ಭಾರತ ಎ ಫೈನಲ್ ಹಾದಿ ಕಠಿಣ; ಶ್ರೀಲಂಕಾ ವಿರುದ್ಧ ಸೋತ ತಿಲಕ್ ಪಡೆ
ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದ ಅತ್ಯಂತ ರೋಚಕ ಪಂದ್ಯದಲ್ಲಿ ಭಾರತ-ಎ ತಂಡ ಆತಿಥೇಯ ಶ್ರೀಲಂಕಾ-ಎ ವಿರುದ್ಧ ಸೂಪರ್ ಓವರ್‌ನಲ್ಲಿ ತಿಲಕ್ ವರ್ಮಾ ಪಡೆ ಸೋಲು ಕಂಡಿದೆ. ತ್ರಿಕೋನ ಸರಣಿಯ ಮಹತ್ವದ ಪಂದ್ಯದಲ್ಲಿ ಕೊನೆಯ ಕ್ಷಣದವರೆಗೂ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿತು. ಅಂತಿಮವಾಗಿ ಶ್ರೀಲಂಕಾ-ಎ ತಂಡವು ಸೂಪರ್ ಓವರ್‌ನಲ್ಲಿ 6 ರನ್‌ಗಳ ಜಯ ಭರ್ಜರಿ ಜಯ ಸಾಧಿಸಿತು.
ಈ ಸೋಲಿನ ಬಳಿಕ ಭಾರತ ಎ ತಂಡ ಫೈನಲ್ ಪ್ರವೇಶಿಸುವ ಹಾದಿ ಕಠಿಣವಾಗಿದೆ. ಸರಣಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಭಾರತ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ. ಈಗ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ-ಎ ತಂಡ ದೊಡ್ಡ ಜಯ ದಾಖಲಿಸಿದರೂ, ಇತರ ತಂಡಗಳ ಅಂಕ ಮತ್ತು ನೆಟ್ ರನ್ ರೇಟ್ ಆಧಾರದ ಮೇಲೆ ಫೈನಲ್ ಪ್ರವೇಶದ ಭವಿಷ್ಯ ನಿರ್ಧಾರವಾಗಲಿದೆ.

ಭಾರತ ತಂಡಕ್ಕೆ ಮುಳುವಾದ 10 ರನ್‌ಗಳ ಪೆನಾಲ್ಟಿ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭದಲ್ಲೇ ದೊಡ್ಡ ಆಘಾತ ಕಾದಿತ್ತು. ಭಾರತೀಯ ಬ್ಯಾಟರ್‌ಗಳು ಪಿಚ್‌ನ ಮಧ್ಯಭಾಗದಲ್ಲಿ ಓಡಿದ್ದಕ್ಕಾಗಿ ಅಂಪೈರ್‌ಗಳು ಭಾರತ ತಂಡಕ್ಕೆ 10 ರನ್‌ಗಳ ದಂಡ ವಿಧಿಸಿದರು. ಭಾರತದ ವಿಪ್ರಜ್ ನಿಗಮ್ ಪಿಚ್ ಮಧ್ಯದಲ್ಲಿ ಓಡಿ ನಿಯಮ ಉಲ್ಲಂಘಿಸಿದ್ದು ಶ್ರೀಲಂಕಾ ತಂಡಕ್ಕೆ ವರವಾಯಿತು.
ಮೊದಲು ಬ್ಯಾಟ್ ಮಾಡಿದ ಭಾರತ-ಎ ತಂಡದ ವೈಭವ್ ಸೂರ್ಯವಂಶಿ 21 ರನ್ ಗಳಿಸಿದರೆ, ಪ್ರಭ್‌ಸಿಮ್ರಾನ್ ಸಿಂಗ್ 11 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಉಪನಾಯಕ ರುತುರಾಜ್ ಗಾಯಕ್ವಾಡ್ 37 ರನ್ ಮತ್ತು ತಿಲಕ್ ವರ್ಮ 23 ರನ್ ಗಳಿಸಿದರು. ಆಯುಷ್ ಬದೋನಿ ಹಾಗೂ ನಿಶಾಂತ್ ಸಿಂಧು ಕೂಡ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ.
ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಾಂಶ್ ಶೆಡ್ಗೆ ಮತ್ತು ವಿಪ್ರಜ್ ನಿಗಮ್ ಆಸರೆಯಾದರು. ಸೂರ್ಯಾಂಶ್ ಶೆಡ್ಗೆ 66 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 72 ರನ್ ಗಳಿಸಿದರು. ವಿಪ್ರಜ್ ನಿಗಮ್ 49 ಎಸೆತಗಳಲ್ಲಿ 51 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಅಂತಿಮವಾಗಿ ಭಾರತ-ಎ 49.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 265 ರನ್ ಗಳಿಸಿತು. ಶ್ರೀಲಂಕಾ ತಂಡದ ಪರವಾಗಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಮೊಹಮ್ಮದ್ ಶಿರಾಜ್, ವಿಜಯಕಾಂತ್ ವ್ಯಾಸಕಾಂತ್ ತಲಾ 3 ವಿಕೆಟ್ ಪಡೆದರು.
ಸದೀರ ಸಮರವಿಕ್ರಮ ಅಬ್ಬರ
ಗೆಲುವಿಗೆ 266 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಶ್ರೀಲಂಕಾ-ಎ ತಂಡಕ್ಕೆ ಆರಂಭದಲ್ಲೇ ಪೆನಾಲ್ಟಿ ರೂಪದಲ್ಲಿ ಲಭಿಸಿದ್ದ 10 ರನ್‌ಗಳು ಹೆಚ್ಚಿನ ನೆರವು ನೀಡಿದವು. ಆರಂಭಿಕ ಆಟಗಾರ ನಿರೋಶನ್ ಡಿಕ್ವೆಲ್ಲಾ (37) ಉತ್ತಮ ಅಡಿಪಾಯ ಹಾಕಿಕೊಟ್ಟರು. ಆ ಬಳಿಕ ಬಂದ ಸದೀರ ಸಮರವಿಕ್ರಮ 113 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 93 ರನ್ ಗಳಿಸಿದರು.

ಶ್ರೀಲಂಕಾ ತಂಡಕ್ಕೆ ಕೊನೆಯ ಓವರ್‌ನಲ್ಲಿ ಗೆಲ್ಲಲು ಕೇವಲ 5 ರನ್‌ಗಳ ಅಗತ್ಯವಿತ್ತು. ಈ ವೇಳೆ ಭಾರತದ ಪರ ದಾಳಿಗಿಳಿದ ಅರ್ಷದ್ ಖಾನ್ ಎರಡನೇ ಎಸೆತದಲ್ಲೇ ಸದೀರ ಸಮರವಿಕ್ರಮ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಆನಂತರದ ನಾಲ್ಕು ಎಸೆತಗಳಲ್ಲಿ ಶ್ರೀಲಂಕಾ ಬ್ಯಾಟರ್‌ಗಳಿಗೆ ಕೇವಲ 4 ಸಿಂಗಲ್ ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಕೊನೆಯ ಎಸೆತದಲ್ಲಿ ಎರಡನೇ ರನ್ ಕದಿಯಲು ಹೋದ ಗುಣಶೇಖರ್ ರನೌಟ್ ಆಗುವುದರೊಂದಿಗೆ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡಿತು.
ಸೂಪರ್ ಓವರ್‌ನಲ್ಲಿ ನಾಟಕೀಯ ಬೆಳವಣಿಗೆ
ಪಂದ್ಯ ಟೈ ಆದ ತಕ್ಷಣ ಮೈದಾನದಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದವು. ಮೈದಾನದಲ್ಲಿ ಬೆಳಕಿನ ಕೊರತೆ ಇದ್ದ ಕಾರಣ ಪಂದ್ಯದ ಅಂಪೈರ್‌ಗಳು ಸೂಪರ್ ಓವರ್ ನಡೆಸಲು ತೀವ್ರ ಹಿಂದೇಟು ಹಾಕಿದರು. ಆದರೆ ಭಾರತ ತಂಡದ ನಾಯಕ ತಿಲಕ್ ವರ್ಮ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ರಿಸಲ್ಟ್‌ಗಾಗಿ ಸೂಪರ್ ಓವರ್ ನಡೆಸಲೇಬೇಕು ಎಂದು ಪಟ್ಟು ಹಿಡಿದರು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಎದುರು ಅರ್ಷದ್ ಖಾನ್ ಬೌಲಿಂಗ್‌ನಲ್ಲಿ 16 ರನ್ ಗಳಿಸಿ ಭಾರತದ ಮುಂದೆ 17 ರನ್‌ಗಳ ಗುರಿ ಇರಿಸಿತು. ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡದ ಬ್ಯಾಟರ್ಸ್ ಸೂಪರ್ ಓವರ್‌ನಲ್ಲಿ ಕೇವಲ 10 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಅತ್ಯಂತ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಎಡವಿದ ಭಾರತ-ಎ ತಂಡವು 6 ರನ್‌ಗಳ ಸೋಲು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications