ಭಾರತ vs ವಿಂಡೀಸ್: ಸರಣಿ ಗೆದ್ದಿರುವ ಭಾರತ 3ನೇ ಏಕದಿನ ಪಂದ್ಯದಿಂದ ಈ ಮೂವರನ್ನು ಹೊರಗಿಡಬಹುದು

ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ತಂಡದ ಪೂರ್ಣಾವಧಿ ನಾಯಕ ರೋಹಿತ್ ಶರ್ಮಾ ಅಲಭ್ಯತೆಯ ಹೊರತಾಗಿಯೂ ಕೆರಿಬಿಯನ್ನರ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು ಈಗಾಗಲೇ ಕೈವಶ ಮಾಡಿಕೊಂಡಿದೆ.
ಜುಲೈ 22ರ ಶುಕ್ರವಾರದಂದು ನಡೆದಿದ್ದ ಇತ್ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3 ರನ್‌ಗಳ ರೋಚಕ ಜಯವನ್ನು ಸಾಧಿಸಿದ ಟೀಮ್ ಇಂಡಿಯಾ ನಿನ್ನೆ ( ಜುಲೈ 24 ) ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 2 ವಿಕೆಟ್‍ಗಳ ರೋಚಕ ಗೆಲುವನ್ನು ಸಾಧಿಸುವುದರ ಮೂಲಕ ಸರಣಿಯನ್ನು ಕೈವಶ ಪಡಿಸಿಕೊಂಡಿದ್ದು, ಸದ್ಯ ಮೂರನೇ ಏಕದಿನ ಪಂದ್ಯವನ್ನು ಗೆದ್ದು ವೆಸ್ಟ್ ಇಂಡೀಸ್ ತಂಡಕ್ಕೆ ತವರಿನಲ್ಲಿಯೇ ವೈಟ್ ವಾಶ್ ಬಳಿಯುವತ್ತ ಚಿತ್ತ ನೆಟ್ಟಿದೆ.
ಇನ್ನು ದ್ವಿತೀಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ತನ್ನ ಆಡುವ ಬಳಗದಲ್ಲಿ ಪ್ರಥಮ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡದ ಆಡುವ ಬಳಗಕ್ಕಿಂತ ಒಂದು ಬದಲಾವಣೆಯನ್ನು ಮಾಡಿಕೊಂಡಿತ್ತು. ದ್ವಿತೀಯ ಏಕದಿನ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಅವರನ್ನು ಹೊರಗಿಟ್ಟು ಆವೇಶ್ ಖಾನ್ ಅವರಿಗೆ ಅವಕಾಶವನ್ನು ನೀಡಲಾಗಿತ್ತು. ಈ ಮೂಲಕ ಅವೇಶ್ ಖಾನ್ ತನ್ನ ಚೊಚ್ಚಲ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದರು. ಸದ್ಯ ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಜುಲೈ 27ರ ಬುಧವಾರದಂದು ನಡೆಯಲಿರುವ ತೃತೀಯ ಏಕದಿನ ಪಂದ್ಯದಲ್ಲಿಯೂ ತಂಡದ ಆಡುವ ಬಳಗದಲ್ಲಿ 3 ಪ್ರಯೋಗಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಅವುಗಳ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

1. ಶುಬ್ಮನ್ ಗಿಲ್ ಬದಲು ರುತುರಾಜ್ ಗಾಯಕ್ವಾಡ್
ವೆಸ್ಟ್ ಇಂಡೀಸ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡ ಶುಬ್ ಮನ್ ಗಿಲ್ ಪ್ರಥಮ ಪಂದ್ಯದಲ್ಲಿ 64 ಮತ್ತು ಎರಡನೇ ಪಂದ್ಯದಲ್ಲಿ 43 ರನ್ ಕಲೆ ಹಾಕಿ ಉತ್ತಮ ಆಟವನ್ನಾಡಿದರು. ಹೀಗೆ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿರುವ ಶುಬ್ ಮನ್ ಗಿಲ್ ಅವರನ್ನು ತೃತೀಯ ಏಕದಿನ ಪಂದ್ಯದಿಂದ ಹೊರಗಿಟ್ಟು ಇನ್ನೂ ಸಹ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಬೇಕಿರುವ ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

2. ಸ್ಯಾಮ್ಸನ್ ಬದಲು ಇಶಾನ್ ಕಿಶನ್
ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ತೃತೀಯ ಏಕದಿನ ಪಂದ್ಯಕ್ಕೆ ತಂಡದಲ್ಲಿ ಪ್ರಯೋಗಾತ್ಮಕ ಬದಲಾವಣೆ ಮಾಡಲು ಬಯಸಿದರೆ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟು ಇಶಾನ್ ಕಿಶನ್ ಅವರಿಗೆ ಆಡುವ ಅವಕಾಶ ನೀಡುವ ಸಾಧ್ಯತೆಗಳಿವೆ. ಪ್ರಥಮ ಏಕದಿನ ಪಂದ್ಯದಲ್ಲಿ ವೈಡ್ ಎಸೆತವನ್ನು ತಡೆಯುವ ಮೂಲಕ ಬೌಂಡರಿ ತಪ್ಪಿಸಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದ ಸಂಜು ಸ್ಯಾಮ್ಸನ್ ದ್ವಿತೀಯ ಏಕದಿನ ಪಂದ್ಯದಲ್ಲಿ ತನ್ನ ಚೊಚ್ಚಲ ಏಕದಿನ ಅರ್ಧ ಶತಕವನ್ನು ಬಾರಿಸಿ ಉತ್ತಮ ಆಟವನ್ನಾಡಿದ್ದರು.

3. ಸಿರಾಜ್ ಬದಲು ಅರ್ಷದೀಪ್
ವಿಂಡೀಸ್ ವಿರುದ್ಧದ ತೃತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಲ ಪ್ರಯೋಗಾತ್ಮಕ ಬದಲಾವಣೆಗಳನ್ನು ಮಾಡಿಕೊಂಡರೆ, ಮೊಹಮ್ಮದ್ ಸಿರಾಜ್ ಅವರನ್ನು ಹೊರಗಿಟ್ಟು ಅರ್ಷದೀಪ್ ಸಿಂಗ್ ಅವರಿಗೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ನೀಡುವ ಸಾಧ್ಯತೆಗಳಿವೆ. ಅರ್ಷದೀಪ್ ಸಿಂಗ್ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಪಂದ್ಯವೊಂದರಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಗಿಟ್ಟಿಸಿಕೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ಆಟಗಾರನ ಏಕದಿನ ಕ್ರಿಕೆಟ್ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಂಡುಕೊಳ್ಳಲು ಟೀಮ್ ಇಂಡಿಯಾ ಅವಕಾಶ ನೀಡುವ ಸಾಧ್ಯತೆಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications