ಭಾನುವಾರ, ಜೂನ್ 11ರಂದು ಲಂಡನ್‌ನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಭಾರತ ತಂಡ 209 ರನ್‌ಗಳ ಅಂತರದಲ್ಲಿ ಸೋಲು ಕಂಡಿತು.
ಇದೇ ವೇಳೆ ಎರಡೂ ಇನ್ನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡ ನಂತರ, ಭಾರತೀಯ ಟೆಸ್ಟ್ ತಂಡದಲ್ಲಿ ಚೇತೇಶ್ವರ ಪೂಜಾರ ಅವರ ಭವಿಷ್ಯವು ಮತ್ತೊಮ್ಮೆ ಅಪಾಯದ ಸ್ಥಿತಿಯಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಕನಿಷ್ಠ ಒಂದು ಅರ್ಧಶತಕ ಗಳಿಸಲು ವಿಫಲರಾದರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್2023-25 ಚಕ್ರದ ಭಾಗವಾಗಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೂಲಕ ಭಾರತ ಕ್ರಿಕೆಟ್ ತಂಡವು ಒಂದು ತಿಂಗಳ ವಿರಾಮದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಋತುವಿನಲ್ಲಿ ಕೆಲವು ಯುವ ಆಟಗಾರರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಕೆಲವು ಬದಲಾವಣೆಗಳನ್ನು ಮಾಡಲು ಭಾರತೀಯ ಆಯ್ಕೆ ಸಮಿತಿ ಪರಿಗಣಿಸಲಿದೆ ಎಂದು ವರದಿ ಮಾಡಿದೆ.
ರೋಹಿತ್ ಶರ್ಮಾ ಅವರೇ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ನಾಯಕರಾಗಿ ಮುಂದುವರಿಯುವ ನಿರೀಕ್ಷೆಯಿದೆ. "ಪ್ರತಿಯೊಂದು ಟೆಸ್ಟ್ ಪಂದ್ಯವೂ ಪ್ರಮುಖವಾಗಿದೆ ಮತ್ತು ಅದರ ಫಲಿತಾಂಶವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಪಾಯಿಂಟ್‌ಗಳ ಪಟ್ಟಿಗೆ ಕೊಡುಗೆ ನೀಡುತ್ತದೆ. ಟೆಸ್ಟ್ ಪಂದ್ಯದಲ್ಲಿ ಪ್ರಯೋಗ ಮಾಡಲು ಸಾಧ್ಯವಿಲ್ಲ," ಎಂದು ಕ್ರಿಕ್‌ಬಜ್ ವೆಬ್‌ಸೈಟ್ ತಿಳಿಸಿದೆ.
ರೋಹಿತ್ ಶರ್ಮಾ ಹೊರತಾಗಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಿದ ಆರಂಭಿಕ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ ಅಗ್ರ ಕ್ರಮಾಂಕದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ವೆಸ್ಟ್ ಇಂಡೀಸ್‌ನ ಡೊಮಿನಿಕಾ ಮತ್ತು ಟ್ರಿನಿಡಾಡ್‌ನಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಲ್ಲಿ ಚೇತೇಶ್ವರ ಪೂಜಾರ ಸ್ಥಾನವು ಅನುಮಾನದಲ್ಲಿದೆ.
ಚೇತೇಶ್ವರ ಪೂಜಾರ ಅವರ ಬದಲಿಗೆ ಮೂರನೇ ಕ್ರಮಾಂಕದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ಅವಕಾಶ ನೀಡಿ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿಸುವ ಸಾಧ್ಯತೆ ಇದೆ.
ಚೇತೇಶ್ವರ ಪೂಜಾರ 2020ರಿಂದ 28 ಟೆಸ್ಟ್‌ಗಳ 52 ಇನ್ನಿಂಗ್ಸ್‌ಗಳಲ್ಲಿ 29.69ರ ನಿರಾಶಾದಾಯಕ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಈ ವೇಳೆ ಅವರು ಕೇವಲ ಒಂದು ಶತಕ ಸೇರಿದಂತೆ 11 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಡಿಸೆಂಬರ್ 2022ರಲ್ಲಿ ಚಿತ್ತಗಾಂಗ್ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ 90 ರನ್ ಮತ್ತು ಅಜೇಯ 102 ರನ್‌ಗಳನ್ನು ಹೊರತುಪಡಿಸಿದರೆ, ಅವರ ಸರಾಸರಿಯು 26.31ಕ್ಕೆ ಇಳಿಕೆಯಾಗುತ್ತದೆ.
ಇನ್ನು ಈ ವರ್ಷದ ಕೊನೆಯಲ್ಲಿ ನಡೆಯುವ ಏಷ್ಯಾ ಕಪ್ 2023 ಮತ್ತು ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಕಾರಣದಿಂದಾಗಿ, ಉಳಿದ ಅಂತಾರಾಷ್ಟ್ರೀಯ ಋತುವಿನಲ್ಲಿ ಮೊಹಮ್ಮದ್ ಶಮಿ ಅವರ ಕೆಲಸದ ಹೊರೆಯನ್ನು ನೋಡಬೇಕಾಗುತ್ತದೆ.
ಭಾರತೀಯ ಆಯ್ಕೆ ಸಮಿತಿ ಮೊಹಮ್ಮದ್ ಶಮಿ ಅವರಿಗೆ ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ನೀಡುವ ಸಾಧ್ಯತೆಯೂ ಇದೆ. ಮೊಹಮ್ಮದ್ ಶಮಿ ಹೊರತಾಗಿ ಮತ್ತೊಬ್ಬ ವೇಗಿ ಮೊಹಮ್ಮದ್ ಸಿರಾಜ್ ಕೂಡ ವಿಶ್ರಾಂತಿ ಪಡೆಯಬಹುದು. ಈ ತಿಂಗಳು ಕೌಂಟಿಗೆ ಪದಾರ್ಪಣೆ ಮಾಡಿದ ಅರ್ಶ್‌ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಕೂಡ ಭಾರತ ಟಿ20 ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಈ ಐಪಿಎಲ್ ಋತುವಿನಲ್ಲಿ 14 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಮಾತ್ರ ಸ್ಥಾನ ಪಡೆದ ಈ ಆಟಗಾರರು ರಾಷ್ಟ್ರೀಯ ತಂಡದ ಕರೆ ಸ್ವೀಕರಿಸಬಹುದು. ಆದರೆ ಯುವ ಬೌಲರ್‌ಗಳನ್ನು ಟೆಸ್ಟ್, ಏಕದಿನ ತಂಡಕ್ಕೆ ಪರಿಗಣಿಸುವ ಸಾಧ್ಯತೆ ಕಡಿಮೆ ಇದ್ದು, ಟಿ20 ಪಂದ್ಯಗಳಿಗೆ ಪರಿಗಣಿಸಬಹುದು.
ಇನ್ನು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕೂಡ ಇಶಾನ್ ಕಿಶನ್ ಜೊತೆಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ತಂಡಕ್ಕೆ ಪುನರಾಗಮನ ಮಾಡಲು ಸಜ್ಜಾಗಿದ್ದಾರೆ.