U19 Women's T20 World Cup: ಚಾಂಪಿಯನ್ ಪಟ್ಟ ಉಳಿಸಿಕೊಂಡ ಭಾರತ ವನಿತೆಯರು
ಮಲೇಷ್ಯಾದ ಕೌಲಾಲಂಪುರದ ಬ್ಯೂಮಾಸ್ ಓವಲ್‌ನಲ್ಲಿ ನಡೆದ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ವನಿತೆಯರು ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಭಾರತ ಎದುರು ದಕ್ಷಿಣ ಆಫ್ರಿಕಾ ಸಂಪೂರ್ಣ ಮಂಕಾಯಿತು. ಪರಿಣಾಮ ಭಾರತ ಸುಲಭ ಗೆಲುವು ಕಂಡಿತ್ತು.
ಟಾಸ್ ಸೋತು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ ಕೇವಲ 82 ರನ್‌ಗಳಿಗೆ ಆಲೌಟ್ ಮಾಡಿತು. ಇದಾದ ಬಳಿಕ ಗೊಂಗಡಿ ತ್ರಿಶಾ ಅವರ ಅಜೇಯ 44 ರನ್ ಮತ್ತು ಸಾನಿಕಾ ಚಲ್ಕೆ ಅವರ ಅಜೇಯ 26 ರನ್‌ಗಳ ಅಮೋಘ ಇನ್ನಿಂಗ್ಸ್‌ನ ನೆರವಿನಿಂದ 11.2 ಓವರ್‌ಗಳಲ್ಲಿ 84 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.

ನಿಕ್ಕಿ ಪ್ರಸಾದ್ ನೇತೃತ್ವದ ಭಾರತ ವನಿತೆಯರ ತಂಡ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಇದಕ್ಕೂ ಮೊದಲು 2023ರ ಟೂರ್ನಿಯಲ್ಲಿ ಶೆಫಾಲಿ ವರ್ಮಾ ನಾಯಕತ್ವದ ಟೀಮ್ ಇಂಡಿಯಾ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು.
ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ 3 ಪ್ರಮುಖ ವಿಕೆಟ್ ಕಬಳಿಸಿದ ಸ್ಟಾರ್ ಆಲ್ ರೌಂಡರ್ ಗೊಂಗಡಿ ತ್ರಿಶಾ ಭಾರತದ ಪ್ರಶಸ್ತಿ ಗೆಲುವಿನ ಹೀರೋ ಆದರು . ಇದಾದ ಬಳಿಕ 83 ರನ್‌ಗಳ ಗುರಿ ಬೆನ್ನಟ್ಟಿದ ಭಾರತದ ಪರ ಅಜೇಯ 44 ರನ್‌ಗಳ ಇನಿಂಗ್ಸ್ ಆಡುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಫೈನಲ್ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನಕ್ಕಾಗಿ ತ್ರಿಶಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಇದಲ್ಲದೆ, ಗೊಂಗಡಿ ತ್ರಿಶಾ ಅವರು ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಅವರು 309 ರನ್ ಗಳಿಸಿ 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ದಕ್ಷಿಣ ಆಫ್ರಿಕಾ 8 ತಿಂಗಳ ನಂತರ ಎರಡನೇ ಬಾರಿಗೆ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಸೋತಿದೆ. ಇದಕ್ಕೂ ಮೊದಲು, ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು 29 ಜೂನ್ 2023 ರಂದು ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿತ್ತು. ಈ ಗೆಲುವಿನೊಂದಿಗೆ ಭಾರತ ಟಿ20 ವಿಶ್ವಕಪ್ ವಶಪಡಿಸಿಕೊಂಡಿದ್ದು, 16 ವರ್ಷಗಳ ಐಸಿಸಿ ಟ್ರೋಫಿ ಬರಗಾಲಕ್ಕೆ ತೆರೆ ಎಳೆದಿತ್ತು.
ಉಭಯ ತಂಡಗಳು
ದಕ್ಷಿಣ ಆಫ್ರಿಕಾ ತಂಡ: ಜೆಮ್ಮಾ ಬೋಥಾ, ಸಿಮೋನ್ ಲೌರೆನ್ಸ್, ಡಿಯಾರಾ ರಾಮ್ಲಾಕನ್, ಫೇ ಕೌಲಿಂಗ್, ಕೈಲಾ ರೇನೆಕೆ (ನಾಯಕಿ), ಕರಾಬೊ ಮೆಸೊ (ವಿಕೆಟ್‌ಕೀಪರ್), ಮೈಕೆ ವ್ಯಾನ್ ವೂರ್ಸ್ಟ್, ಸೆಶ್ನಿ ನಾಯ್ಡು, ಆಶ್ಲೀಗ್ ವ್ಯಾನ್ ವೈಕ್, ಮೊನಾಲಿಸಾ ಲೆಗೋಡಿ, ನ್ತಾಬಿಸೆಂಗ್ ನಿನಿ.
ಭಾರತ ತಂಡ: ಜಿ ಕಮಲಿನಿ (ವಿಕೆಟ್‌ಕೀಪರ್), ಗೊಂಗಡಿ ತ್ರಿಶಾ, ಸನಿಕಾ ಚಲ್ಕೆ, ನಿಕಿ ಪ್ರಸಾದ್ (ನಾಯಕಿ), ಈಶ್ವರಿ ಅವ್ಸರೆ, ಮಿಥಿಲಾ ವಿನೋದ್, ಆಯುಷಿ ಶುಕ್ಲಾ, ಜೋಶಿತಾ ವಿ ಜೆ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications