ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಇಬ್ಬರು ಆಟಗಾರರು ಟೆಸ್ಟ್ ಕ್ರಿಎಕಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಓರ್ವ ವಿಕೆಟ್ ಕೀಪರ್ ಇಶಾನ್ ಕಿಶನ್ ಮತ್ತು ಇನ್ನೋರ್ವ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್. ಇಶಾನ್ ಕಿಶನ್ ಈಗಾಗಲೇ ಭಾರತ ತಮಡದ ಪರವಾಗಿ ಹಲವು ವೈಟ್‌ಬಾಲ್ ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್ ಭಾರತದ ಕ್ಯಾಪ್ ತೊಟ್ಟಿದ್ದು ಇದೇ ಮೊದಲು. ಆದರೆ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುತ್ತಿದ್ದಂತೆಯೇ ಜೈಸ್ವಾಲ್ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಬರೆದುಕೊಂಡಿದ್ದಾರೆ.
ಕುತೂಹಲಕಾರಿ ಸಂಗತೊಯೆಂದರೆ ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾ ಪರವಾಗಿ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನೂ ಮೀರಿದ ಸಾಧನೆಯೊಂದನ್ನು ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು. ಜೈಸ್ವಾಲ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಂದರ್ಭದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿದ್ದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಹೊಂದಿದ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿಯೇ ಜೈಸ್ವಾಲ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಯುವ ಸೆನ್ಸೇಶನ್ ಶುಬ್ಮನ್ ಗಿಲ್ ಅವರನ್ನು ಹಿಂದಿಕ್ಕಿದ್ದಾರೆ.

ಯಶಸ್ವಿ ಜೈಸ್ವಾಲ್ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡುವುದಕ್ಕೂ ಮುನ್ನ ಮುಂಬೈ ಪರವಾಗಿ 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ 80.21 ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಆದರೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದಾಗ ಅವರ ಸರಾಸರಿ 70.18 ಆಗಿತ್ತು. ಸಚಿನ್ ತೆಂಡೂಲ್ಕರ್ ಅವರ ಈ ದಾಖಲೆಯನ್ನು ಜೈಸ್ವಾಲ್ ಮೀರಿಸಿದ್ದಾರೆ.
ಮಾಜಿ ಆಟಗಾರರಾದ ವಿನೋದ್ ಕಾಂಬ್ಳಿ (27 ಪಂದ್ಯಗಳಲ್ಲಿ 88.37 ಸರಾಸರಿ) ಮತ್ತು ಪ್ರವೀಣ್ ಆಮ್ರೆ (23 ಪಂದ್ಯಗಳಲ್ಲಿ 81.23 ಸರಾಸರಿ) ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಜೈಸ್ವಾಲ್ ನಂತರ ರೌಸಿ ಮೋದಿ (38 ಪಂದ್ಯಗಳಲ್ಲಿ 71.28 ಸರಾಸರಿ), ಸಚಿನ್ (ಒಂಬತ್ತು ಪಂದ್ಯಗಳಲ್ಲಿ 70.18 ಸರಾಸರಿ) ಮತ್ತು ಶುಬ್ಮನ್ ಗಿಲ್ (23 ಪಂದ್ಯಗಳಲ್ಲಿ 68.78 ಸರಾಸರಿ) ಈ ಪಟ್ಟಿಯಲ್ಲಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ ಕ್ರಿಕೆಟ್‌ನಲ್ಲಿ ಐಪಿಎಲ್‌ನಲ್ಲಿ ನೀಡಿದ ಅಮೋಘ ಪ್ರದರ್ಶನ ಜೈಸ್ವಾಲ್ ಭಾರತದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸ್ಥಾನವನ್ನು ಪಡೆಯುವಂತೆ ಮಾಡಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನದ ಬಳಿಕ ಕಳೆದ ಐಪಿಎಲ್‌ನಲ್ಲಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ 600ಕ್ಕೂ ಅಧಿಕ ರನ್‌ಗಳನ್ನು ಬಾರಿಸಿ ಗಮನಸೆಳೆದಿದ್ದರು.
ಯಶಸ್ವಿ ಜೈಸ್ವಾಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಅವಿಭಾಜ್ಯ ಅಂಗವಾಗು ಗುರುತಿಸಿಕೊಂಡಿದ್ದಾರೆ. ಮುಂಬೈ ಪರ 15 ಪಂದ್ಯಗಳನ್ನು ಆಡಿರುವ ಅವರು 1845 ರನ್ ಗಳಿಸಿದ್ದಾರೆ ಮಿಂಚಿದ್ದಾರೆ. ಇದರಲ್ಲಿ ಒಂಬತ್ತು ಶತಕಗಳು ಸೇರಿವೆ. ರೆಡ್‌ಬಾಲ್ ಕ್ರಿಕೆಟ್‌ನಲ್ಲಿ ಮುಂಬೈ ಪರವಾಗಿ ಮಾತ್ರವಲ್ಲದೆ ದಕ್ಷಿಣ ವಲಯದ ಪರವಾಗಿಯೂ ಆಡಿರುವ ಜೈಸ್ವಾಲ್ ದುಲೀಪ್ ಟ್ರೋಫಿ ಮತ್ತು ಇರಾನಿ ಟ್ರೋಫಿಯಲ್ಲಿ ರೆಸ್ಟ್ ಆಫ್ ಇಂಡಿಯಾ ಪರವಾಗಿ ಆಡಿದ್ದು ಅಲ್ಲಿಯೂ ಅದ್ಭುತ ದಾಖಲೆ ಹೊಂದಿದ್ದಾರೆ. ಕಳೆದ ವರ್ಷ ಭಾರತ 'ಎ' ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗ ತಂಡದ ಭಾಗವಾಗಿದ್ದ ಜೈಸ್ವಾಲ್ ಇದೀಗ ಭಾರತದ ಹಿರಿಯರ ತಂಡದಲ್ಲೂ ತಮ್ಮ ಅವಕಾಶ ಪಡೆದುಕೊಂಡಿದ್ದಾರೆ.
ಇದೀಗ ಭಾರತ ತಂಡದ ಪರವಾಗಿಯೂ ಅದ್ಭುತ ಆರಂಭವನ್ನು ಪಡೆದುಕೊಂಡಿರುವ ಯಶಸ್ವಿ ಜೈಸ್ವಾಲ್ ಗಮನಸೆಳೆಯುವ ಪ್ರದರ್ಶನ ನೀಡಿದ್ದಾರೆ. ಮೊದಲ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 150 ರನ್‌ಗಳಿಗೆ ಟೀಮ್ ಇಂಡಿಯಾ ಆಲೌಟ್ ಮಾಡಿದ ಬಳಿಕ ಬ್ಯಾಟಿಂಗ್ ಆರಂಭಿಸಿರುವ ಭಾರತದ ಪರವಾಗಿ ರೋಹಿತ್ ಶರ್ಮಾ 30 ರನ್‌ಗಳಿಸಿದ್ದರೆ ಯಶಸ್ವಿ ಜೈಸ್ವಾಲ್ 40 ರನ್‌ಗಳಿಸಿ ಅಜೇಯವಾಗುಳಿದು ಎರಡನೇ ದಿನ ಆಟವನ್ನು ಮುಂದುವರಿಸಲಿದ್ದಾರೆ. ಹೀಗಾಗಿ ಜೈಸ್ವಾಲ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.