IND vs WI: 17 ವರ್ಷಗಳಿಂದ ಯಾರಿಂದಲೂ ಮುರಿಯಲು ಆಗದಿದ್ದ ಧೋನಿಯ ದಾಖಲೆ ಮುರಿದ ಅಕ್ಷರ್ ಪಟೇಲ್!

ನಿನ್ನೆ ( ಜುಲೈ 24 ) ವೆಸ್ಟ್ ಇಂಡೀಸ್‌ನ ಕ್ವೀನ್ಸ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ 2 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸುವುದರ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನು ಕಾಯ್ದುಕೊಳ್ಳುವುದರ ಜತೆಗೆ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಪರ ಶಾಯ್ ಹೋಪ್ ಶತಕ ಮತ್ತು ನಾಯಕ ನಿಕೋಲಸ್ ಪೂರನ್ ಆಕರ್ಷಕ ಅರ್ಧಶತಕ ಬಾರಿಸಿದ ಪರಿಣಾಮ ತಂಡ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿ ಪ್ರವಾಸಿ ಭಾರತ ತಂಡಕ್ಕೆ 312 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 49.4 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 312 ರನ್ ಕಲೆಹಾಕಿ 2 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿತು.
ಕುಸಿತ ಕಂಡಿದ್ದ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜತೆಯಾಟ ಆಡುವುದರ ಮೂಲಕ ಆಸರೆಯಾದರೆ, ಅಂತಿಮ ಹಂತದಲ್ಲಿ ವಿಕೆಟ್ ಬೀಳುತ್ತಿದ್ದರೂ ಸಹ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅಕ್ಷರ್ ಪಟೇಲ್ ಪಾತ್ರರಾದರು. 35 ಎಸೆತಗಳಲ್ಲಿ ಅಜೇಯ 64 ರನ್ ಕಲೆಹಾಕಿದ ಅಕ್ಷರ್ ಪಟೇಲ್ 27 ಎಸೆತಗಳಲ್ಲಿಯೇ ಅರ್ಧಶತಕದ ಸಂಭ್ರಮಾಚರಣೆಯನ್ನು ಆಚರಿಸಿಕೊಂಡರು. ಹೀಗೆ ಪಂದ್ಯದಲ್ಲಿ ಮ್ಯಾಚ್ ವಿನ್ನರ್ ಆಗಿ ಮಿಂಚಿದ ಅಕ್ಷರ್ ಪಟೇಲ್ 3 ಎಸೆತಗಳಲ್ಲಿ 6 ರನ್ ಬೇಕಿದ್ದಾಗ ಸಿಕ್ಸರ್ ಚಚ್ಚಿ ಎಂಎಸ್ ಧೋನಿಯಂತೆಯೇ ಪಂದ್ಯವನ್ನು ಫಿನಿಷ್ ಮಾಡಿದರು. ಎಂಎಸ್ ಧೋನಿ ರೀತಿ ಪಂದ್ಯವನ್ನು ಫಿನಿಷ್ ಮಾಡಿದ್ದು ಮಾತ್ರವಲ್ಲದೇ ಧೋನಿ ಹೆಸರಿನಲ್ಲಿದ್ದ 17 ವರ್ಷಗಳಿಂದ ಯಾರಿಂದಲೂ ಮುರಿಯಲಾಗದಿದ್ದ ದಾಖಲೆಯನ್ನು ಅಕ್ಷರ್ ಪಟೇಲ್ ಸರಿಗಟ್ಟಿದ್ದಾರೆ. ಈ ಕುರಿತಾದ ಮಾಹಿತಿ ಮುಂದಿದೆ ಓದಿ.

ಯಶಸ್ವಿ ರನ್ ಚೇಸಿಂಗ್ ವೇಳೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ
2005ರಲ್ಲಿ ಜಿಂಬಾಬ್ವೆ ವಿರುದ್ಧದ ಯಶಸ್ವಿ ರನ್ ಚೇಸ್ ವೇಳೆ 3 ಸಿಕ್ಸರ್ ಬಾರಿಸಿದ್ದ ಎಂ ಎಸ್ ಧೋನಿ ಟೀಮ್ ಇಂಡಿಯಾ ಪರ ಏಳನೇ ಕ್ರಮಾಂಕ ಹಾಗೂ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಯಶಸ್ವಿ ರನ್ ಚೇಸಿಂಗ್ ವೇಳೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ನಂತರ 2011ರಲ್ಲಿ ಯೂಸುಫ್ ಪಠಾಣ್ 2 ಬಾರಿ ಯಶಸ್ವಿ ರನ್ ಚೇಸ್ ವೇಳೆ 3 ಸಿಕ್ಸರ್ ಬಾರಿಸಿ ಧೋನಿ ದಾಖಲೆಯನ್ನು ಸರಿದೂಗಿಸಿದ್ದರಾದರೂ ದಾಖಲೆಯನ್ನು ಮುರಿಯಲು ಆಗಿರಲಿಲ್ಲ. ಆದರೆ ಇದೀಗ ಬರೋಬ್ಬರಿ 17 ವರ್ಷಗಳ ನಂತರ ಎಂಎಸ್ ಧೋನಿ ಅವರ ಈ ದಾಖಲೆಯನ್ನು ಅಕ್ಷರ್ ಪಟೇಲ್ ಮುರಿದು ಹಾಕಿದ್ದಾರೆ. ಯಶಸ್ವಿ ರನ್ ಚೇಸ್ ವೇಳೆ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದು 5 ಸಿಕ್ಸರ್ ಚಚ್ಚಿದ ಅಕ್ಷರ್ ಪಟೇಲ್ ಟೀಮ್ ಇಂಡಿಯಾ ಪರ ಯಶಸ್ವಿ ರನ್ ಚೇಸ್ ಮಾಡುವಾಗ ಏಳನೇ ಮತ್ತು ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಇದೀಗ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಚೊಚ್ಚಲ ಅರ್ಧಶತಕ ಬಾರಿಸಿದ ಅಕ್ಷರ್ ಪಟೇಲ್
ಇಲ್ಲಿಯವರೆಗೆ ಒಟ್ಟು 40 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿ 22 ಬಾರಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದುಕೊಂಡಿರುವ ಅಕ್ಷರ್ ಪಟೇಲ್ ಈ ಪಂದ್ಯಕ್ಕೂ ಮುನ್ನ ಯಾವುದೇ ಇನ್ನಿಂಗ್ಸ್‌ನಲ್ಲಿಯೂ ಅರ್ಧಶತಕ ಬಾರಿಸಿದ ಮೈಲಿಗಲ್ಲು ಮುಟ್ಟಿರಲಿಲ್ಲ. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಬಾರಿಸಿದ ಅಕ್ಷರ್ ಪಟೇಲ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದ ಚೊಚ್ಚಲ ಅರ್ಧಶತಕ ದಾಖಲಿಸಿದರು.

ತಂಡದ ಪರ ಇದೇ ರೀತಿ ಆಡುವಾಸೆ ಎಂದ ಅಕ್ಷರ್ ಪಟೇಲ್
ಪಂದ್ಯದಲ್ಲಿ ಹೀರೋ ಆಗಿ ಮಿಂಚಿದ ಅಕ್ಷರ್ ಪಟೇಲ್ ಪಂದ್ಯ ಮುಕ್ತಾಯವಾದ ನಂತರ ಮಾತನಾಡಿದ್ದು, ತಮ್ಮ ಇನಿಂಗ್ಸ್ ಬಹಳ ವಿಶೇಷವಾದದ್ದು ಹಾಗೂ ಇದು ತಂಡಕ್ಕೆ ಅನಿವಾರ್ಯವಾದ ಸಮಯದಲ್ಲಿ ಬಂದದ್ದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ 5 ವರ್ಷಗಳಿಂದ ಭಾರತ ತಂಡದ ಪರ ಅಂತರಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡುತ್ತಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿಯ ಮತ್ತಷ್ಟು ಪ್ರದರ್ಶನವನ್ನು ನೀಡುವ ಇಂಗಿತವನ್ನು ಅಕ್ಷರ್ ಪಟೇಲ್ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications