
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳು ಮುಕ್ತಾಯವಾಗಿದ್ದು ಭಾರತ ಈ ಎರಡು ಪಂದ್ಯಗಳನ್ನು ಕೂಡ ಗೆದ್ದುಕೊಂಡಿದೆ. ಟೀಮ್ ಇಂಡಿಯಾದ ಸರ್ವಾಂಗೀಣ ಪ್ರದರ್ಶನ ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಆದರೆ ತಂಡದ ಓರ್ವ ಆಟಗಾರನ ಪ್ರದರ್ಶನ ಮಾತ್ರ ಚಿಂತೆಯನ್ನು ಹೆಚ್ಚಿಸಿದೆ. ಈ ಬಗ್ಗೆ ಮಾಜಿ ಕ್ರಿಕೆಟರ್ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಕೂಡ ಪ್ರತಿಕ್ರಿಯಿಸಿದ್ದಾರೆ. ಇದು ನನಗೆ ಅರ್ಥವೇ ಆಗುತ್ತಿಲ್ಲ ಎಂದು ಸ್ಟಾರ್ ಆಟಗಾರನ ಪ್ರದರ್ಶನದ ಬಗ್ಗೆ ಚೋಪ್ರ ಗೊಂದಲ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಪ್ರದರ್ಶನವೇ ಈಗ ಎಲ್ಲರ ಚಿಂತೆಗೆ ಕಾರಣವಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿಯೂ ವೈಫಲ್ಯತೆಯನ್ನು ಅನುಭವಿಸಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲಿ ಗಳಿಸಿದ್ದು ಕೇವಲ 18 ರನ್. ಅದಕ್ಕಾಗಿ 30 ಎಸೆತ ಬಳಸಿದ್ದರು ಕೊಹ್ಲಿ. ಉತ್ತಮವಾಗಿ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದ ಕೊಹ್ಲಿ ನಂತರ ಓಡಿಯೆನ್ ಸ್ಮಿತ್ ಎಸೆತದಲ್ಲಿ ಕೀಪರ್ ಶಾಯ್ ಹೋಪ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು.
ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಆಕಾಶ್ ಚೋಪ್ರ ಪಂದ್ಯದ ಬಳಿಕ ಕಳವಳವನ್ನು ವ್ಯಕ್ತಪಡಿಸಿದ್ದಾರೆ. "ವಿರಾಟ್ ಕೊಹ್ಲಿಗೆ ಏನಾಗಿದೆ. ಆತನಿಂದ ಮತ್ತೊಮ್ಮೆ ರನ್ ಹರಿದು ಬಂದಿಲ್ಲ. ನನಗೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಖಂಡಿತವಾಗಿಯೂ ಆತನ ಯಶಸ್ಸಿನಲ್ಲಿ ಆತನಿಗೆ ವಿಶೇಷವಾದ ಸ್ಥಾನವಿದೆ. ಆತನಿಗೆ ಆತನದ್ದೇ ಆದ ಮಾನದಂಡದೊಂದಿಗೆ ಹೋಲಿಸಲಾಗುತ್ತದೆ. ಆದರೆ ಈಗ ಅವರ ಪ್ರದರ್ಶನವನ್ನು ಸಾಮಾನ್ಯ ಮಾನದಂಡದೊಂದಿಗೇ ಹೋಲಿಸಲಾಗುತ್ತಿದೆ" ಎಂದಿದ್ದಾರೆ ಆಕಾಶ್ ಚೋಪ್ರ.
"ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತರಾತುರಿಯಲ್ಲಿದ್ದು ವಿಕೆಟ್ ಕಳೆದುಕೊಂಡಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಅವರು ಸರಿಯಾಗಿಯೇ ಆಡುತ್ತಿದ್ದರು. ಲೈನ್‌ನಲ್ಲಿ ಬರುತ್ತಿದ್ದನ್ನು ಉತ್ತಮವಾಗಿ ಆಡುತ್ತಿದ್ದರು. ಉತ್ತಮ ಕಟ್ ಮತ್ತು ಡ್ರೈವ್ ಕೂಡ ಮಾಡಿದ್ದರು. ಆದರೆ ನಂತರ ಓಡಿಯನ್ ಸ್ಮಿತ್ ಎಸೆದ ಒಂದು ಚೆಂಡು ಬ್ಯಾಟ್‌ನ ಹೊರಗಿನ ಅಂಚನ್ನು ಸವರಿಕೊಂಡು ವಿಕೆಟ್ ಕೀಪರ್ ಬೊಗಸೆಗೆ ಸೇರಿಕೊಳ್ಳುತ್ತದೆ" ಎಂದು ಕೊಹ್ಲಿ ವಿಕೆಟ್ ಕಳೆದುಕೊಂಡ ರೀತಿಯ ಬಗ್ಗೆ ಚೋಪ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಎಲ್ಲಾ ಶ್ರೇಷ್ಠ ಕ್ರಿಕೆಟಿಗರು ಕೂಡ ಅನುಭವಿಸಿದಂತೆಯೇ ವಿರಾಟ್ ಕೊಹ್ಲಿ ಕೂಡ ಕಳಪೆ ಫಾರ್ಮ್‌ಅನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರು ವಿರಾಟ್ ಕೊಹ್ಲಿ ಬೆಂಬಲಕ್ಕೆ ತಾನು ನಿಲ್ಲುವುದಾಗಿ ಹೇಳಿದ್ದು ಅವರು ಶೀಘ್ರದಲ್ಲಿಯೇ ಮರಳಿ ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳಲಿದ್ದಾರೆ ಎಂದಿದ್ದಾರೆ. "ನಾನು ವಿರಾಟ್ ಕೊಹ್ಲಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಈಗ ಅಲ್ಲದಿದ್ದರೂ ಕೆಲ ದಿನಗಳ ನಂತರ ವಿರಾಟ್ ಕೊಹ್ಲಿ ಮತ್ತೆ ತಮ್ಮ ಲಯವನ್ನು ಕಂಡುಕೊಳ್ಳಲಿದ್ದಾರೆ. ಆಗ ಅವರು ಈ ಕ್ಷಣದಲ್ಲಿ ರನ್ ಗಳಿಸುತ್ತಿಲ್ಲ ಎಂಬುದು ಸಂಗತಿಯೇ ಅಗುವುದಿಲ್ಲ. ಅವರು ಒಂದು ಹಂತದಲ್ಲಿ ಮತ್ತೆ ರನ್ ಸುರಿಮಳೆ ಸುರಿಸಲಿದ್ದಾರೆ. ಅದರ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ" ಎಂದು ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಆಕಾಶ್ ಚೋಪ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಶುಕ್ರವಾರ ನಡೆಯಲಿದೆ. ಭಾರತ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದು ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಸರಣಿಯನ್ನು ವೈಟ್‌ವಾಶ್ ಮಾಡಿ ವಶಕ್ಕೆ ಪಡೆಯುವ ವಿಶ್ವಾಸದಲ್ಲಿ ಭಾರತೀಯ ತಂಡವಿದೆ. ಇನ್ನು ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಿದ್ದಾರೆಯೇ ಎಂಬುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಏಕದಿನ ಸರಣಿಯ ಬಳಿಕ ಭಾರತ ಹಾಗೂ ವೆಸ್ಟ್ ಇಂಡಿಸ್ ತಂಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಚುಟುಕು ಸರಣಿಯ ಎಲ್ಲಾ ಪಂದ್ಯಗಳು ಕೂಡ ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ.