IND vs WI: ಪ್ರಥಮ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಈ ಇಬ್ಬರು 2ನೇ ಪಂದ್ಯದಿಂದ ಹೊರಕ್ಕೆ!

ಸದ್ಯ ಕೆರಿಬಿಯನ್ನರ ನಾಡಿನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಇತ್ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ ಟ್ವೆಂಟಿ ಸರಣಿ ಆಯೋಜನೆಗೊಂಡಿದ್ದು, ಮೊದಲಿಗೆ ಏಕದಿನ ಸರಣಿ ನಡೆಯುತ್ತಿದೆ.
ಜುಲೈ 22ರ ಶುಕ್ರವಾರದಂದು ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಶಿಖರ್ ಧವನ್, ಶುಬ್ ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಕಲೆಹಾಕಿತು. ಅತ್ತ ಈ ಗುರಿಯನ್ನು ಮುಟ್ಟುವಲ್ಲಿ ಅಂತಿಮ ಹಂತದಲ್ಲಿ ಎಡವಿದ ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 305 ರನ್ ಕಲೆಹಾಕಿತು. ಈ ಮೂಲಕ ಟೀಮ್ ಇಂಡಿಯಾ 3 ರನ್‌ಗಳ ರೋಚಕ ಜಯ ಸಾಧಿಸಿತು.
ಭಾರತ ತಂಡ ಈ ಪಂದ್ಯದಲ್ಲಿ ಜಯ ಸಾಧಿಸಿತಾದರೂ ತಂಡ ಕೆಲ ನ್ಯೂನ್ಯತೆಗಳಿಂದ ಕೂಡಿತ್ತು. ಟೀಮ್ ಇಂಡಿಯಾ ಪರ ಮೇಲಿನ ಕ್ರಮಾಂಕದ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ, ನಂತರ ಕಣಕ್ಕಿಳಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆ ಉತ್ತಮ ಆಟವನ್ನು ಮುಂದುವರೆಸುವಲ್ಲಿ ಯಶಸ್ವಿಯಾಗಲಿಲ್ಲ. ಹಾಗೂ ಬೌಲಿಂಗ್ ವಿಭಾಗದಲ್ಲಿಯೂ ಕೂಡ ಟೀಮ್ ಇಂಡಿಯಾವನ್ನು ಕೆಲ ಸಮಸ್ಯೆಗಳು ಕಾಡಿದ್ದವು. ಹೀಗೆ ಪ್ರಥಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದು ವಿಫಲವಾದ ಇಬ್ಬರು ಆಟಗಾರರನ್ನು ಇಂದು ( ಜುಲೈ 24 ) ನಡೆಯಲಿರುವ ದ್ವಿತೀಯ ಏಕದಿನ ಪಂದ್ಯದಿಂದ ಹೊರ ಹಾಕುವ ಸಾಧ್ಯತೆಗಳು ಹೆಚ್ಚಿವೆ. ಈ ಕುರಿತಾದ ಮತ್ತಷ್ಟು ಮಾಹಿತಿ ಕೆಳಕಂಡಂತಿದೆ.

ದ್ವಿತೀಯ ಪಂದ್ಯದಲ್ಲಿ ಇಬ್ಬರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ
ಪ್ರಥಮ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ವಿಕೆಟ್ ಹಿಂದೆ ಉತ್ತಮ ಪ್ರದರ್ಶನ ನೀಡಿದರಾದರೂ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾಗಲಿಲ್ಲ. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ 18 ಎಸೆತಗಳಲ್ಲಿ ಕೇವಲ 12 ರನ್ ಕಲೆಹಾಕಿ ನಿರಾಸೆ ಮೂಡಿಸಿದರು. ಇನ್ನು ತನ್ನ ಪಾಲಿನ ಎಲ್ಲಾ 10 ಓವರ್ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ 62 ರನ್ ನೀಡಿದರು ಹಾಗೂ ಯಾವುದೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಹೀಗೆ ಪ್ರಥಮ ಪಂದ್ಯದಲ್ಲಿ ನಿರೀಕ್ಷಿಸಿದ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿರುವ ಸಂಜು ಸ್ಯಾಮ್ಸನ್ ಮತ್ತು ಪ್ರಸಿದ್ಧ್ ಕೃಷ್ಣ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಿಂದ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಸ್ಯಾಮ್ಸನ್ ಮತ್ತು ಪ್ರಸಿದ್ಧ್ ಕೃಷ್ಣ ಬದಲು ಕಣಕ್ಕಿಳಿಯುವವರು ಯಾರು?
ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಮತ್ತು ಬೌಲರ್ ಪ್ರಸಿದ್ಧ್ ಕೃಷ್ಣ ವಿಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಿಂದ ಹೊರಗುಳಿದರೆ, ಬದಲಿ ಆಟಗಾರರಾಗಿ ವಿಕೆಟ್ ಕೀಪರ್ ಇಶಾನ್ ಕಿಶನ್ ಮತ್ತು ವೇಗಿ ಅರ್ಷ್ ದೀಪ್ ಸಿಂಗ್ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿವೆ. ಆರಂಭಿಕರಾಗಿ ಶಿಖರ್ ಧವನ್ ಮತ್ತು ಶುಬ್ ಮನ್ ಗಿಲ್ ಉತ್ತಮ ಪ್ರದರ್ಶನ ನೀಡಿರುವ ಕಾರಣ ದ್ವಿತೀಯ ಏಕದಿನ ಪಂದ್ಯದಲ್ಲಿಯೂ ಈ ಜೋಡಿಯೇ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಹಾಗೂ ಸಂಜು ಸ್ಯಾಮ್ಸನ್ ಬದಲಾಗಿ ಕಣಕ್ಕಿಳಿಯಲಿರುವ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಮರ್ಥ್ಯವನ್ನು ಹೊಂದಿದ್ದು, ಆರಂಭಿಕರು ಬೇಗನೇ ಔಟ್ ಆದರೂ ಸಹ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬೌಂಡರಿಗಳನ್ನು ಬಾರಿಸಿ ಎದುರಾಳಿಗಳ ಮೇಲೆ ಒತ್ತಡ ಹೇರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ ಏಕೈಕ ಟಿ ಟ್ವೆಂಟಿ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಮಿಂಚಿದ್ದ ಅರ್ಶದೀಪ್ ಸಿಂಗ್ ಪ್ರಸಿದ್ಧ್ ಕೃಷ್ಣ ಬದಲಾಗಿ ಕಣಕ್ಕಿಳಿದು ಉತ್ತಮ ಬೌಲಿಂಗ್ ಮಾಡುವ ನಿರೀಕ್ಷೆಯಿದೆ.

ಈ ಇಬ್ಬರು ಬದಲಾದರೆ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಹೀಗಿರಲಿದೆ
ಸಂಜು ಸ್ಯಾಮ್ಸನ್ ಬದಲಾಗಿ ಇಶಾನ್ ಕಿಶನ್ ಮತ್ತು ಪ್ರಸಿದ್ಧ್ ಕೃಷ್ಣ ಬದಲಾಗಿ ಅರ್ಷದೀಪ್ ಸಿಂಗ್ ತಂಡ ಸೇರಿದರೆ ಟೀಮ್ ಇಂಡಿಯಾ ಹೀಗಿರಲಿದೆ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications