Ind vs WI: ಡಿಕ್ಲೇರ್‌ಗೂ ಮುನ್ನ ಆ ಒಂದು ರನ್‌ಗೆ ಕಾದು.. ಸುಸ್ತಾಗಿ.. ವಾರ್ನಿಂಗ್ ನೀಡಿದ್ದ ನಾಯಕ ರೋಹಿತ್
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಮೂರನೇ ದಿನದಲ್ಲಿಯೇ ಅಂತ್ಯವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಭಾರತ ನೀಡಿದ ಅಮೋಘ ಪ್ರದರ್ಶನದ ಮುಂದೆ ವೆಸ್ಟ್ ಇಂಡೀಸ್ ತಂಡ ಈ ಪಂದ್ಯದಲ್ಲಿ ಯಾವ ಹಂತದಲ್ಲಿಯೂ ಸಾಟಿಯಾಗಲೇ ಇಲ್ಲ. ಹೀಗಾಗಿ ಎರಡು ಇನ್ನಿಂಗ್ಸ್‌ನಲ್ಲಿಯೂ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿವ ಮೂಲಕ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 141 ರನ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿದೆ.
ಇನ್ನು ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 150 ರನ್‌ಗಳಿಗೆ ಆಲೌಟ್ ಮಾಡಿದ ಟೀಮ್ ಇಂಡಿಯಾ ಬಳಿಕ ಬ್ಯಾಟಿಂಗ್ ನಡೆಸಿ ಭಾರೀ ಮೊತ್ತವನ್ನು ಪೇರಿಸಿತ್ತು. ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಶತಕ ಸಿಡಿಸಿ ಅಬ್ಬರಿಸುವ ಮೂಲಕ ಭಾರತ ಭಾರೀ ಮೊತ್ತಗಳಿಸಲು ಕಾರಣವಾದರು. ಅಲ್ಲದೆ ವಿರಾಟ್ ಕೊಹ್ಲಿ ಕೂಡ 76 ರನ್‌ಗಳ ಕೊಡುಗೆ ನೀಡಿದ್ದಾರೆ. ಇನ್ನು ರವೀಂದ್ರ ಜಡೇಜಾ 37 ರನ್ ಹಾಗೂ ಇಶಾನ್ ಕಿಶನ್ ಒಂದು ರನ್‌ಗಳಿಸಿ ಅಜೇಯವಾಗುಳಿದಿದ್ದರು.

ಈ ಪಂದ್ಯದಲ್ಲಿ ಭಾರತ 421 ರನ್‌ಗಳನ್ನು ಗಳಸಿದ್ದ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದರು. ಆದರೆ ಈ ಡಿಕ್ಲೇರ್ ನಿರ್ಧಾರವನ್ನೂ ತೆಗೆದುಕೊಳ್ಳುವ ಮುನ್ನ ನಾಯಕ ರೋಹಿತ್ ಶರ್ಮಾ ಸಾಕಷ್ಟು ಕಾದಿದ್ದರು. ಆ ಒಂದು ರನ್ ಬರುವುದನ್ನು ರೋಹಿತ್ ಶರ್ಮಾ ಕಾಯುತ್ತಿದ್ದರು. ಕಡೆಗೂ ಆ ಒಂದು ರನ್ ಬಂದ ಬಳಿಕ ಇನ್ನಿಂಗ್ಸ್ ಡಿಕ್ಲೇರ್ ನಿರ್ಧಾರವನ್ನು ಘೋಷಿಸಿದರು.
ಇಶಾನ್‌ಗೂ ಚೊಚ್ಚಲ ಪಂದ್ಯ
ಅಂದಹಾಗೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲಿ ಬೃಹತ್ ಶತಕ ಸಿಡಿಸಿ ಗಮನಸೆಳೆದಿದ್ದರು. ಇದೇ ಪಂದ್ಯ ಇಶಾನ್ ಕಿಶನ್‌ಗೂ ಪದಾರ್ಪಣಾ ಪಂದ್ಯ. ವಿರಾಟ್ ಕೊಹ್ಲಿ 76 ರನ್‌ಗಳಿಸಿ ಔಟಾದ ಬಳಿಕ ಇಶಾನ್ ಕಿಶನ್ ಬ್ಯಾಟಿಂಗ್‌ಗೆ ಇಳಿದರು. ಈ ಸಂದರ್ಭದಲ್ಲಿ ಇಶಾನ್ ಅತ್ಯಂತ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು.
ಇಶಾನ್ ಅದೆಷ್ಟು ರಕ್ಷಣಾತ್ಮಕವಾಗಿ ಆಡುತ್ತಿದ್ದರು ಎಂದರೆ ತಾನು ಎದುರಿಸಿದ ಮೊದಲ 19 ಎಸೆತಗಳಲ್ಲಿ ಒಂದು ರನ್ ಕೂಡ ಬಾರಿಸಲೇ ಇಲ್ಲ. ಅದಾದಗಲೇ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಮನಸ್ಸು ಮಾಡಿದ್ದ ರೋಹಿತ್ ಶರ್ಮಾ ಚೊಚ್ಚಲ ಪಂದ್ಯವಾಡುತ್ತಿರುವ ಇಶಾನ್ ಈ ಪಂದ್ಯದಲ್ಲಿ ಒಂದು ರನ್ ಆದರೂ ಗಳಿಸಲು ಎಂದು ಕಾಯುತ್ತಿದ್ದರು.
19ನೇ ಎಸೆತದವರೆಗೂ ಇಶಾನ್ ರನ್ ಗಳಿಸದ್ದನ್ನು ನೋಡಿದ ನಾಯಕ ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಿಡಿಮಿಡಿಗೊಂಡಿದ್ದರು. ಅದಾದ ಬಳಿಕ ತಾಳ್ಮೆಕಳೆದುಕೊಂಡ ರೋಹಿತ್ ಬಳಿಕ ತಮ್ಮದೇ ಶೈಲಿಯಲ್ಲಿ ಡ್ರೆಸ್ಸಿಂಗ್‌ರೂಮ್‌ನಿಂದಲೇ ಸಿಡುಕಿ ಇಶಾನ್‌ಗೆ ಸೂಚನೆಯೊಂದನ್ನು ರವಾನಿಸಿದ್ದರು. ಅದನ್ನು ಅರ್ಥೈಸಿಕೊಂಡ ಇಶಾನ್ 20ನೇ ಎಸೆತದಲ್ಲಿ ಒಂಟಿ ರನ್ ಪಡೆದುಕೊಂಡರು. ಅದಾಗುತ್ತಿದ್ದಂತೆಯೇ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.
ಈ ಬಗ್ಗೆ ಸ್ವತಃ ರೋಹಿತ್ ಶರ್ಮಾ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ್ದಾರೆ. "ಡಿಕ್ಲೇರ್ ಮಾಡುವುದಕ್ಕೂ ಮುನ್ನ ಇನ್ನು ಕೇವಲ ಒಂದು ಓವರ್ ಮಾತ್ರವೇ ಇದೆ ಎಂಬುದನ್ನು ನಾನು ತಿಳಿಸಿದ್ದೆ. ಇಶಾನ್ ಕಿಶನ್ ಕನಿಷ್ಠ ಒಂದು ರನ್‌ಗಳಿಸುವುದನ್ನು ನಾನು ಬಯಸಿದ್ದೆ. ಯಾಕೆಂದರೆ 20 ಎಸೆತ ಎದುರಿಸಿಯೂ ಆತ ರನ್ ಗಳಿಸಿರಲಿಲ್ಲ. ಆತ ಟೆಸ್ಟ್ ಕ್ರಿಕೆಟ್‌ನ ಮೊದಲ ರನ್‌ಗಳಿಸುವುದನ್ನು ನಾನು ಬಯಸಿದ್ದೆ. ಆ ಮೂಲಕ ಡಿಕ್ಲೇರ್ ಮಾಡಬಹುದು ಎಂದುಕೊಂಡಿದ್ದೆ" ಎಂದು ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications