IND vs WI: 5 ಸಿಕ್ಸ್, ಅಜೇಯ 64 ರನ್ ಚಚ್ಚಿದ ಅಕ್ಷರ್; 2ನೇ ಏಕದಿನ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದ್ದು, ಸರಣಿಯನ್ನು ಗೆದ್ದು ಬೀಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಶಾಯ್ ಹೋಪ್ ಅಬ್ಬರದ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿ ಟೀಮ್ ಇಂಡಿಯಾಗೆ ಗೆಲ್ಲಲು 312 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 49.4 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 312 ರನ್ ಕಲೆಹಾಕಿದ್ದು, ಎರಡು ಎಸೆತ ಬಾಕಿ ಇರುವಾಗಲೇ 2 ವಿಕೆಟ್‍ಗಳ ರೋಚಕ ಜಯ ಸಾಧಿಸಿದೆ.
ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ ಕೈವಶಪಡಿಸಿಕೊಂಡಿದ್ದು, 2-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಭಾರತ ಬ್ಯಾಟಿಂಗ್
312 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಪ್ರಥಮ ಏಕದಿನ ಪಂದ್ಯದಲ್ಲಿ ಉತ್ತಮ ಆಟವನ್ನಾಡಿದ್ದ ಶಿಖರ್ ಧವನ್ ಮತ್ತು ಶುಬ್ಮನ್ ಗಿಲ್ ಜೋಡಿ ಆರಂಭಿಕರಾಗಿ ಕಣಕ್ಕಿಳಿಯಿತು. ಮೊದಲನೇ ಪಂದ್ಯದಲ್ಲಿ ಮಿಂಚಿದ್ದ ಧವನ್ ಈ ಪಂದ್ಯದಲ್ಲಿ ಉತ್ತಮ ಆಟವನ್ನಾಡುವಲ್ಲಿ ಯಶಸ್ವಿಯಾಗಲಿಲ್ಲ. ನಾಯಕ ಶಿಖರ್ ಧವನ್ 31 ಎಸೆತಗಳಲ್ಲಿ 13 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ನಂತರ ನೆಲಕಚ್ಚಿ ಆಡುತ್ತಿದ್ದ ಶುಬ್ಮನ್ ಗಿಲ್ ಕೂಡ 43 ರನ್ ಕಲೆಹಾಕಿ ಔಟ್ ಆದರು. ಈ ಮೂಲಕ ಟೀಮ್ ಇಂಡಿಯಾ 66 ರನ್‌ಗಳಿಗೆ ಮೊದಲ 2 ವಿಕೆಟ್ ಕಳೆದುಕೊಂಡು ಸಾಮಾನ್ಯ ಆರಂಭವನ್ನು ಪಡೆದುಕೊಂಡಿತು. ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಐಯ್ಯರ್ 63, ಸೂರ್ಯಕುಮಾರ್ ಯಾದವ್ 9, ಸಂಜು ಸ್ಯಾಮ್ಸನ್ 54, ದೀಪಕ್ ಹೂಡಾ 33, ಶಾರ್ದೂಲ್ ಠಾಕೂರ್ 3 ರನ್, ಅವೇಶ್ ಖಾನ್ 10 ರನ್ ಗಳಿಸಿದರು. ಅಂತಿಮವಾಗಿ ತನ್ನ ಚೊಚ್ಚಲ ಅರ್ಧಶತಕ ಸಿಡಿಸಿ ಅಬ್ಬರಿಸಿದ ಅಕ್ಷರ್ ಪಟೇಲ್ ಅಜೇಯ 64 ರನ್ ಚಚ್ಚಿದರೆ, ಸಿರಾಜ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.

