಹಾಕಿದರು.
ಹೀಗೆ ಇಂಗ್ಲೆಂಡ್ ಪ್ರವಾಸದಲ್ಲಿ ಸಂಪೂರ್ಣವಾಗಿ ನೆಲ ಕಚ್ಚಿರುವ ವಿರಾಟ್ ಕೊಹ್ಲಿ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ವಿರಾಟ್ ಕೋಹ್ಲಿ ಅಲಭ್ಯತೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಹಾಗೂ ಟಿ ಟ್ವೆಂಟಿ ಸರಣಿಗಳಲ್ಲಿ ಕೊಹ್ಲಿ ಕಣಕ್ಕಿಳಿಯುತ್ತಿದ್ದ ಮೂರನೇ ಕ್ರಮಾಂಕವನ್ನು ಯಾವ ಆಟಗಾರ ತುಂಬಬಹುದು ಎಂಬ ಚರ್ಚೆ ಇದೀಗ ಆರಂಭವಾಗಿದೆ. ವಿಂಡೀಸ್ ವಿರುದ್ಧದ ಸರಣಿಗಳಲ್ಲಿ ಕೊಹ್ಲಿ ಬದಲಾಗಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಪ್ರಸ್ತುತ ಟೀಮ್ ಇಂಡಿಯಾದಲ್ಲಿರುವ ಈ ಕೆಳಕಂಡ ಮೂವರು ಆಟಗಾರರ ಹೆಸರು ಕೇಳಿ ಬರುತ್ತಿದೆ.

1. ಸೂರ್ಯಕುಮಾರ್ ಯಾದವ್
ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ಕೆಲ ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿರುವ ಸೂರ್ಯಕುಮಾರ್ ಯಾದವ್ ಕೊಹ್ಲಿ ಅಲಭ್ಯತೆಯಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ಪ್ರವಾಸದ ಟಿ ಟ್ವೆಂಟಿ ಸರಣಿಯಲ್ಲಿ ಅಬ್ಬರಿಸಿದ್ದ ಸೂರ್ಯಕುಮಾರ್ ಯಾದವ್ ಏಕದಿನ ಸರಣಿಯ 2 ಪಂದ್ಯಗಳಲ್ಲಿ ಬ್ಯಾಟ್ ಬೀಸುವ ಅವಕಾಶವನ್ನು ಪಡೆದುಕೊಂಡು ಕ್ರಮವಾಗಿ 27 ಮತ್ತು 16 ರನ್‌ಗಳನ್ನು ಬಾರಿಸಿದ್ದರು. ಇಲ್ಲಿಯವರೆಗೂ ಕೇವಲ 10 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಸೂರ್ಯಕುಮಾರ್ ಯಾದವ್ ಮತ್ತಷ್ಟು ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡರೆ ಕೋಹ್ಲಿ ಅಲಭ್ಯತೆಯಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಉತ್ತಮವಾಗಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯವನ್ನು ಹೊಂದಲಿದ್ದಾರೆ. ಸೂರ್ಯಕುಮಾರ್ ಯಾದವ್ ಕಳೆದ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 83 ಎಸೆತಗಳಲ್ಲಿ 64 ರನ್ ಕಲೆಹಾಕಿದ್ದರು ಹಾಗೂ ಇದು ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್‍ನಲ್ಲಿ ಕಲೆಹಾಕಿರುವ ಗರಿಷ್ಠ ರನ್ ಆಗಿದೆ.

2. ದೀಪಕ್ ಹೂಡಾ
ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಭರ್ಜರಿ ವೈಟ್ ವಾಶ್ ಸಾಧನೆ ಮಾಡಿದ್ದರ ಹಿಂದೆ ದೀಪಕ್ ಹೂಡಾ ಕೂಡ ಕೊಡುಗೆ ದೊಡ್ಡ ಮಟ್ಟದ್ದು ಎನ್ನಬಹುದು. ಐರ್ಲೆಂಡ್ ವಿರುದ್ಧದ ಪ್ರಥಮ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ದೀಪಕ್ ಹೂಡಾ ದ್ವಿತೀಯ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಇನ್ನು ತನ್ನ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೂ ಕೇವಲ ಎರಡೇ ಎರಡು ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ದೀಪಕ್ ಹೂಡಾ ಕಳೆದ ಫೆಬ್ರವರಿ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಪ್ರಥಮ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು. ವಿಂಡೀಸ್ ವಿರುದ್ಧದ ಪ್ರಥಮ ಪಂದ್ಯದಲ್ಲಿ 32 ಎಸೆತಗಳಲ್ಲಿ ಅಜೇಯ 26 ರನ್ ಕಲೆಹಾಕಿದ್ದ ದೀಪಕ್ ಹೂಡಾ ದ್ವಿತೀಯ ಏಕದಿನ ಪಂದ್ಯದಲ್ಲಿ 25 ಎಸೆತಗಳಲ್ಲಿ 29 ರನ್ ಬಾರಿಸಿದ್ದರು. ಹೀಗೆ ಏಕದಿನ ಕ್ರಿಕೆಟ್‍ನಲ್ಲಿ ಗುರುತಿಸಿಕೊಳ್ಳುವಂತಹ ಪ್ರದರ್ಶನ ನೀಡದೆ ಇದ್ದರೂ ದೀಪಕ್ ಹೂಡಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಹಲವು ಚುಟುಕು ಪಂದ್ಯಗಳಲ್ಲಿ ಅಬ್ಬರಿಸಿದ್ದಾರೆ. ಹೀಗಾಗಿ ಹೂಡಾ ವಿರಾಟ್ ಕೊಹ್ಲಿ ಸ್ಥಾನವನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ತುಂಬುವ ಸಾಮರ್ಥ್ಯ ಹೊಂದಿದ್ದಾರೆ.

3. ಶುಬ್ ಮನ್ ಗಿಲ್
ವಿರಾಟ್ ಕೊಹ್ಲಿ ಬದಲು ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಮರ್ಥ್ಯವಿರುವ ಆಟಗಾರರಲ್ಲಿ ಶುಬ್ ಮನ್ ಗಿಲ್ ಕೂಡ ಓರ್ವರು. ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚಾಗಿ ಕಣಕ್ಕಿಳಿದಿರುವ ಶುಬ್ ಮನ್ ಗಿಲ್ ಇನ್ನೂ ಸಹ ಟಿ ಟ್ವೆಂಟಿ ಕ್ರಿಕೆಟ್‍ಗೆ ಪದಾರ್ಪಣೆ ಮಾಡಬೇಕಿದೆ. ಒಟ್ಟಾರೆ 3 ಏಕದಿನ ಪಂದ್ಯಗಳನ್ನಾಡಿರುವ ಶುಬ್ಮನ್ ಗಿಲ್ ಕೊನೆಯದಾಗಿ ಏಕದಿನ ಪಂದ್ಯವನ್ನಾಡಿದ್ದು 2020ರ ಡಿಸೆಂಬರ್ ತಿಂಗಳಿನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ. ಆ ಪಂದ್ಯದಲ್ಲಿ ಗಿಲ್ ಬಾರಿಸಿದ್ದ 33 ರನ್ ಆತನ ಕ್ರಿಕೆಟ್ ವೃತ್ತಿಜೀವನದ ಅತ್ಯಧಿಕ ಏಕದಿನ ರನ್ ಆಗಿದೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯ ಚಾಂಪಿಯನ್ ಗುಜರಾತ್ ಟೈಟನ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಗಿಲ್ 132.32ರ ಸ್ಟ್ರೈಕ್ ರೇಟ್ ಜತೆ 483 ರನ್ ಕಲೆ ಹಾಕಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications