
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಅಂತ್ಯವಾಗಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿದೆ. ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ತಂಡ 6 ವಿಕೆಟ್‌ಗಳ ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಎದುರಾಳಿಯನ್ನು ಬ್ಯಾಟಿಂಗ್‌ಗೆ ಇಳಿಸಿದ್ದ ಭಾರತ ವಿಂಡೀಸ್ ಪಡೆಯನ್ನು 157 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಮೊತ್ತವನ್ನು ಬೆನ್ನನಟ್ಟಿದ ಭಾರತ 7 ಎಸೆತಗಳು ಬಾಕಿಯಿರುವಂತೆಯೇ ಗೆಲುವು ಸಾಧಿಸಿದೆ. ಅಂತಿಮ ಹಂತದಲ್ಲಿ ಸೂರ್ಯ ಕುಮಾರ್ ಯಾದವ್ ಹಾಗೂ ವೆಂಕಟೇಶ್ ಐಯ್ಯರ್ 48 ರನ್‌ಗಳ ಜೊತೆಯಾಟದಿಂದಾಗಿ ಭಾರತ ಪಂದ್ಯವನ್ನು ಸುಲಭವಾಗಿ ವಶಕ್ಕೆ ಪಡೆದುಕೊಂಡಿದೆ.
ಕೊಲ್ಕತ್ತಾದಲ್ಲಿ ನಡೆದ ಈ ಮೊದಲ ಟಿ20 ಪಂದ್ಯದಲ್ಲಿ ಭಾರತದ ಆಡುವ ಬಳಗದಿಂದ ಪ್ರಮುಖ ಆಟಗಾರ ಶ್ರೇಯಸ್ ಐಯ್ಯರ್ ಹೊರಗುಳಿದಿದ್ದರು. ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ವೆಂಕಟೇಶ್ ಐಯ್ಯರ್ 4,5 ಹಾಗೂ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಹೀಗಾಗಿ ಶ್ರೇಯಸ್ ಮೊದಲ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರು.
ಶ್ರೇಯಸ್ ಐಯ್ಯರ್ ಆಡುವ ಬಳಗದಿಂದ ಹೊರಗುಳಿದ ವಿಚಾರವಾಗಿ ಸ್ವತಃ ನಾಯಕ ರೋಹಿತ್ ಶರ್ಮಾ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು "ಶ್ರೇಯಸ್ ಐಯ್ಯರ್ ಅವರಂತಾ ಆಟಗಾರನನ್ನು ಆಡುವ ಬಳಗದಿಂದ ಹೊರಗಿಡುವುದು ಬಹಳ ಕಷ್ಟದ ಕೆಲಸ. ಆದರೆ ಮಧ್ಯದಲ್ಲಿ ಬೌಲಿಂಗ್ ಮಾಡಬಲ್ಲಂತಾ ಆಟಗಾರನ ಅಗತ್ಯ ನಮಗಿತ್ತು. ಹಾಗಾಗಿ ಆತನನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
"ಈ ಪ್ರಮಾಣದ ಸ್ಪರ್ಧೆ ಇರುವುದನ್ನು ನೋಡಲು ಬಹಳ ಸಂತಸವಾಗುತ್ತದೆ. ಆದರೆ ದಸಾಕಷ್ಟು ಆಟಗಾರರು ಹೊರಗೆ ಕೂರಬೇಕಾಗುತ್ತದೆ. ಸಮರ್ಥ ಆಟಗಾರರನ್ನು ಹೊಂದಿಲ್ಲದಿರುವುದು ಹಾಗೂ ಫಾರ್ಮ್‌ನಲ್ಲಿದ್ದ ಆಟಗಾರರನ್ನು ಹೊಂದಿರುವುದಕ್ಕಿಂತ ಈ ರೀತಿಯ ಸವಾಲುಗಳನ್ನು ಎದುರಿಸುವುದಕ್ಕೆ ಸಂತಸವಾಗುತ್ತದೆ" ಎಂದು ರೋಹಿತ್ ಶರ್ಮಾ ವಿವರಿಸಿದ್ದಾರೆ.
"ಶ್ರೇಯಸ್ ಐಯ್ಯರ್ ಸ್ಥಾನದ ಬಗ್ಗೆ ನಾವು ಬಹಳ ಸ್ಪಷ್ಟತೆಯನ್ನು ಹೊಂದಿದ್ದೇವೆ. ವಿಶ್ವಕಪ್‌ಗೆ ಬೌಲಿಂಗ್ ಜೊತೆಗಿನ ಆಯ್ಕೆಯನ್ನು ಬಯಸುತ್ತಿರುವುದನ್ನು ಹೇಳಿದ್ದೇವೆ. ತಂಡ ಯಾವುದನ್ನು ಬಯಸುತ್ತದೋ ಅದನ್ನು ನಮ್ಮ ಆಟಗಾರರು ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲಾ ಆಟಗಾರರು ಕೂಡ ವೃತ್ತಿಪರತಾಗಿರುವ ಕಾರಣ ತಂಡ ಮೊದಲು ಎಂಬ ಭಾವನೆಯನ್ನು ಹೊಂದಿರುತ್ತಾರೆ. ಎಲ್ಲರೂ ಲಭ್ಯವಾದ ಸಂದರ್ಭದಲ್ಲಿ ನಾವು ಕುಳಿತು ಚರ್ಚಿಸಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ" ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.
ಮೊದಲ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಸರಣಿಯಲ್ಲಿ ಎರಡು ಪಂದ್ಯಗಳು ಉಳಿದುಕೊಂಡಿದ್ದು ಈ ಎರಡು ಪಂದ್ಯಗಳು ಕೂಡ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿಯೇ ನಡೆಯಲಿದೆ. ಮುಂದಿನ ಟಿ20 ಪಂದ್ಯ 18ರಂದು ಶುಕ್ರವಾರ ನಡೆಯಲಿದ್ದು ಭಾನುವಾರ ಸರಣಿಯ ಅಂತಿಮ ಪಂದ್ಯ ನಡೆಯಲಿದೆ.