IND vs WI: ಪ್ರಥಮ ಏಕದಿನ ಪಂದ್ಯದಲ್ಲಿ ಯಾರನ್ನು ಕಣಕ್ಕಿಳಿಸಬೇಕು? ದ್ರಾವಿಡ್‌ಗೆ ಈ 3 ಅಂಶಗಳೇ ತಲೆನೋವು!

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಯಶಸ್ವಿಯಾಗಿ ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಜಯ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡು 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸಲು ಮುಂದಾಗಿದೆ.
ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಹಲವು ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಕೂಡ ಆಯ್ಕೆಯಾಗಿದ್ದರೆ, ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗದಿದ್ದ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಮತ್ತು ಶುಬ್ ಮನ್ ಗಿಲ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಸೇರಿದ್ದಾರೆ. ಇನ್ನು ಮೊದಲಿಗೆ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಈ ಸರಣಿಗೆ ತಂಡದ ಪೂರ್ಣಾವಧಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಕೆಲ ಪ್ರಮುಖ ಆಟಗಾರರು ವಿಶ್ರಾಂತಿ ಕಾರಣದಿಂದಾಗಿ ಹೊರಗುಳಿದಿದ್ದಾರೆ.
ಹೀಗಾಗಿ ಟೀಮ್ ಇಂಡಿಯಾ ನಾಯಕತ್ವವನ್ನು ಶಿಖರ್ ಧವನ್ ವಹಿಸಿಕೊಂಡಿದ್ದು, ಈಗಾಗಲೇ ತಂಡ ವೆಸ್ಟ್ ಇಂಡೀಸ್ ತಲುಪಿದೆ. ಸದ್ಯ ಏಕದಿನ ಸರಣಿಯ ಕುರಿತಾಗಿ ಸಾಕಷ್ಟು ಕುತೂಹಲ ಮೂಡಿದ್ದು, ಯಾವ ಕ್ರಮಾಂಕದಲ್ಲಿ ಯಾವ ಆಟಗಾರರು ಕಣಕ್ಕಿಳಿಯಬಹುದು ಎಂಬ ಪ್ರಶ್ನೆ ಎದ್ದಿದೆ. ಪ್ರಥಮ ಪಂದ್ಯಕ್ಕೆ ತಂಡವನ್ನು ಯಾವ ರೀತಿ ಆಯೋಜನೆ ಮಾಡಬೇಕು ಮತ್ತು ಯಾವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ತಲೆನೋವು ಇದೀಗ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಶುರುವಾಗಿದೆ. ಪ್ರಮುಖ ಆಟಗಾರರಿಲ್ಲದ ತಂಡದ ಕುರಿತಾಗಿ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಲೆನೋವು ತಂದಿರುವ ಆ 3 ಅಂಶಗಳ ಕುರಿತಾದ ವಿವರ ಕೆಳಕಂಡಂತಿದೆ.

ತಲೆನೋವು ತಂದಿವೆ 3 ಅಂಶಗಳು
ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಕುರಿತಾಗಿ ತಲೆನೋವು ತಂದಿರುವ 3 ಅಂಶಗಳ ಪಟ್ಟಿ
1. ಶಿಖರ್ ಧವನ್ ಜತೆ ಯಾರು ಆರಂಭಿಕರಾಗಿ ಕಣಕ್ಕೆ ಇಳಿಯುತ್ತಾರೆ?
2. ತಂಡದ ಮಧ್ಯಮ ಕ್ರಮಾಂಕವನ್ನು ಯಾವ ರೀತಿ ರೂಪಿಸಬೇಕು?
3. ತಂಡದ ಬೌಲಿಂಗ್ ಕಾಂಬಿನೇಷನ್ ಹೇಗಿರಬೇಕು?

ತಂಡದ ಆರಂಭಿಕ ಆಟಗಾರ ಮತ್ತು ಮಧ್ಯಮ ಕ್ರಮಾಂಕ
ಟೀಮ್ ಇಂಡಿಯಾ ಪರ ನಾಯಕ ಶಿಖರ್ ಧವನ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವುದು ಖಚಿತ. ಧವನ್ ಜತೆಗೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲು ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶುಬ್ ಮನ್ ಗಿಲ್ ಮತ್ತು ಸಂಜು ಸ್ಯಾಮ್ಸನ್ ರೀತಿಯ ಆಟಗಾರರ ಆಯ್ಕೆಗಳು ಇದ್ದು, ಈ ಪೈಕಿ ಇಶಾನ್ ಕಿಶನ್ ಉತ್ತಮ ಆಯ್ಕೆ ಎನ್ನಬಹುದು. ಆದರೆ ಧವನ್ ಮತ್ತು ಇಶಾನ್ ಕಿಶನ್ ಇಬ್ಬರೂ ಸಹ ಎಡಗೈ ಬ್ಯಾಟ್ಸ್‌ಮನ್‌ಗಳಾಗಿರುವುದರಿಂದ ತಂಡ ಎಡಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಓಪನಿಂಗ್ ಕಾಂಬಿನೇಷನ್ ಬಳಸುವ ಸಾಧ್ಯತೆಗಳಿವೆ. ಹೀಗಾಗಿ ಧವನ್ ಜತೆ ಯಾರನ್ನು ಆರಂಭಿಕರಾಗಿ ಕಣಕ್ಕೆ ಇಳಿಸಬೇಕು ಎಂಬ ವಿಷಯ ಇದೀಗ ದ್ರಾವಿಡ್ ಅವರಿಗೆ ತಲೆನೋವಾಗಿದೆ. ಇನ್ನು ಶುಬ್ ಮನ್ ಗಿಲ್ ಮೂರನೇ ಕ್ರಮಾಂಕ ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುವುದು ಖಚಿತ. ಹೀಗಾಗಿ ಮಧ್ಯಮ ಕ್ರಮಾಂಕದ 2 ಸ್ಥಾನಗಳಿಗೆ ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಅಯ್ಯರ್ ಈ ಮೂವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬುದು ಪ್ರಶ್ನೆಯಾಗಿದೆ.

ಬೌಲಿಂಗ್ ಕಾಂಬಿನೇಷನ್
ಇನ್ನು ತಂಡದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇಲ್ಲದ ಕಾರಣ ಆತನ ಸ್ಥಾನ ತುಂಬುವ ಸಾಮರ್ಥ್ಯವಿರುವ ವೇಗದ ಆಲ್ರೌಂಡರ್ ಆಟಗಾರನನ್ನು ಆರಿಸಬೇಕಾದ ಅಗತ್ಯವಿದೆ. ಇಂಗ್ಲೆಂಡ್ ವಿರುದ್ಧದ ಒಂದೇ ಒಂದು ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡಿದ್ದ ಅರ್ಷದೀಪ್ ಸಿಂಗ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅರ್ಷದೀಪ್ ಸಿಂಗ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತ. ಇನ್ನು ಅರ್ಷದೀಪ್ ಸಿಂಗ್ ಜತೆ ಶಾರ್ದೂಲ್ ಠಾಕೂರ್ ಕೂಡಾ ಕಣಕ್ಕಿಳಿಯುವುದು ಖಚಿತ ಎಂದು ಹೇಳಬಹುದಾಗಿದ್ದು, ಯುಜುವೇಂದ್ರ ಚಾಹಲ್ ಸ್ಪಿನ್ನರ್ ಆಗಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಹೀಗಾಗಿ ಉಳಿದಿರುವ ಒಂದು ವೇಗದ ಬೌಲರ್ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಅಥವಾ ಪ್ರಸಿದ್ಧ್ ಕೃಷ್ಣ ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಉಂಟಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications