IND vs ZIM 3rd ODI: ಶುಬ್‌ಮನ್ ಗಿಲ್ ಚೊಚ್ಚಲ ಶತಕ; ಜಿಂಬಾಬ್ವೆಗೆ ಕಠಿಣ ಗುರಿ ನೀಡಿದ ಭಾರತ

ಜಿಂಬಾಬ್ವೆ ಪ್ರವಾಸವನ್ನು ಕೈಗೊಂಡು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸುತ್ತಿರುವ ಟೀಮ್ ಇಂಡಿಯಾ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು ಈಗಾಗಲೇ ತನ್ನ ವಶಕ್ಕೆ ಪಡೆದುಕೊಂಡಿದ್ದು, ಇಂದು ( ಆಗಸ್ಟ್ 22 ) ನಡೆಯುತ್ತಿರುವ ಮೂರನೇ ಏಕದಿನ ಪಂದ್ಯವನ್ನೂ ಸಹ ಗೆದ್ದು ವೈಟ್‌ವಾಷ್ ಬಳಿಯುವ ತವಕದಲ್ಲಿದೆ.
ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಕೆಎಲ್ ರಾಹುಲ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿತು. ಈ ಮೂಲಕ ಟೀಂ ಇಂಡಿಯಾ ಶುಬ್‌ಮನ್ ಗಿಲ್ ಅದ್ಭುತ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್ ಕಲೆಹಾಕಿ ಎದುರಾಳಿ ಜಿಂಬಾಬ್ವೆ ತಂಡಕ್ಕೆ ಗೆಲ್ಲಲು 290 ರನ್‌ಗಳ ಕಠಿಣ ಗುರಿಯನ್ನು ನೀಡಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರಮ ಕ್ರಮಾಂಕದ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ, ಮಧ್ಯಮ ಕ್ರಮಾಂಕದ ಹಾಗೂ ಕೆಳ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ಆಟಗಾರರು ಅಕ್ಷರಶಃ ನೆಲಕಚ್ಷಿದ್ದು, ಮೇಲಿನ ಕ್ರಮಾಂಕದ ಆಟಗಾರರಂತೆ ಮಧ್ಯಮ ಕ್ರಮಾಕದ ಆಟಗಾರರೂ ಸಹ ತುಸು ಉತ್ತಮ ಪ್ರದರ್ಶನ ನೀಡಿದ್ದರೆ ತಂಡ ಮತ್ತಷ್ಟು ಉತ್ತಮ ರನ್ ಕಲೆಹಾಕುತ್ತಿತ್ತು ಎನ್ನಬಹುದು.

ಟೀಮ್ ಇಂಡಿಯಾ ಇನ್ನಿಂಗ್ಸ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಕಣಕ್ಕಿಳಿದರು. ಶಿಖರ್ ಧವನ್ 40 ರನ್ ಕಲೆಹಾಕಿದರೆ, ಕೆಎಲ್ ರಾಹುಲ್ 30 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಬ್‌ಮನ್ ಗಿಲ್ 97 ಎಸೆತಗಳಲ್ಲಿ 130 ರನ್ ಚಚ್ಚಿ ಅಬ್ಬರಿಸಿದರು. ಇದು ಶುಬ್‌ಮನ್ ಗಿಲ್ ಬಾರಿಸಿದ ಚೊಚ್ಚಲ ಅಂತರರಾಷ್ಟ್ರೀಯ ಶತಕವಾಗಿದ್ದು, ಗಿಲ್ ಹೊಸ ಮೈಲಿಗಲ್ಲನ್ನು ನೆಟ್ಟರು. ಇನ್ನುಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ 50 ರನ್ ಬಾರಿಸಿ ರನ್ ಔಟ್ ಆದರು. ಹೀಗೆ ತಂಡದ ಈ ನಾಲ್ವರು ಆಟಗಾರರು ಉತ್ತಮ ರನ್ ಕಲೆಹಾಕಿದರೆ ನಂತರ ಕಣಕ್ಕಿಳಿದ ಯಾವುದೇ ಆಟಗಾರ ಕೂಡ ಇಪ್ಪತ್ತು ರನ್ ಮುಟ್ಟಲಿಲ್ಲ. ದೀಪಕ್ ಹೂಡಾ 1 ರನ್, ಸಂಜು ಸ್ಯಾಮ್ಸನ್ 15 ರನ್, ಅಕ್ಷರ್ ಪಟೇಲ್ 1 ರನ್, ಶಾರ್ದೂಲ್ ಠಾಕೂರ್ 9 ರನ್, ದೀಪಕ್ ಚಹರ್ ಅಜೇಯ 1 ರನ್ ಹಾಗೂ ಕುಲ್‌ದೀಪ್ ಯಾದವ್ ಅಜೇಯ 2 ರನ್ ಕಲೆಹಾಕಿದರು.
ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ 5 ವಿಕೆಟ್ ಪಡೆದರೆ, ನ್ಯೌಚಿ ಹಾಗೂ ಸಿಕಂದರ್ ರಾಜಾ ತಲಾ ಒಂದೊಂದು ವಿಕೆಟ್ ಪಡೆದರು.

ಅಬ್ಬರಿಸಿದ ಶುಬ್‌ಮನ್ ಗಿಲ್
ಇನ್ನು ಈ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಶುಬ್‌ಮನ್ ಗಿಲ್ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಶತಕವನ್ನು ಬಾರಿಸಿದರು. 15 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ ಗಿಲ್ ಜಿಂಬಾಬ್ವೆ ನೆಲದಲ್ಲಿ ಚೊಚ್ಚಲ ಶತಕ ಬಾರಿಸಿದ ಮೂರನೇ ಭಾರತೀಯ ಎನಿಸಿಕೊಂಡಿದ್ದಾರೆ. ಈ ಹಿಂದೆ ಜಿಂಬಾಬ್ವೆ ನೆಲದಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕೂಡ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಶತಕ ಬಾರಿಸಿದ್ದರು.

ಆಡುವ ಬಳಗ
ಜಿಂಬಾಬ್ವೆ: ತಕುದ್ಜ್ವಾನಾಶೆ ಕೈಟಾನೊ, ಇನೋಸೆಂಟ್ ಕೈಯಾ, ರೆಗಿಸ್ ಚಕಬ್ವಾ (ನಾಯಕ ಮತ್ತು ವಿಕೆಟ್ ಕೀಪರ್), ಸಿಕಂದರ್ ರಜಾ, ಸೀನ್ ವಿಲಿಯಮ್ಸ್, ರಯಾನ್ ಬರ್ಲ್, ಟೋನಿ ಮುನ್ಯೊಂಗಾ, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ರಿಚರ್ಡ್ ನಾಗರವಾ
ಭಾರತ: ಶಿಖರ್ ಧವನ್, ಕಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ( ವಿಕೆಟ್ ಕೀಪರ್ ), ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕುಲದೀಪ್ ಯಾದವ್, ಅವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications