ಭಾರತ vs ವೆಸ್ಟ್ ಇಂಡೀಸ್: ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಬಿಶ್ಣೋಯ್ ತನ್ನ ಯೋಜನೆ ಬಗ್ಗೆ ಹೇಳಿದ್ದಿಷ್ಟು!

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ಅಂತ್ಯವಾಗಿದ್ದು ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಚೊಚ್ಚಲ ಬಾರಿಗೆ ಕಣಕ್ಕಿಳಿದ ಯುವ ಆಟಗಾರ ರವಿ ಬಿಶ್ನೋಯ್ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದಾರೆ. ಮೊದಲ ಪಂದ್ಯದಲ್ಲಿ ತನ್ನ ಪ್ರದರ್ಶನದ ಮೂಲಕ ಗಮನ ಸೆಳೆದ ರವಿ ಬಿಷ್ಣೋಯ್ ತನ್ನ ಪ್ರದರ್ಶನದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ರವಿ ಬಿಶ್ನೋಯ್ ವಿಂಡೀಸ್ ದಾಂಡಿಗರ ವಿರುದ್ಧ ತಾನು ರೂಪಿಸಿದ ಯೋಜನೆಯನ್ನು ಹೇಳಿಕೊಂಡಿದ್ದಾರೆ. ಪ್ರತಿ ಪಂದ್ಯವನ್ನು ಕೂಡ ವಿಕೆಟ್‌ನ ಮೇಲೆ ಹಾಕಿವ ಪ್ರಯತ್ನವನ್ನು ನಡೆಸಿದ್ದು ಎದುರಾಳಿ ತಂಡದ ಬಲಾಢ್ಯ ಆಟಗಾರರ ತೋಳಿಗೆ ವಿಶ್ರಾಂತಿ ದೊರೆಯದಂತೆ ಮಾಡುವುದು ತನ್ನ ಗುರಿಯಾಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ.
ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಯುವ ಆಟಗಾರ ರವಿ ಬಿಶ್ನೋಯ್ 4 ಓವರ್‌ಗಳ ತಮ್ಮ ಬೌಲಿಂಗ್ ಕೋಟಾದಲ್ಲಿ ಕೇವಲ 17 ರನ್ ನೀಡಿದ್ದು 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಮೂಲಕ ವೆಸ್ಟ್ ಇಂಡಿಸ್ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದ ಗೆಲುವಿನಲ್ಲಿ ರವಿ ಬಿಶ್ನೋಯ್ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಪಂದ್ಯದ ಮುಕ್ತಾಯದ ಬಳಿಕ ಯುಜುವೇಂದ್ರ ಚಾಹಲ್ ಜೊತೆಗೆ ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದ್ದು ಈ ವಿಡಿಯೋದಲ್ಲಿ ಬಿಶ್ನೋಯ್ ತಾವು ಯಾವ ರೀತಿಯಾಗಿ ಯೋಜನೆಯನ್ನು ರೂಪಿಸಿದ್ದಾಗಿ ಹೇಳಿಕೊಂಡಿದ್ದಾರೆ. "ಉತ್ತಮ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡುವುದು ನನ್ನ ಪ್ರಮುಖ ಆದ್ಯತೆಯಾಗಿತ್ತು. ಅಲ್ಲದೆ ಬ್ಯಾಟರ್‌ಗಳಿಗೆ ಹೆಚ್ಚಿನ ಅವಕಾಶವನ್ನು ನೀಡದಿರುವುದು ಈ ಮೂಲಕ ಅವರಿಗೆ ದೊಡ್ಡ ಹೊಡೆತಕ್ಕೆ ಅವಕಾಶವನ್ನು ನೀಡದಂತೆ ಮಾಡುವುದು ನನ್ನ ಯೋಜನೆಯಾಗಿತ್ತು" ಎಂದು ಬಿಶ್ನೋಯ್ ಹೇಳಿದ್ದಾರೆ.
"ಅವರದ್ದು ಟಿ20 ಮಾದರಿಯಲ್ಲಿ ಅತ್ಯುತ್ತಮ ತಂಡಗಳಲ್ಲಿ ಒಂದು. ಹಾಗಾಗಿ ನಾನು ಅವರಿಗೆ ವಿಕೆಟ್‌ನಿಂದ ವಿಕೆಟ್‌ಗೆ ಬೌಲಿಂಗ್ ಮಾಡಲು ನಿರ್ಧರಿಸಿದ್ದೆ. ಈ ಮೂಲಕ ಅವರಿಗೆ ದೊಡ್ಡ ಹೊಡೆತಕ್ಕೆ ಅವಕಾಶ ನೀಡದಿರಲು ಯೋಜಿಸಿದ್ದೆ. ಈ ಸಂದರ್ಭದಲ್ಲಿ 5-6 ವೈಡ್ ಎಸೆತಗಳು ಕೂಡ ಬಂದಿದ್ದವು" ಎಂದು ಬಿಶ್ನೋಯ್ ಹೇಳಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ರವಿ ಬಿಶ್ನೋಯ್ ವೆಸ್ಟ್ ಇಂಡೀಸ್ ತಂಡದ ರೋಸ್ಟೊನ್ ಚೇಸ್ ಹಾಗೂ ರೋಮನ್ ಪೊವೆಲ್ ವಿಕೆಟ್ ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
"ಪ್ರತಿಯೊಬ್ಬರು ಕೂಡ ಭಾರತಕ್ಕಾಗಿ ಕ್ರಿಕೆಟ್ ಆಡುವ ಕನಸು ಹೊಂದಿರುತ್ತಾರೆ. ನಾನು ಕೂಡ ಅದೇ ರೀತಿಯಾಗಿ ಸಾಕಷ್ಟು ಉತ್ಸಾಹ ಹಾಗೂ ಆತಂಕದಲ್ಲಿ ಆಗಮಿಸಿದ್ದೆ ಯಾಕೆಂದರೆ ಸಾಕಷ್ಟು ಹಿರಿಯ ಆಟಗಾರರು ಇದ್ದರು. ಆದರೆ ರಾಹುಲ್(ದ್ರಾವಿಡ್) ಸರ್ ನನ್ನನ್ನು ಸ್ವಾಗತಿಸಿದ ನಂತರ ನನಗೆ ನಿಜಕ್ಕೂ ಉತ್ತಮ ಅನುಭವ ನೀಡಿತ್ತು" ಎಂದು ಬಿಶ್ನೋಯ್ ಹೇಳಿಕೊಂಡಿದ್ದಾರೆ.
ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್‌ಗಳಿಸಿತ್ತು. ಭಾರತದ ಪರವಾಗಿ ಹರ್ಷಲ್ ಪಟೇಲ್ ಹಾಗೂ ರವಿ ಬಿಶ್ನೋಯ್ 2 ವಿಕೆಟ್ ಕಿತ್ತು ಮಿಂಚಿದ್ದರು. ವಿಂಡೀಸ್ ಪರವಾಗಿ ನಿಕೋಲಸ್ ಪೂರನ್ 61 ರನ್‌ಗಳಿಸಿ ಮಿಂಚಿದ್ದಾರೆ. ಇನ್ನು ಇದನ್ನು ಬೆನ್ನಟ್ಟಿದ ಭಾರತ ತಂಡಕಲ್ಕೆ ನಾಯಕ ರೋಹಿತ್ ಶರ್ಮಾ ಸ್ಪೋಟಕ ಆರಂಭವನ್ನು ನೀಡಿದರೆ ಅಂತಿಮ ಹಂತದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ವೆಂಕಟೇಶ್ ಐಯ್ಯರ್ ಅದ್ಭುತ ಜೊತೆಯಾಟ ನೀಡುವ ಮೂಲಕ ಇನ್ನೂ 7 ಎಸೆತಗಳು ಬಾಕಿಯಿರುವಂತೆಯೇ ಗೆಲುವನ್ನು ಖಾತ್ರಿಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications