ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ ಬದಲಿ ಆಟಗಾರ ಆಯ್ಕೆ; ಹೆಚ್ಚು ಮಿಂಚಿರದ ಆಟಗಾರನಿಗೆ ಮಣೆ!

ಸದ್ಯ ಕೆರಿಬಿಯನ್ನರ ನಾಡಿನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ನಡೆದ ಏಕದಿನ ಸರಣಿಯನ್ನು ಟೀಮ್ ಇಂಡಿಯಾ ಈಗಾಗಲೇ ವಶಪಡಿಸಿಕೊಂಡಿದ್ದು ಎಲ್ಲಾ ಪಂದ್ಯಗಳಲ್ಲಿಯೂ ವೆಸ್ಟ್ ಇಂಡೀಸ್ ತಂಡಕ್ಕೆ ತವರು ನೆಲದಲ್ಲಿಯೇ ಮಣ್ಣುಮುಕ್ಕಿಸುವುದರ ಮೂಲಕ ವೈಟ್ ವಾಷ್ ಸಾಧನೆ ಮಾಡಿದೆ.
ಹೀಗೆ ಏಕದಿನ ಸರಣಿಯಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ವೆಸ್ಟ್ ಇಂಡೀಸ್ ನೆಲದಲ್ಲಿ ಚೊಚ್ಚಲ ವೈಟ್ ವಾಷ್ ಸಾಧನೆ ಮಾಡಿದ ಟೀಮ್ ಇಂಡಿಯಾ ಇದೀಗ ವಿಂಡೀಸ್ ವಿರುದ್ಧ ನಡೆಯಲಿರುವ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಇತ್ತಂಡಗಳ ನಡುವೆ ಈ ಟಿ ಟ್ವೆಂಟಿ ಸರಣಿಯಲ್ಲಿ 5 ಪಂದ್ಯಗಳು ಆಯೋಜನೆಯಾಗಿದ್ದು, ಪ್ರಥಮ ಪಂದ್ಯ ಇಂದು ( ಜುಲೈ 29 ) ಟರೌಬಾದ ಬ್ರಿಯಾನ್ ಲಾರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಲಿದೆ. ಇನ್ನು ಈ ಸರಣಿಗೆ ಈ ಹಿಂದೆಯೇ ಟೀಮ್ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದ ತಂಡವನ್ನು ಪ್ರಕಟ ಮಾಡಿತ್ತು. ಕಳೆದ ಕೆಲ ಸರಣಿಗಳು ಹಾಗೂ ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಫಿಟ್ ನೆಸ್ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿದ್ದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಈ ಸರಣಿ ವೇಳೆಗೆ ಕೆಎಲ್ ರಾಹುಲ್ ಫಿಟ್ ಆದರೆ ಮಾತ್ರ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಹೇಳಿಕೆಯನ್ನು ಸಹ ನೀಡಿತ್ತು. ಆದರೆ ವಿಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿ ಆರಂಭವಾಗುವುದಕ್ಕೂ ಮುನ್ನ ಕೆ ಎಲ್ ರಾಹುಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ವಿಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೂ ಕೂಡ ರಾಹುಲ್ ಅಲಭ್ಯರಾಗಿದ್ದಾರೆ. ಈ ಮೂಲಕ ಕೆಎಲ್ ರಾಹುಲ್ ಬದಲಿ ಆಟಗಾರನನ್ನು ಬಿಸಿಸಿಐ ಆಯ್ಕೆ ಮಾಡಿದೆ ಎಂಬ ಸುದ್ದಿ ಹೊರ ಬಿದ್ದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈತನೇ ರಾಹುಲ್ ಬದಲಿ ಆಟಗಾರ
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸಂಜು ಸ್ಯಾಮ್ಸನ್ ವಿಂಡೀಸ್ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು ಹಾಗೂ ಪ್ರಥಮ ಏಕದಿನ ಪಂದ್ಯದಲ್ಲಿ ವೈಡ್ ಎಸೆತವನ್ನು ತಡೆದು ಬೌಂಡರಿ ತಪ್ಪಿಸಿದ್ದ ಸಂಜು ಸ್ಯಾಮ್ಸನ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗೆ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಮೂಲಕ ಮಿಂಚಿದ್ದ ಸಂಜು ಸ್ಯಾಮ್ಸನ್ ಇದೀಗ ಕೆಎಲ್ ರಾಹುಲ್ ಬದಲಿ ಆಟಗಾರನಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಆಯ್ಕೆಯಾಗಿದ್ದಾರೆ.

ಸಂಜು ಸ್ಯಾಮ್ಸನ್ ಟಿಟ್ವೆಂಟಿ ಅಂಕಿ ಅಂಶ
ಸಂಜು ಸ್ಯಾಮ್ಸನ್ ಇಲ್ಲಿಯವರೆಗೂ ಒಟ್ಟು 14 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದುಕೊಂಡಿದ್ದು, ಈ ಪೈಕಿ 13 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿ 251 ರನ್ ಕಲೆಹಾಕಿದ್ದಾರೆ. ಕಳೆದ ಐರ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ 77 ರನ್ ಚಚ್ಚಿ ತಂಡಕ್ಕೆ ಆಸರೆಯಾಗಿದ್ದು, ಇದು ಸಂಜು ಸ್ಯಾಮ್ಸನ್ ತಮ್ಮ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಗಳಿಸಿರುವ ಅತ್ಯಧಿಕ ರನ್ ಆಗಿದೆ ಹಾಗೂ ಏಕೈಕ ಅರ್ಧಶತಕ ಕೂಡ ಆಗಿದೆ. ಸದ್ಯ ಸಂಜು ಸ್ಯಾಮ್ಸನ್ ತನಗೆ ದೊರೆತಿರುವ ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅವಕಾಶ ಲಭಿಸುವ ಸಾಧ್ಯತೆಗಳಿವೆ ಎಂದು ಕೆಲ ಕ್ರಿಕೆಟ್ ಪ್ರೇಮಿಗಳು ಹೇಳುತ್ತಿದ್ದರೆ, ಇನ್ನೂ ಕೆಲವು ಕ್ರಿಕೆಟ್ ಪ್ರೇಮಿಗಳು ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಹೆಚ್ಚು ಮಿಂಚಿರದ ಆಟಗಾರನಿಗೆ ಮಣೆ ಹಾಕಿದ್ದಾರೆ ಎಂದೂ ಸಹ ಮಾತನಾಡಿಕೊಳ್ಳುತ್ತಿದ್ದಾರೆ.

ಸಂಜು ಸ್ಯಾಮ್ಸನ್ ಸೇರ್ಪಡೆ ನಂತರ ಟೀಮ್ ಇಂಡಿಯಾ ಹೀಗಿದೆ
ಸಂಜು ಸ್ಯಾಮ್ಸನ್ ಕೆಎಲ್ ರಾಹುಲ್ ಬದಲಿ ಆಟಗಾರನಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ತಂಡಕ್ಕೆ ಸೇರ್ಪಡೆಗೊಂಡ ನಂತರ ಸ್ಕ್ವಾಡ್ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್ , ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications