ಮಿಂಚಿದ ಸ್ಯಾಮ್ಸನ್, ಠಾಕೂರ್; ಜಿಂಬಾಬ್ವೆ ವಿರುದ್ಧ 2ನೇ ಏಕದಿನ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ

ಜಿಂಬಾಬ್ವೆಯ ಹರಾರೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದ್ದು ಸರಣಿಯನ್ನು ವಶಪಡಿಸಿಕೊಂಡಿದೆ. ಮೊದಲಿಗೆ ಗುರುವಾರ ನಡೆದಿದ್ದ ಪ್ರಥಮ ಏಕದಿನ ಪಂದ್ಯದಲ್ಲಿ ಹತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದ ಭಾರತ ಇಂದು ( ಆಗಸ್ಟ್ 20 ) ದ್ವಿತೀಯ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸತತ ಎರಡನೇ ಗೆಲುವನ್ನು ಕಂಡಿದೆ.
ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಜಿಂಬಾಬ್ವೆ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 38.1 ಓವರ್‌ಗಳಲ್ಲಿ 161 ರನ್ ಕಲೆ ಹಾಕಿ ಆಲ್‌ಔಟ್ ಆಗಿ ಟೀಂ ಇಂಡಿಯಾಗೆ ಗೆಲ್ಲಲು 162 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ ಶಿಖರ್ ಧವನ್, ಶುಬ್ಮನ್ ಗಿಲ್ ಹಾಗೂ ಸಂಜು ಸ್ಯಾಮ್ಸನ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 25.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿ ಗೆಲುವನ್ನು ಕಂಡಿತು.

ಜಿಂಬಾಬ್ವೆ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಪರ ಆರಂಭಿಕರಾಗಿ ಕಣಕ್ಕಿಳಿದ ತಕುದ್ಜ್ವಾನಾಶೆ ಕೈಟಾನೊ ಹಾಗೂ ಇನ್ನೊಸೆಂಟ್ ಕೈಯಾ ಉತ್ತಮ ಆರಂಭ ಕಟ್ಟಿಕೊಡುವಲ್ಲಿ ವಿಫಲರಾದರು. ತಕುದ್ಜ್ವಾನಾಶೆ ಕೈಟಾನೊ 7 ರನ್ ಕಲೆಹಾಕಿದರೆ, ಇನ್ನೊಸೆಂಟ್ ಕೈಯಾ 16 ರನ್ ಕಲೆಹಾಕಿದರು. ಇನ್ನುಳಿದಂತೆ ವೆಸ್ಲಿ ಮಾಧೆವೆರೆ 2 ರನ್, ತಂಡದ ನಾಯಕ ರೆಗಿಸ್ ಚಕಬ್ವಾ 2 ರನ್, ಸಿಕಂದರ್ ರಾಜಾ 16 ರನ್, ಸೀನ್ ವಿಲಿಯಮ್ಸನ್ 42 ರನ್, ಲ್ಯೂಕ್ ಜೊಂಗ್ವೆ 6 ರನ್, ಬ್ರಾಡ್ ಇವಾನ್ಸ್ 9 ರನ್, ವಿಕ್ಟರ್ ನ್ಯೌಚಿ ಡೈಮಂಡ್ ಡಕ್ ಔಟ್ ಮತ್ತು ತನಕಾ ಚಿವಾಂಗಾ 4 ರನ್ ಮತ್ತು ರಾನ್ ಬರ್ಲ್ 39 ರನ್ ಕಲೆಹಾಕಿ ಅಜೇಯರಾಗಿ ಉಳಿದರು.
ಭಾರತದ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್ ಹಾಗೂ ದೀಪಕ್ ಹೂಡಾ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನುಳಿದ ಎರಡು ವಿಕೆಟ್‌ಗಳು ರನ್ ಔಟ್ ಆಗಿವೆ.

ಟೀಮ್ ಇಂಡಿಯಾ ಇನ್ನಿಂಗ್ಸ್
ಕಳೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಯದೇ ಭಾರೀ ಟೀಕೆಗೆ ಒಳಗಾಗಿದ್ದ ಕೆಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ಶಿಖರ್ ಧವನ್ ಜತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದರು. ಆದರೆ ಕೇವಲ ಒಂದು ರನ್‌ಗೆ ತಮ್ಮ ಆಟ ಮುಗಿಸಿದ ರಾಹುಲ್ ನಿರಾಸೆ ಮೂಡಿಸಿದರು. ಇನ್ನು ಶಿಖರ್ ಧವನ್ 33 ರನ್ ಕಲೆಹಾಕಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಬ್‌ಮನ್ ಗಿಲ್ ಕೂಡ 33 ರನ್ ಬಾರಿಸಿದರು. ಇನ್ನುಳಿದಂತೆ 6 ರನ್ ಕಲೆಹಾಕಿದರೆ, ದೀಪಕ್ ಹೂಡಾ 25 ರನ್ ಬಾರಿಸಿದರು. ಅಕ್ಷರ್ ಪಟೇಲ್ ಔಟ್ ಆಗದೇ 6 ರನ್ ಕಲೆಹಾಕಿದರೆ, ಸಂಜು ಸ್ಯಾಮ್ಸನ್ 39 ಎಸೆತಗಳಲ್ಲಿ ಅಜೇಯ 43 ರನ್ ಬಾರಿಸಿದರು.
ಜಿಂಬಾಬ್ವೆ ಪರ ಲ್ಯೂಕ್ ಜೂಂಗ್ವೆ ಎರಡು ವಿಕೆಟ್ ಪಡೆದರೆ, ಸಿಕಂದರ್ ರಾಜಾ, ತಾನಕ ಚಿವಾಂಗಾ ಹಾಗೂ ವಿಕ್ಟರ್ ನ್ಯೌಚಿ ತಲಾ ಒಂದೊಂದು ವಿಕೆಟ್ ಪಡೆದರು.

ಆಡುವ ಬಳಗಗಳು
ಜಿಂಬಾಬ್ವೆ ಅಡುವ ಬಳಗ: ಇನ್ನೊಸೆಂಟ್ ಕೈಯಾ, ತಕುದ್ಜ್ವಾನಾಶೆ ಕೈಟಾನೊ, ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ತನಕಾ ಚಿವಾಂಗಾ
ಬೆಂಚ್: ಡೊನಾಲ್ಡ್ ತಿರಿಪಾನೊ, ಮಿಲ್ಟನ್ ಶುಂಬಾ, ಟೋನಿ ಮುನ್ಯೊಂಗಾ, ಕ್ಲೈವ್ ಮದಂಡೆ, ಜಾನ್ ಮಸಾರಾ, ತಡಿವಾನಾಶೆ ಮರುಮನಿ, ರಿಚರ್ಡ್ ನಾಗರವ
ಭಾರತ ಆಡುವ ಬಳಗ: ಶಿಖರ್ ಧವನ್, ಶುಬ್ಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್ (ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಬೆಂಚ್: ಶಹಬಾಜ್ ಅಹ್ಮದ್, ಅವೇಶ್ ಖಾನ್, ರುತುರಾಜ್ ಗಾಯಕ್ವಾಡ್, ರಾಹುಲ್ ಚಹರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications