ICC T20 Rankings: ಸೂರ್ಯಕುಮಾರ್ ಬಾಬರ್ ಹಿಂದಿಕ್ಕಿ ನಂ.1 ಆಗಲು 4ನೇ ಟಿ20ಯಲ್ಲಿ ಇಷ್ಟು ರನ್ ಗಳಿಸಿದರೆ ಸಾಕು!

ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದ ಭಾರತ ತಂಡ ಕೆರಿಬಿಯನ್ನರ ವಿರುದ್ಧ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳಲ್ಲಿ ಸೆಣಸಾಟ ನಡೆಸಿದೆ. ಏಕದಿನ ಸರಣಿಯಲ್ಲಿ ವೈಟ್ ವಾಷ್ ಸಾಧನೆ ಮಾಡಿದ ನಂತರ ಇದೀಗ ಟಿ ಟ್ವೆಂಟಿ ಸರಣಿಯಲ್ಲಿ ಕೆರಿಬಿಯನ್ನರ ವಿರುದ್ಧ ಭಾರತ ಸೆಣಸಾಡುತ್ತಿದೆ. 5 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಮೊದಲ 3 ಪಂದ್ಯಗಳು ವೆಸ್ಟ್ ಇಂಡೀಸ್ ನೆಲದಲ್ಲಿ ನಡೆದರೆ ಕೊನೆಯ 2 ಪಂದ್ಯಗಳು ಯುಎಸ್ ನೆಲದಲ್ಲಿ ನಡೆಯುತ್ತಿವೆ.
ಹೌದು, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರನೇ ಹಾಗೂ ನಾಲ್ಕನೇ ಟಿ ಟ್ವೆಂಟಿ ಪಂದ್ಯಗಳು ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಎರಡೂ ತಂಡಗಳು ಸಹ ಯುಎಸ್ ವೀಸಾ ಪಡೆದು ಇದೀಗ ಪಂದ್ಯ ನಡೆಯಲಿರುವ ತಾಣವನ್ನು ತಲುಪಿದ್ದು ಇಂದು ( ಆಗಸ್ಟ್ 6 ) ನಡೆಯಲಿರುವ ನಾಲ್ಕನೇ ಟಿ ಟ್ವೆಂಟಿ ಪಂದ್ಯಕ್ಕಾಗಿ ತಾಲೀಮು ನಡೆಸುತ್ತಿವೆ. ಈಗಾಗಲೇ ಸರಣಿಯಲ್ಲಿ 2-1 ಅಂತರದ ಮುನ್ನಡೆಯನ್ನು ಸಾಧಿಸಿರುವ ಟೀಮ್ ಇಂಡಿಯಾ ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಕಣ್ಣಿಟ್ಟಿದ್ದರೆ, ವೆಸ್ಟ್ ಇಂಡೀಸ್ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿ ಅಂತಿಮ ಪಂದ್ಯವನ್ನು ನಿರ್ಣಾಯಕ ಪಂದ್ಯವನ್ನಾಗಿ ಮಾಡುವತ್ತ ಚಿತ್ತ ನೆಟ್ಟಿದೆ.
ಇನ್ನು ಈ ನಾಲ್ಕನೇ ಟಿ ಟ್ವೆಂಟಿ ಪಂದ್ಯ ಭಾರತ ತಂಡದ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಅವರಿಗೆ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯ ನಂಬರ್ 1 ಬ್ಯಾಟ್ಸ್‌ಮನ್ ಪಟ್ಟಕ್ಕೇರಲು ಸಿಕ್ಕಿರುವ ವೇದಿಕೆಯಾಗಿದೆ. ಹೌದು, ಸದ್ಯ ಐಸಿಸಿ ಟಿ ಟ್ವೆಂಟಿ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ದ್ವಿತೀಯ ಸ್ಥಾನದಲ್ಲಿದ್ದು, ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅಗ್ರಸ್ಥಾನದಲ್ಲಿದ್ದಾರೆ. ಬಾಬರ್ ಅಜಮ್ ಅವರಿಗಿಂತ ಕೆಲವೇ ಅಂಕಗಳಷ್ಟು ಹಿಂದಿರುವ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನಕ್ಕೇರಲು ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ಎಷ್ಟು ರನ್ ಗಳಿಸಬೇಕು ಎಂಬುದರ ಮಾಹಿತಿ ಕೆಳಕಂಡಂತಿದೆ.

ಬಾಬರ್ ಅಜಮ್ ಹಿಂದಿಕ್ಕಲು ಸೂರ್ಯಕುಮಾರ್ ಯಾದವ್ ಎಷ್ಟು ರನ್ ಗಳಿಸಬೇಕು?
ಸದ್ಯ ಟಿಟ್ವೆಂಟಿ ಶ್ರೇಯಾಂಕ ಪಟ್ಟಿಯಲ್ಲಿ ಬಾಬರ್ ಅಜಮ್ 818 ಅಂಕಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್ 816 ಅಂಕಗಳನ್ನು ಪಡೆದು ಕೇವಲ ಎರಡೇ ಅಂಕಗಳ ಅಂತರದಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ 50 ರನ್ ಬಾರಿಸಿದರೆ ಹೆಚ್ಚು ಅಂಕಗಳನ್ನು ಪಡೆಯುವುದರ ಮೂಲಕ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ.

ಭಾರತ ಸಂಕಷ್ಟಕ್ಕೆ ಸಿಲುಕಿದ್ದಾಗ ಅಬ್ಬರದ ಇನಿಂಗ್ಸ್ ಆಡಿದರೂ ಸಾಕು
ಇನ್ನು ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸದೇ ಇದ್ದರೂ ಅಗ್ರಸ್ಥಾನಕ್ಕೇರುವ ಸಾಧ್ಯತೆಗಳಿವೆ. ಟೀಮ್ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿತ ಕಂಡು ಸೂರ್ಯಕುಮಾರ್ ಯಾದವ್ 30 ಎಸೆತಗಳಲ್ಲಿ 40 ರನ್ ಬಾರಿಸಿದರೆ ಅಥವಾ ತಂಡ ಚೇಸ್ ಮಾಡಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರೆ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ.

ಈ ಪಂದ್ಯ ಕೈ ತಪ್ಪಿದರೆ ಇನ್ನೂ ಇದೆ ಅವಕಾಶ!
ಒಂದುವೇಳೆ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಅಗತ್ಯವಿರುವ ರನ್ ಬಾರಿಸಲು ವಿಫಲವಾದರೆ ಐದನೇ ಟಿ ಟ್ವೆಂಟಿ ಪಂದ್ಯದಲ್ಲಿಯೂ ಸಹ ಬಾಬರ್ ಅಜಮ್ ಅವರನ್ನು ಹಿಂದಿಕ್ಕಲು ಅವಕಾಶ ಲಭಿಸಲಿದೆ. ಅತ್ತ ಅಗ್ರಸ್ಥಾನದಲ್ಲಿರುವ ಬಾಬರ್ ಅಜಮ್ ಮುಂಬರುವ ಏಷ್ಯಾ ಕಪ್ ಟೂರ್ನಿಯವರೆಗೂ ಯಾವುದೇ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯದ ಕಾರಣ ಸೂರ್ಯಕುಮಾರ್ ಯಾದವ್ ಬಾಬರ್ ಅಜಮ್ ಅವರನ್ನು ಹಿಂದಿಕ್ಕಲು ಹೆಚ್ಚಿನ ಅವಕಾಶವಿದೆ ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications