
ಬೆಕನ್‌ಹ್ಯಾಮ್, ಜುಲೈ 7: ಕರ್ನಾಟಕದ ಬ್ಯಾಟ್ಸ್‌ಮನ್‌ಗಳಾದ ರವಿಕುಮಾರ್ ಸಮರ್ಥ್ ಮತ್ತು ಕರುಣ್ ನಾಯರ್, ವೆಸ್ಟ್ ಇಂಡೀಸ್ 'ಎ' ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ವೈಭವ ಪ್ರದರ್ಶಿಸಿದ್ದಾರೆ.
ನಾಲ್ಕು ದಿನಗಳ ಪಂದ್ಯದ ಮೂರನೇ ದಿನ ಸಂಪೂರ್ಣವಾಗಿ ವಿಂಡೀಸ್ ಬೌಲರ್‌ಗಳನ್ನು ಭಾರತ 'ಎ' ತಂಡದ ಬ್ಯಾಟ್ಸ್‌ಮನ್‌ಗಳು ಗೋಳುಹೋಯ್ದುಕೊಂಡರು.
ಎರಡನೆಯ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 159 ರನ್ ಗಳಿಸಿದ್ದ ಭಾರತ 'ಎ' ಆ ಮೊತ್ತಕ್ಕೆ 21 ರನ್ ಪೇರಿಸುವಷ್ಟರಲ್ಲಿ ಮಯಂಕ್ ಅಗರ್ವಾಲ್ ಅವರ ವಿಕೆಟ್ ಕಳೆದುಕೊಂಡಿತು.
ಹಿಂದಿನ ದಿನವೇ ಶತಕ ಬಾರಿಸಿದ್ದ ಪೃಥ್ವಿ ಶಾ ತಮ್ಮ ಆಕ್ರಮಣಕಾರಿ ಆಟ ಮುಂದುವರಿಸಿದ್ದರು. ನಿರ್ಭೀತಿಯಿಂದ ವಿಂಡೀಸ್ ಬೌಲರ್‌ಗಳ ಎಸೆತಗಳನ್ನು ಲೀಲಾಜಾಲವಾಗಿ ಬೌಂಡರಿ ಗೆರೆಗೆ ಅಟ್ಟುತ್ತಿದ್ದ ಪೃಥ್ವಿ, ಅವರನ್ನು ಕೂಡಿಕೊಂಡ ಆರ್. ಸಮರ್ಥವಾಗಿ ತಾಳ್ಮೆಯ ಆಟಕ್ಕೆ ಮೊರೆಹೋದರು.
ಇಬ್ಬರೂ ಎರಡನೆಯ ವಿಕೆಟ್‌ಗೆ 158 ರನ್ ಕಲೆಹಾಕಿದರು. ವೇಗದ ಆಟವಾಡಿದ ಪೃಥ್ವಿ ಶಾ ದ್ವಿಶತಕದ ಸನಿಹದಲ್ಲಿ ಎಡವಿದರು. 169 ಎಸೆತಗಳಲ್ಲಿನ 28 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 188 ರನ್ ಚಚ್ಚಿದ್ದ ಪೃಥ್ವಿ, ಶರ್ಮನ್ ಲೆವಿಸ್‌ಗೆ ವಿಕೆಟ್ ಒಪ್ಪಿಸಿದರು.
ಬಳಿಕ ಕರ್ನಾಟಕದ ಆಟಗಾರರ ಜುಗಲ್ಬಂದಿ ಶುರುವಾಯಿತು. 166 ರನ್‌ಗಳ ಜತೆಯಾಟ ನೀಡಿದ್ದ ಜೋಡಿಯನ್ನು ಚೆಮರ್ ಹೋಲ್ಡರ್ ಬೇರ್ಪಡಿಸಿದರು.
202 ಎಸೆತಗಳಲ್ಲಿ 137 ರನ್ ಗಳಿಸಿದ್ದ ಸಮರ್ಥ್ ಔಟಾದ ಬೆನ್ನಲ್ಲೇ, ಮೊದಲ ಇನ್ನಿಂಗ್ಸ್‌ನ ಅತ್ಯಧಿಕ ಸ್ಕೋರರ್ ಹನುಮ ವಿಹಾರಿ ಕೂಡ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಎಚ್ಚರಿಕೆಯ ಆಟ ಆಡಿರುವ ನಾಯಕ ಕರುಣ್ ನಾಯರ್ 77 (132) ಮತ್ತು ವಿಜಯ ಶಂಕರ್ 10 (18) ರನ್ ಗಳಿಸಿ ದಿನದಾಟ ಮುಗಿಸಿದರು.
ಇಂದು ಆಟದ ಕೊನೆಯ ದಿನವಾಗಿದ್ದು, ಭಾರತ ಎ ತಂಡ ಒಟ್ಟಾರೆ 286 ರನ್‌ಗಳ ಮುನ್ನಡೆ ಸಾಧಿಸಿದೆ. ನಾಯಕ ಕರುಣ್ ನಾಯರ್ ಬೇಗನೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು, ವೆಸ್ಟ್ ಇಂಡೀಸ್ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮುಂದಾಗುತ್ತಾರೆಯೇ ಅಥವಾ ಬ್ಯಾಟಿಂಗ್ ಅಭ್ಯಾಸಕ್ಕೆ ಒತ್ತು ನೀಡುತ್ತಾರೆಯೇ ಎನ್ನುವುದು ಕುತೂಹಲ ಮೂಡಿಸಿದೆ.
ಸಂಕ್ಷಿಪ್ತ ಸ್ಕೋರ್
ಭಾರತ: 133 & 536/4 (100) ಪೃಥ್ವಿ ಶಾ 188, ಆರ್. ಸಮರ್ಥ್ 137, ಕರುಣ್ ನಾಯರ್ ಅಜೇಯ 77, ಮಯಂಕ್ ಅಗರ್ವಾಲ್ 68, ಶೆರ್ಮಾನ್ ಲೆವಿಸ್ 100/2, ಡೆವೊನ್ ಥಾಮಸ್ 60/1
ವೆಸ್ಟ್ ಇಂಡೀಸ್: 383/10 (101.2)