ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸೋಲಿ ಅನುಭವಿಸಿದ ಬಳಿಕ ಭಾರತ ಮತ್ತೊಂದು ಆವೃತ್ತಿಯ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಸಿದ್ಧವಾಗುತ್ತಿದೆ. 2023-25ರ ಆವೃತ್ತಿಯಲ್ಲಿ ಮೊದಲ ಸರಣಿಯನ್ನು ಭಾರತ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಂಡು ಆಡಲಿದೆ. ಜುಲೈ ತಿಂಗಳಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಈಗ ಆ ನಿರ್ಧಾರದಿಂದ ಬಿಸಿಸಿಐ ಹಿಂದಕ್ಕೆ ಸರಿದಂತೆ ಕಾಣುತ್ತಿದೆ.
ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮೊದಲಾದ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು. ಹೀಗಾಗಿ ಬೇರೆ ಯಾರಿಗಾದರೂ ನಾಯಕತ್ವದ ಜವಾಬ್ಧಾರಿ ನೀಡುವ ಬಗ್ಗೆ ಚರ್ಚೆಗಳಾಗುತ್ತು. ಆದರೆ ಇದೀಗ ರೋಹಿತ್ ಶರ್ಮಾ ನೇರಿದಂತೆ ಅನುಭವಿಗಳಿಗೆ ವಿಶ್ರಾಂತಿ ನೀಡುವ ನಿರ್ಧಾರವನ್ನು ಬಿಸಿಸಿಐ ಕೈಬಿಟ್ಟಿದೆ ಎಂದು ವರದಿಯಾಗಿದೆ.

ಬಿಸಿಸಿಐನ ಹಿರಿಯ ಅಧಿಕಾರಿಗಳು ಅನುಭವಿಗಳಿಗೆ ವಿಶ್ರಾಂತಿ ನೀಡುವ ನಿರ್ಧಾರವನ್ನು ಅಲ್ಲಗಳೆದಿದ್ದಾರೆ. ಹಾಗಿದ್ದರೂ ಕೆಎಲ್ ರಾಹುಲ್, ಶ್ರೇಯಸ್ ಐಯ್ಯರ್ ಮತ್ತು ಜಸ್ಪ್ರೀತ್ ಬೂಮ್ರಾ ಅವರಂತಾ ಆಟಗಾರರು ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಅಲಭ್ಯವಾಗಲಿದ್ದು ಇದರಿಂದಾಗಿ ಚೇತೇಶ್ವರ್ ಪೂಜಾರ ಕೂಡ ಭಾರತ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಈ ಮಧ್ಯೆ ಚೇತೇಶ್ವರ್ ಪೂಜಾರ ಅವರನ್ನು ತಂಡದಲ್ಲಿ ಮುಂದುವರಿಸಲು ನಿರ್ಧರಿಸಿದ್ದರೂ ಸರ್ಫರಾಜ್ ಖಾನ್ ಅವರಂತಾ ಆಟಗಾರನಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ರಣಜಿ ಟ್ರೋಪಿಯಲ್ಲಿ ಶತಕದ ಮೇಲೆ ಶತಕ ಬಾರಿಸುತ್ತಾ ರನ್ ಮಳೆ ಹರಿಸಿದ್ದರೂ ಸರ್ಫರಾಜ್ ಖಾನ್‌ಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ದೊರೆಯುತ್ತಿಲ್ಲ. ಅರ್ಹತೆಯಿದ್ದರೂ ಅನುಭವಿ ಆಟಗಾರರು ತುಂಬಿರುವ ಕಾರಣ ಯುವ ಆಟಗಾರನಿಗೆ ಅವಕಾಶ ದೊರೆಯದ ಬಗ್ಗೆ ಭಾರತದ ಆಯ್ಕೆ ಮಂಡಳಿಯ ಬಗ್ಗೆ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿದೆ.
"ರೋಹಿತ್ ಶರ್ಮಾ ಫಿಚ್ ಆಗಿದ್ದು ಆಯ್ಕೆಗೆ ಲಭ್ಯವಿದ್ದಾರೆ. ಅವರಿಗೆ ಸಾಕಾಗುವಷ್ಟು ವಿಶ್ರಾಂತಿ ದೊರೆತಿದೆ. ಹಾಗಾಗಿ ವರ್ಕ್‌ಲೋಡ್ ಮ್ಯಾನೇಜ್‌ಮೆಮಟ್ ಬಗ್ಗೆ ಕಳವಳಪಡಿಸುವ ಅಗತ್ಯವಿಲ್ಲ. ವೆಸ್ಟ್ ಇಂಡೀಸ್ ಸರಣಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿಯೇ ಭಾರತ ಪ್ರವಾಸ ಕೈಗೊಳ್ಳಲಿದೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಇನ್‌ಸೈಟ್ ಸ್ಪೋರ್ಟ್ ವರದಿ ಮಾಡಿದೆ.
ರೋಹಿತ್ ಶರ್ಮಾ ಇತ್ತೀಚೆಗೆ ಕಳಪೆ ಫಾರ್ಮ್‌ನಲ್ಲಿರುವ ಕಾರಣದಿಂದಾಗಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳುತ್ತಾರೆಯೇ ಎಂಬ ಬಗ್ಗೆ ವರದಿಗಳು ಹರಿದಾಡಿದ್ದವು. ಆದರೆ ವಿಶ್ವಕಪ್ ಟೂ್ನಿಗೆ ಕೆಲವೇ ತಿಂಗಳುಗಳು ಇರುವಾಗ ವಿಂಡೀಸ್ ಸರಣಿ ಅವರು ಫಾರ್ಮ್‌ಗೆ ಮರಳಲು ವೇದಿಕೆಯಾಗಬಹುದು ಎಂಬ ಕಾರಣಕ್ಕೆ ರೋಹಿತ್ ಶರ್ಮಾ ಅವರನ್ನು ಕೂಡ ಈ ಸರಣಿಗೆ ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ನಿರ್ಧಾರ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿರುವ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮೊದಲಾದ ಆಟಗಾರರಿಗೆ ನಿರಾಸೆಯಾಗುವದರಲ್ಲಿ ಅನುಮಾನವಿಲ್ಲ.
"ಐಪಿಎಲ್‌ನಲ್ಲಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಂದ ಹೆಚ್ಚಿನ ಪ್ರಮಾಣದಲ್ಲಿ ರನ್‌ಗಳು ಹರಿದುಬಂದಿಲ್ಲ. ಅದರೆ ಅವರು ಕಳೆದ ಕೆಲ ತಿಂಗಳುಗಳಲ್ಲಿ ಡೀಸೆಂಟ್ ಆಗಿ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಶತಕವನ್ನು ಕೂಡ ಬಾರಿಸಿದ್ದಾರೆ. ಅಲ್ಲದೆ ತಮ್ಮ ಫಿಟ್‌ನೆಸ್ ಬಗ್ಗೆಯೂ ಅವರು ಕಾಳಜಿವಹಿಸಿದ್ದಾರೆ. ಅವರ ಫಾರ್ಮ್‌ನ ಆಧಾರದಲ್ಲಿ ಟೀಕಿಸುವುದು ಕಠಿಣವೆನಿಸಲಿದೆ" ಎಂದು ಬಿಸಿಸಿಐ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.