Ind vs WI: "ಭಾರತದ ವಿರುದ್ಧ ವಿಂಡೀಸ್ ಸಂಪೂರ್ಣ 50 ಓವರ್ ಆಡಬೇಕು"

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡದ ಕೋಚ್ ಫಿಲ್ ಸೈಮನ್ಸ್ ತಮ್ಮ ತಂಡದ ಮೇಲಿನ ನಿರೀಕ್ಷೆಗಳನ್ನು ಹೇಳಿಕೊಂಡಿದ್ದಾರೆ. ಭಾರತ ತಂಡದ ವಿರುದ್ಧ ಯಶಸ್ಸು ಸಾಧಿಸಬೇಕಾದರೆ ವಿಂಡೀಸ್ ತಂಡ ಮಾಡಬೇಕಿರುವುದೇನು ಎಂಬುದನ್ನು ಹೇಳೊಕೊಂಡಿದ್ದಾರೆ ವಿಂಡೀಸ್ ಕೋಚ್.
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲಿಗೆ ಮುಖಾಮುಖಿಯಾಗಲಿದೆ. ಜುಲೈ 22, 24 ಹಾಗೂ 27ರಂದು ಈ ಪಂದ್ಯಗಳು ನಡೆಯಲಿದೆ. ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೈನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಈ ಪಂದ್ಯಗಳು ಆಯೋಜನೆಯಾಗಲಿದೆ.
ಈ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ತಂಡದ ಕೋಚ್ ಫಿಲ್ ಸೈಮನ್ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ತಂಡ ಯಶಸ್ಸು ಗಳಿಸಬೇಕಾದರೆ ವೆಸ್ಟ್ ಇಂಡೀಸ್ ತಂಡ ಸಂಪೂರ್ಣ 50 ಓವರ್‌ಗಳ ಕಾಲ ಬ್ಯಾಟಿಂಗ್ ನಡೆಸಬೆಕು ಎಂದಿದ್ದಾರೆ. ಅದರ ಜೊತೆಗೆ ಯಾರಾದರೂ ಒಬ್ಬರು ಬ್ಯಾಟರ್ ಶತಕವನ್ನು ಗಳಿಸಬೇಕು. ಹಾಗಾದಲ್ಲಿ ಮಾತ್ರವೇ ತಂಡದ ಪರವಾಗಿ ಉತ್ತಮ ಫಲಿತಾಂಶ ಬರಲು ಸಾಧ್ಯವಿದೆ ಎಂದಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಇತ್ತೀಚೆಗಷ್ಟೇ ಅಂತ್ಯವಾದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡಿಸ್ ತಂಡ ಅತ್ಯಂತ ಹೀನಾಯ ಪ್ರದರ್ಶನ ನೀಡಿ ಸರಣಿಯಲ್ಲಿ ಸೋಲು ಅನುಭವಿಸಿತ್ತು.
"ಪ್ರಮುಖ ಸಂಗತಿಯೆಂದರೆ ನಮ್ಮ 50 ಓವರ್‌ಗಳ ಬ್ಯಾಟಿಂಗ್ ಅವಧಿಯಲ್ಲಿ ನಾವು ಯಾವ ರೀತಿಯಾಗಿ ಬ್ಯಾಟಿಂಗ್ ನಡೆಸುತ್ತೇವೆ ಎಂಬುದು ಪ್ರಮುಖವಾಗುತ್ತದೆ. ನಾವು ಐವತ್ತು ಓವರ್‌ಗಳ ಕಾಲ ಬ್ಯಾಟಿಂಗ್‌ನ್ನು ನಡೆಸಬೇಕಿದ್ದು ನಮ್ಮ ಇನ್ನಿಂಗ್ಸ್‌ಅನ್ನು ಜೊತೆಯಾಗಿ ಕೊಂಡೊಯ್ಯಬೇಕಿದೆ. ಉತ್ತಮ ಜೊತೆಯಾಟ ಕೂಡ ಬೇಕಾಗಿದೆ. ಯಾರಾದರೂ ತಂಡದಲ್ಲಿ ಶತಕವನ್ನು ಗಳಿಸಬೇಕು. ಆ ಮೂಲಕ ತಂಡವನ್ನು ಒಗ್ಗಟ್ಟಾಗಿ ಮುನ್ನಡೆಸಬೇಕು. ಬ್ಯಾಟಿಂಗ್ ವಿಚಾರವಾಗಿ ಇಷ್ಟಾಗಬೇಕಿದೆ" ಎಂದಿದ್ದಾರೆ ಫಿಲ್ ಸೈಮನ್ಸ್.
ಬೌಲಿಂಗ್ ಹಾಗೂ ಫಿಲ್ಡಿಂಗ್ ಬಗ್ಗೆ ಮೆಚ್ಚುಗೆ: ಇನ್ನು ಈ ಸಂದರ್ಭದಲ್ಲಿ ಬೌಲಿಂಗ್ ಹಾಗೂ ಫಿಲ್ಡಿಂಗ್‌ನಲ್ಲಿನ ಬೆಳವಣಿಗೆ ಬಗ್ಗೆ ಸೈಮನ್ಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಬೌಲಿಂಗ್ ಹಾಗೂ ಫಿಲ್ಡಿಂಗ್‌ನಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆ ಆಗುತ್ತಿದೆ. ಫಿಲ್ಡಿಂಗ್‌ಗೆ ನಾವು ಹೆಚ್ಚಿನ ಅಂಕಗಳನ್ನು ನಿಡುತ್ತೇವೆ. ನಮ್ಮ ಬೌಲಿಂಗ್ ಕೂಡ ಉತ್ತಮವಾಗುತ್ತಿದೆ" ಎಂದಿದ್ದಾರೆ ವೆಸ್ಟ್ ಇಂಡೀಸ್ ತಂಡದ ಕೋಚ್.
"ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾವು ಅವರನ್ನು ಸಾಧ್ಯವಾದಷ್ಟು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಬೇಕು. ನಿಯಮಿತವಾಗಿ ವಿಕೆಟ್‌ಗಳನ್ನು ಪಡೆಯುತ್ತಾ ಸಾಗಬೇಕಿದೆ. ಹಾಗಿದ್ದಾಗ ಮಾತ್ರವೇ ಭಾರತ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿದೆ" ಎಂದಿದ್ದಾರೆ ಫಿಲ್ ಸೈಮನ್ಸ್.
ಇನ್ನು ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಖಾಯಂ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆಡಲಿದೆ. ಜೊತೆಗೆ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಕೂಡ ವಿಶ್ರಾಂತಿ ನೀಡಲಾಗಿದ್ದು ಈ ಸರಣಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದು ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಏಕದಿನ ಸರಣಿಯ ಬಳಿಕ ಉಭಯ ತಂಡಗಳು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದೆ.
ಭಾರತ ಏಕದಿನ ತಂಡ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
ವೆಸ್ಟ್ ಇಂಡೀಸ್ ODI ತಂಡ: ನಿಕೋಲಸ್ ಪೂರನ್ (ನಾಯಕ), ಶಮ್ರಾಹ್ ಬ್ರೂಕ್ಸ್, ಬ್ರೆಂಡನ್ ಕಿಂಗ್, ರೋಮನ್ ಪೊವೆಲ್, ಕೀಸಿ ಕಾರ್ಟಿ, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ಶಾಯ್ ಹೋಪ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications