IND vs WI: ಮೂರನೇ ಏಕದಿನ ಪಂದ್ಯದ ಪಿಚ್ ವರದಿ, ಸಂಭಾವ್ಯ ಆಡುವ ಬಳಗ ಹಾಗೂ ನೇರಪ್ರಸಾರದ ಮಾಹಿತಿ

ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಕೆರಿಬಿಯನ್ನರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡುವಲ್ಲಿ ನಿರತವಾಗಿದೆ. ಜುಲೈ 22ರಂದು ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ 3 ರನ್‌ಗಳ ರೋಚಕ ಜಯ ಸಾಧಿಸಿದ ಟೀಮ್ ಇಂಡಿಯಾ ನಂತರ ಜುಲೈ 24ರಂದು ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 2 ವಿಕೆಟ್‍ಗಳ ರೋಚಕ ಗೆಲುವನ್ನು ಕಾಣುವುದರ ಮೂಲಕ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದ್ದು, ಮುನ್ನಡೆ ಕಾಯ್ದುಕೊಂಡಿದೆ.
ಅತ್ತ ತವರಿನಲ್ಲಿ ಇದಕ್ಕೂ ಮುನ್ನ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಎಲ್ಲಾ 3 ಪಂದ್ಯಗಳಲ್ಲಿಯೂ ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದ್ದ ವೆಸ್ಟ್ ಇಂಡೀಸ್ ಇದೀಗ ಟೀಮ್ ಇಂಡಿಯಾ ವಿರುದ್ಧವೂ ಕೂಡ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗುವ ಭೀತಿಯಲ್ಲಿದೆ. ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿಯೂ ಗೆದ್ದು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿ ವೈಟ್ ವಾಷ್ ಸಾಧನೆ ಮಾಡುವತ್ತ ಕಣ್ಣಿಟ್ಟಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯ ಜುಲೈ 27ರ ಬುಧವಾರದಂದು ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ. ಈ ಪಂದ್ಯದ ಕುರಿತಾದ ಪಿಚ್ ವರದಿ, ಕಣಕ್ಕಿಳಿಯಬಹುದಾದ ಆಡುವ ಬಳಗ ಮತ್ತು ನೇರ ಪ್ರಸಾರದ ಮಾಹಿತಿ ಕೆಳಕಂಡಂತಿದೆ.

ಪಿಚ್ ವರದಿ ಮತ್ತು ಹವಾಮಾನ ವರದಿ
ಕ್ವೀನ್ಸ್ ಪಾರ್ಕ್ ಓವಲ್ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಕಳೆದೆರಡು ಪಂದ್ಯಗಳಲ್ಲಿ ಅಬ್ಬರಿಸಿದಂತೆ ಈ ಬಾರಿಯೂ ಬ್ಯಾಟರ್ಸ್ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಪಂದ್ಯದ ಅರ್ಧ ಅವಧಿಯ ಬಳಿಕ ಪೇಸರ್‌ಗಳಿಗೆ ಪಿಚ್ ನೆರವಾಗಲಿದ್ದು, ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಲಿದ್ದಾರೆ. ಇಲ್ಲಿನ ಹವಾಮಾನವು 28 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, ಶೇಕಡಾ 77ರಷ್ಟು ಆರ್ದ್ರತೆ ಇರಲಿದೆ. ಗಾಳಿ ಗಂಟೆಗೆ 13 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ. ಮಳೆ ಬರುವ ಸಾಧ್ಯತೆಯು ಕಡಿಮೆಯಿದೆ. ಇನ್ನು ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 290ರನ್‌ಗಳಷ್ಟಿದೆ. ಇನ್ನು ಇಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅನುಕೂಲತೆಯಿದ್ದು, ಅಂಕಿ-ಅಂಶಗಳ ಪ್ರಕಾರ ಶೇಕಡಾ 60ರಷ್ಟು ಗೆಲುವಿನ ಸರಾಸರಿಯನ್ನ ಹೊಂದಿದೆ.

ಸಂಭಾವ್ಯ ಆಡುವ ಬಳಗಗಳು
ವೆಸ್ಟ್ ಇಂಡೀಸ್: ಶಾಯ್ ಹೋಪ್, ಕೈಲ್ ಮೇಯರ್ಸ್, ಶಮರ್ಹ್ ಬ್ರೂಕ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ ಮತ್ತು ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ಅಕೇಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್
ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ( ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್/ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್

ನೇರಪ್ರಸಾರದ ಮಾಹಿತಿ
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಈ ಪಂದ್ಯ ಡಿಡಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಮಾತ್ರ ನೇರ ಪ್ರಸಾರವಾಗಲಿದೆ. ಮೊಬೈಲ್ ಅಪ್ಲಿಕೇಶನ್ ಆದ ಫ್ಯಾನ್ ಕೋಡ್‌ನಲ್ಲಿ ಈ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಈ 2 ಮಾರ್ಗಗಳನ್ನು ಹೊರತುಪಡಿಸಿ ಉಳಿದ ಯಾವುದೇ ಚಾನೆಲ್ ಅಥವಾ ಅಪ್ಲಿಕೇಶನ್‌ಗಳಲ್ಲಿ ಈ ಪಂದ್ಯ ನೇರ ಪ್ರಸಾರವಾಗುವುದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications