ಸುದೀರ್ಘ ಒಂದು ತಿಂಗಳ ಕಾಲದ ಟೀಮ್ ಇಂಡಿಯಾದ ವಿರಾಮ ಅವಧಿ ಮುಕ್ತಾಯವಾಗುತ್ತಿದೆ. ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಮುಂದಿನವಾರದಿಂದ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭದಲ್ಲಿ ನಡೆಯಲಿದ್ದು ಅದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದೆ. ಈ ಸರಣಿಗಾಗಿ ಟೀಮ್ ಇಂಡಿಯಾ ಪೂರ್ಣ ಪ್ರಮಾಣದ ಆಟಗಾರರ ಪಡೆಯನ್ನು ಕೆರೆಬಿಯನ್ ನಾಡಿಗೆ ಕಳುಹಿಸಿದೆ.
ಇನ್ನು ಈ ಸರಣಿಯಲ್ಲಿ ಭಾಗವಹಿಸುವ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ವೃತ್ತಿ ಜೀವನದ ಎರಡು ಮಹತ್ವದ ಮೈಲಿಗಲ್ಲು ಸಾಧಿಸಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಈವರೆಗೆ ಒಟ್ಟು 25385 ರನ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ದಿಗ್ಗಜ ಜಾಕ್ ಕ್ಯಾಲಿಸ್ ಈಗ ವಿರಾಟ್ ಕೊಹ್ಲಿಗಿಂತ ಮುಂದಿದ್ದು 519 ಅಂತಾರಾಷ್ಟ್ರೀಯ ಪಂದ್ಯಗಳಿಂದ 25534 ರನ್ ಗಳಿಸಿ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಇದೀಗ ಜಾಕ್ ಕ್ಯಾಲಿಸ್ ಅವರ ಈ ಮೈಲಿಗಲ್ಲನ್ನು ಹಿಂದಿಕ್ಕುವ ಅವಕಾಶ ವಿರಾಟ್ ಕೊಹ್ಲಿ ಮುಂದಿದ್ದು ಈ ಸಾಧನೆಗಾಗಿ ಕೊಹ್ಲಿ 150 ರನ್‌ಗಳನ್ನು ಗಳಿಸಬೇಕಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 7 ಇನ್ನಿಂಗ್ಸ್‌ಗಳನ್ನು ಕೊಹ್ಲಿ ಆಡಲಿರುವ ಕಾರಣ ಈ ಪ್ರವಾಸದಲ್ಲಿ ಕೊಹ್ಲಿ ಈ ಸಾಧನೆ ಮಾಡುವುದು ನಿಶ್ಚಿತ. ಈ ಸಾಧನೆಯನ್ನು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿಯೇ ಪೂರ್ತಿಗೊಳಿಸುವ ನಿರೀಕ್ಷೆಯಿದೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ದೊಡ್ಡ ಮೈಲಿಗಲ್ಲು ಸಾಧಿಸಲಿದ್ದಾರೆ. ಜುಲೈ 20ರಿಂದ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿರುವ ಪಂದ್ಯ ವಿರಾಟ್ ಕೊಹ್ಲಿ ವೃತ್ತಿ ಜೀವನದ 500ನೇ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದ್ದು ಈ ವಿಶೇಷ ಸಾಧನೆ ಮಾಡಿದ ಅಪರೂಪದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ಈವರೆಗೆ 498 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಮೂಲಕ 499 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಪಾಕಿಸ್ಥಾನದ ಇನ್ಜಮಾಮ್ ಉಲ್ ಹಕ್ ಸಾಧನೆಯನ್ನು ಸರಿಗಟ್ಟಲಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ಪಂದ್ಯಗಳನ್ನಾಡಲಿರುವ ಕೇವಲ 10ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇನ್ನು ಈ ಸಾಧನೆ ಮಾಡಿದ ನಾಲ್ಕನೇ ಭಾರತೀಐ ಆಟಗಾರ ಎಂಬ ಹೆಗ್ಗಳಿಕೆಯನ್ನು ಕೂಡ ಕೊಹ್ಲಿ ಹೊಂದಲಿದ್ದಾರೆ. ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ ಉಳಿದ ಮೂವರು ಭಾರತೀಯ ಕ್ರಿಕೆಟಿಗರು. 664 ಪಂದ್ಯಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.