ಕುಸಿದಿದ್ದ ಭಾರತಕ್ಕೆ ಶ್ರೇಯಸ್- ಸಂಜು ಆಸರೆ, ಅಬ್ಬರಿಸಿ ಕೈಹಿಡಿದ ಅಕ್ಷರ್
ಇನ್ನು ಟೀಮ್ ಇಂಡಿಯಾ 17.2 ಓವರ್‌ಗಳಲ್ಲಿ 79 ರನ್‌ಗಳಿಗೆ ತನ್ನ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ನಾಲ್ಕನೇ ವಿಕೆಟ್‌ಗೆ ಜತೆಯಾದ ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಐಯ್ಯರ್ ಜೋಡಿ 99 ರನ್‌ಗಳ ಅಮೂಲ್ಯವಾದ ಜತೆಯಾಟವನ್ನಾಡಿ ತಂಡಕ್ಕೆ ಆಸರೆಯಾದರು. ಇಬ್ಬರೂ ಸಹ ಅರ್ಧಶತಕಗಳ ಕಾಣಿಕೆ ನೀಡಿದರು. ಹೀಗೆ ಗಟ್ಟಿಯಾಗಿ ನೆಲೆಯೂರಿದ್ದ ಈ ಜೋಡಿ ಔಟ್ ಆದ ಬಳಿಕ ಒಂದಾದ ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್ ಜೋಡಿ 51 ರನ್‌ಗಳ ಜತೆಯಾಟವಾಡಿತು. ಒಂದೆಡೆ ತಂಡದ ವಿಕೆಟ್ ಕುಸಿಯುತ್ತಿದ್ದರೆ ಪಂದ್ಯದ ಅಂತಿಮ ಹಂತದವರೆಗೂ ಏಕಾಂಗಿ ಹೋರಾಟ ನಡೆಸಿದ ಅಕ್ಷರ್ ಪಟೇಲ್ 35 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಸಹಿತ ಅಜೇಯ 64 ರನ್ ಚಚ್ಚಿದರು. ಅಂತಿಮವಾಗಿ 3 ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ ಸಿಕ್ಸರ್ ಚಚ್ಚಿದ ಅಕ್ಷರ್ ಪಟೇಲ್ ತಂಡವನ್ನು ಗೆಲುವಿನ ದಡ ಸೇರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವೆಸ್ಟ್ ಇಂಡೀಸ್ ತಂಡದ ಪರ ಅಲ್ಜಾರಿ ಜೋಸೆಫ್ ಮತ್ತು ಕೈಲ್ ಮೇಯರ್ಸ್ ತಲಾ 2 ವಿಕೆಟ್ ಪಡೆದರೆ, ಜೇಡನ್ ಸೇಲ್ಸ್, ರೊಮಾರಿಯೊ ಶೆಫರ್ಡ್ ಮತ್ತು ಅಖೆಲ್ ಹೊಸೈನ್ ತಲಾ ಒಂದೊಂದು ವಿಕೆಟ್ ಪಡೆದರು.

ವೆಸ್ಟ್ ಇಂಡೀಸ್ ಇನ್ನಿಂಗ್ಸ್
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೈಲ್ ಮೇಯರ್ಸ್ ಮತ್ತು ಶಾಯ್ ಹೋಪ್ ಉತ್ತಮ ಆರಂಭವನ್ನೇ ಕಟ್ಟಿಕೊಟ್ಟರು. ಈ ಜೋಡಿ 65 ರನ್‌ಗಳ ಜೊತೆಯಾಟವನ್ನಾಡಿತು. ಕೈಲ್ ಮೇಯರ್ಸ್ ಸ್ಫೋಟಕ 39 ರನ್ ಕಲೆಹಾಕಿ ಔಟ್ ಆದರೆ ಮತ್ತೋರ್ವ ಆರಂಭಿಕ ಆಟಗಾರ ಶಾಯ್ ಹೋಪ್ 115 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾಮ್ರಾ ಬ್ರೂಕ್ಸ್ 35 ರನ್ ಗಳಿಸಿದರೆ, ಬ್ರಾಂಡನ್ ಕಿಂಗ್ ಡಕ್ ಔಟ್ ಆದರು. ನಾಯಕ ನಿಕೋಲಸ್ ಪೂರನ್ 74 ರನ್ ಕಲೆಹಾಕಿ ಔಟ್ ಆದರು, ರೋವ್‌ಮನ್ ಪೋವೆಲ್ 13 ರನ್, ರೋಮಾರಿಯೋ ಶೆಫರ್ಡ್ ಅಜೇಯ 15 ರನ್ ಮತ್ತು ಅಖೆಲ್ ಹೊಸೈನ್ ಅಜೇಯ 6 ರನ್ ಕಲೆಹಾಕಿದರು.
ಟೀಮ್ ಇಂಡಿಯಾ ಪರ ಶಾರ್ದೂಲ್ ಠಾಕೂರ್ 7 ಓವರ್ ಬೌಲಿಂಗ್ ಮಾಡಿ 54 ರನ್ ನೀಡಿ 3 ವಿಕೆಟ್ ಪಡೆದರು. ಇನ್ನುಳಿದಂತೆ ದೀಪಕ್ ಹೂಡಾ, ಯುಜುವೇಂದ್ರ ಚಹಲ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications