
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಹರಿಣಗಳ ವಿರುದ್ಧ ಏಕದಿನ ಹಾಗೂ ಟೆಸ್ಟ್ ಎರಡೂ ಸರಣಿಗಳಲ್ಲಿಯೂ ಹೀನಾಯ ಸೋಲು ಅನುಭವಿಸುವುದರ ಮೂಲಕ ಮುಖಭಂಗಕ್ಕೊಳಗಾಗಿದ್ದ ಟೀಮ್ ಇಂಡಿಯಾ ಇದೀಗ ತವರಿನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಶುಭಾರಂಭವನ್ನು ಮಾಡಿದೆ. ಹೌದು, ಭಾರತ ಪ್ರವಾಸವನ್ನು ಕೈಗೊಂಡಿರುವ ವೆಸ್ಟ್ ಇಂಡೀಸ್ ವಿರುದ್ಧ ಕಳೆದ ಭಾನುವಾರ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್‍ಗಳ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 43.5 ಓವರ್‌ಗಳಲ್ಲಿ 176 ರನ್‌ಗಳಿಗೆ ಆಲ್ ಔಟ್ ಆಯಿತು. ಹೀಗೆ ವೆಸ್ಟ್ ಇಂಡೀಸ್ ತಂಡ ನೀಡಿದ 177 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 28 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ 6 ವಿಕೆಟ್‍ಗಳ ಭರ್ಜರಿ ಜಯವನ್ನು ದಾಖಲಿಸಿತು. ಹೀಗೆ ಇತ್ತಂಡಗಳ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸಿದ ಭಾರತ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿತು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಯುಜುವೇಂದ್ರ ಚಾಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 9.5 ಓವರ್‌ಗಳಲ್ಲಿ 49 ರನ್ ನೀಡಿದ್ದ ಯುಜುವೇಂದ್ರ ಚಾಹಲ್ ವೆಸ್ಟ್ ಇಂಡೀಸ್ ತಂಡದ ಪ್ರಮುಖ 4 ವಿಕೆಟ್‍ಗಳನ್ನು ಪಡೆದುಕೊಳ್ಳುವುದರ ಮೂಲಕ ತಂಡಕ್ಕೆ ಆಪತ್ಬಾಂಧವರಾದರು. ಈ ಮೂಲಕ ಯುಜುವೇಂದ್ರ ಚಾಹಲ್ ಏಕದಿನ ಕ್ರಿಕೆಟ್‍ನಲ್ಲಿ 100 ವಿಕೆಟ್ ಪಡೆದ ಮೈಲುಗಲ್ಲನ್ನೂ ಮುಟ್ಟಿದರು.
ಹೀಗೆ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಗಳಿಸಿದ ನಂತರ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಪಂದ್ಯದಲ್ಲಿ ಪಂದ್ಯಶ್ರೇಷ್ಠನಾಗಿ ಹೊರಹೊಮ್ಮಿದ ಯುಜುವೇಂದ್ರ ಚಾಹಲ್ ಚರ್ಚೆಯೊಂದನ್ನು ನಡೆಸಿದರು. ಪಂದ್ಯದ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡ ಯುಜುವೇಂದ್ರ ಚಾಹಲ್ ಸಂತಸವನ್ನು ವ್ಯಕ್ತಪಡಿಸಿದರು. ತನ್ನ ಕ್ರಿಕೆಟ್ ವೃತ್ತಿಜೀವನ ಕಳೆದ 5 ವರ್ಷಗಳಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿತು ಎಂದು ಹೇಳಿದ ಯುಜುವೇಂದ್ರ ಚಾಹಲ್ 100 ವಿಕೆಟ್ ಮೈಲಿಗಲ್ಲನ್ನು ಇಷ್ಟು ಬೇಗ ಮುಟ್ಟುತ್ತೇನೆ ಎಂದುಕೊಂಡಿರಲಿಲ್ಲ ಎಂದು ಸಂತಸವನ್ನು ವ್ಯಕ್ತಪಡಿಸಿದರು.
ಯಜುವೇಂದ್ರ ಚಾಹಲ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ ನೀವು ನಮ್ಮ ತಂಡದ ಪ್ರಮುಖ ಆಟಗಾರ ಹಾಗೂ ಅದೇ ವಿಶ್ವಾಸದೊಂದಿಗೆ ನೀವು ಕಣಕ್ಕಿಳಿಯಬೇಕು, ಆಟಗಾರನೆಂದ ಮೇಲೆ ಏಳು ಬೀಳುಗಳು ಸಹಜ ಆದರೆ ನಿಮ್ಮ ಉತ್ಸುಕತೆಯನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು. ಹಾಗೂ ಇದೇ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಹತ್ತಿರ ಬರುತ್ತಿದೆ ಆದ್ದರಿಂದ ನಿಮಗೆ ಶುಭವಾಗಲಿ ಎಂದು ಹೇಳಿಕೆ ನೀಡುವುದರ ಮೂಲಕ ರೋಹಿತ್ ಶರ್ಮಾ ಯುಜುವೇಂದ್ರ ಚಾಹಲ್ ಅವರ ಕಾಲನ್ನು ಎಳೆದರು. ಸದ್ಯ ರಿಟೈನ್ ಆಗದೇ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಯುಜುವೇಂದ್ರ ಚಾಹಲ್ ಅವರಿಗೆ ಈ ಉತ್ತಮ ಪ್ರದರ್ಶನ ಅನುಕೂಲ ಮಾಡಬಹುದೆಂಬ ಅರ್ಥದಲ್ಲಿ ರೋಹಿತ್ ಶರ್ಮಾ ಕಾಲೆಳೆದಿದ್ದಾರೆ.