ಕೋಲ್ಕತ್ತಾ: ಟಿ20 ವಿಶ್ವಕಪ್ನ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ. ಟಿ20 ಸರಣಿಯ ಕ್ವಾರ್ಟರ್ ಫೈನಲ್ ಪಂದ್ಯ ಎಂದು ಈ ಪಂದ್ಯವನ್ನು ಬಣ್ಣಿಸಲಾಗುತ್ತಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಸೆಮಿಫೈನಲ್ ಪ್ರವೇಶಿಸಲಿದೆ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ವಿಶ್ವಾಸವನ್ನು ಹೊಂದಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಜಿಂಬಾಬ್ವೆ ವಿರುದ್ಧ ದೊಡ್ಡ ಅಂತರದ ಜಯ ಸಾಧಿಸಿದೆ. ಅಲ್ಲದೆ ಎರಡೂ ತಂಡಗಳು ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಪಂದ್ಯವನ್ನು ಸೋತಿವೆ. ಹೀಗಾಗಿ ಎರಡೂ ತಂಡಗಳಿಗೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಎರಡೂ ತಂಡಗಳಲ್ಲಿ ಹೊಡಿ ಬಡಿ ತಂಡದ ಸ್ಟಾರ್ ಆಟಗಾರರು ಇದ್ದಾರೆ. ಹೀಗಾಗಿ ಪಂದ್ಯ ಕುತೂಹಲ ಮೂಡಿಸಿದೆ.

ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಗೆಲುವು ದಾಖಲಿಸಿ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಸೋತು ವಿಂಡೀಸ್ ಮೈದಾನಕ್ಕೆ ಇಳಿಯುತ್ತಿದೆ. ಹೀಗಾಗಿ ಎರಡೂ ತಂಡಗಳ ನಡುವಿನ ಕಾಳಗ ಅಭಿಮಾನಿಗಳ ಚಿತ್ತ ಕದ್ದಿದೆ.
ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಲಯಕ್ಕೆ ಮರಳಿರುವುದು ತಂಡದ ಚಿಂತೆಯನ್ನು ದೂರ ಮಾಡಿದೆ. ಅಲ್ಲದೆ ಇವರೊಂದಿಗೆ ಸಂಜು ಸ್ಯಾಮ್ಸನ್ ಅವರು ಇನಿಂಗ್ಸ್ ಆರಂಭಿಸುತ್ತಿದ್ದು, ಆರಂಭದಲ್ಲಿ ದೊಡ್ಡ ದೊಡ್ಡ ಹೊಡೆತಗಳ ಬಳಿಕ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲರು. ಈ ಇಬ್ಬರೂ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಆರಂಭವನ್ನು ನೀಡಬೇಕಿದೆ. ಇನ್ನು ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಂಡಕ್ಕೆ ಆಧಾರವಾಗಬೇಕಿದೆ.

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡಿ ನೆರವಾಗಬೇಕಿದೆ. ಇನ್ನು ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳಲಿರುವ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬೇಕಿದೆ.

ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ನೋಡುವುದು ಕಡಿಮೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ಹಾಗೂ ಅರ್ಶದೀಪ್ ಸಿಂಗ್ ಆರಂಭದಲ್ಲಿ ಹೊಸ ಬೌಲ್ ಹಂಚಿಕೊಳ್ಳಲಿದ್ದಾರೆ. ನುರಿತ ಸ್ಪಿನ್ ಬೌಲರ್ ಆಗಿ ವರುಣ್ ಚಕ್ರವರ್ತಿ ಸ್ಥಾನ ಪಡೆಯಲಿದ್ದಾರೆ. ಇವರು ತವರಿನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಪರಿಣಾಮಕಾರಿ ಬೌಲಿಂಗ್ ನಡೆಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರ ಮೇಲೂ ಒತ್ತಡವಿದೆ.

ವೆಸ್ಟ್ ಇಂಡೀಸ್ ತಂಡದಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಅಲ್ಲದೆ ಈ ಆಟಗಾರರಿಗೆ ಭಾರತದಲ್ಲಿ ಆಡಿದ ಅಪಾರ ಅನುಭವ ಇದೆ. ಈ ತಂಡದ ಆಟಗಾರರು ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿಗಳ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಭಾರತ ಈ ತಂಡವನ್ನು ಹಗುರವಾಗಿ ಪರಿಗಣಿಸಬಾರದು. ಇನ್ನು ಶಿಮ್ರೋನ್ ಹೆಟ್ಮೆಯರ್, ಶಾಯ್ ಹೋಪ್ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲ ಅಟಗಾರರು. ರೋವ್‌ಮನ್ ಪೊವೆಲ್ ಸಹ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಬೇಕಿದೆ. ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್ ತಂಡದ ಅಗತ್ಯಕ್ಕೆ ತಕ್ಕಂತೆ ಆಟವನ್ನು ಆಡಬಲ್ಲರು. ಮ್ಯಾಥ್ಯೂ ಫೋರ್ಡ್, ಗುಡಕೇಶ್ ಮೋಟೀ, ರೋಸ್ಟನ್ ಚೇಸ್ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಬೇಕಿದೆ.