ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಒಂದೂವರೆ ದಶಕದಿಂದ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ವಿಭಾಗದ ಆಧಾರಸ್ತಂಭವಾಗಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ.
ವಿರಾಟ್ ಕೊಹ್ಲಿ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಭಾರತ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದೆ. ಇದೇ ವೇಳೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಮೀರಿಸಿ ವಿರಾಟ್ ಕೊಹ್ಲಿ ಗಣ್ಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 296ನೇ ಬಾರಿಗೆ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಗೆಲುವಿನ ಭಾಗವಾದರು. ಇದು ಮಾಜಿ ನಾಯಕ ಎಂಎಸ್ ಧೋನಿಗಿಂತ ಒಂದು ಪಂದ್ಯ ಹೆಚ್ಚಾಗಿದೆ.
ಪ್ರಸ್ತುತ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಭಾರತ ತಂಡದ ಗೆಲುವಿನ ಭಾಗಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ ತಮ್ಮ ಸುಪ್ರಸಿದ್ಧ ಕ್ರಿಕೆಟ್ ವೃತ್ತಿಜೀವನದಲ್ಲಿ ಭಾರತದ ಪರ 307 ಪಂದ್ಯಗಳನ್ನು ಗೆದ್ದಿದ್ದಾರೆ.
ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಂದು ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು ಇನ್ನಿಂಗ್ಸ್ ಮತ್ತು 141 ರನ್‌ಗಳಿಂದ ಸೋಲಿಸಿತು.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆತಿಥೇಯರ ನಿರಾಯಾಸವಾಗಿ ಪ್ರಾಬಲ್ಯ ಸಾಧಿಸಿತು. ಚೊಚ್ಚಲ ಪಂದ್ಯವಾಡಿದ ಯಶಸ್ವಿ ಜೈಸ್ವಾಲ್ 171 ರನ್‌ಗಳ ಅದ್ಭುತ ಶತಕ ಬಾರಿಸಿದರೆ, ಅನುಭವಿ ರವಿಚಂದ್ರನ್ ಅಶ್ವಿನ್ 12 ವಿಕೆಟ್‌ಗಳನ್ನು ಕಬಳಿಸಿದರು.
ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಜುಲೈ 20ರಿಂದ ಪ್ರಾರಂಭವಾಗಲಿದ್ದು, ಪ್ರವಾಸಿ ಭಾರತ ತಂಡ ಗೆಲ್ಲುವ ಫೇವರಿಟ್ ಆಗಿದೆ.
ಪ್ರಸ್ತುತ, ಐಸಿಸಿ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ವಿಶ್ವದ ನಂಬರ್ ಒನ್ ಟೆಸ್ಟ್ ತಂಡವಾಗಿದೆ. ಆದರೆ ವೆಸ್ಟ್ ಇಂಡೀಸ್ ತಂಡವನ್ನು 2-0 ಅಂತರದಲ್ಲಿ ಸೋಲಿಸಿದರೂ ಭಾರತದ ಅಗ್ರಸ್ಥಾನಕ್ಕೆ ಕುತ್ತು ಬಂದಿದೆ.
ಭಾರತ 121 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದು, ಐಸಿಸಿ ಟೆಸ್ಟ್ ತಂಡಗಳ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. 116 ಅಂಕಗಳೊಂದಿಗೆ ಆಸ್ಟ್ರೇಲಿಯಾ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ.
ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಸದ್ಯ ನಡೆಯುತ್ತಿರುವ 2023ರ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಡುತ್ತಿದೆ. ಅಂತಿಮ ಎರಡು ಪಂದ್ಯಗಳನ್ನು ಗೆದ್ದರೆ, ಭಾರತ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.