ಎಸಿಸಿ ಪುರುಷರ ಟಿ20 ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಏಳು ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಗೆಲುವಿನ ಆರಂಭವನ್ನು ಮಾಡಿತು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 183 ರನ್ ಸೇರಿಸಿತು. ಈ ಗುರಿಯನ್ನು ಹಿಂಬಾಲಿಸಿದ ಪಾಕ್ ಏಳು ವಿಕೆಟ್ ಕಳೆದು ಕೊಂಡು 176 ರನ್ ಸಿಡಿಸಿ ಸೋಲನ್ನು ಕೊಂಡಿತು.
ಭಾರತದ ಪರ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಹಾಗೂ ಪ್ರಭಸಿಮ್ರಾನ್ ಸಿಂಗ್ ಜೊತೆಗೂಡಿ ಪವರ್ ಪ್ಲೇನಲ್ಲಿ ಪವರ್ ಫುಲ್ ಪ್ರದರ್ಶನ ನೀಡಿದರು. ಈ ಜೋಡಿಯನ್ನು ಆರಂಭದಲ್ಲಿ ಕಟ್ಟಿ ಹಾಕಲು ಪಾಕ್ ವಿಫಲವಾಯಿತು. ಅಮೋಘವಾಗಿ ಬ್ಯಾಟ್ ಮಾಡುತ್ತಿದ್ದ ಅಭಿಷೇಕ್ ಶರ್ಮಾ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 35 ರನ್ ಬಾರಿಸಿ ಔಟ್ ಆದರು. ಇವರು ಔಟ್ ಆಗುವ ಮುನ್ನ ಇವರು ಮೊದಲ ವಿಕೆಟ್‌ಗೆ ಪ್ರಭಸಿಮ್ರಾನ್ ಸಿಂಗ್ ಜೊತೆಗೂಡಿ 6.1 ಓವರ್‌ಗಳಲ್ಲಿ 68 ರನ್ ಜೊತೆಯಾಟ ನೀಡಿದರು.

ಪ್ರಭಸಿಮ್ರಾನ್ ಸಿಂಗ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿ ಔಟ್ ಆದರು. ನೆಹಾಲ್ ವಧೇರಾ 2 ಬೌಂಡರಿ, 1 ಸಿಕ್ಸರ್ ಬಾರಿಸಿ 25 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದಾನಿ ಜವಾಬ್ದಾರಿ ಮರೆತರು. ಇನ್ನೊಬ್ಬ ಆಟಗಾರ ರಮಣದೀಪ್ ಸಿಂಗ್ 17 ರನ್ ಬಾರಿಸಿ ಔಟ್ ಆದರು.
ನಾಯಕ ತಿಲಕ್ ವರ್ಮಾ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿ ಔಟ್ ಆದರು. ಪಾಕ್ ಪರ ಸೂಫಿಯಾನ್ ಮುಖೀಮ್ ಎರಡು ವಿಕೆಟ್ ಕಬಳಿಸಿದರು.
ಗುರಿಯನ್ನು ಹಿಂಬಾಲಿಸಿದ ಪಾಕ್ ತಂಡದ ಆರಂಭ ಕಳಪೆಯಾಗಿತ್ತು. ಮೊಹಮ್ಮದ್ ಹ್ಯಾರಿಸ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಒಮೈರ್ ಯೂಸುಫ್ ಸಹ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಮೂರನೇ ವಿಕೆಟ್‌ಗೆ ಯಾಸಿರ್ ಖಾನ್ ಹಾಗೂ ಖಾಸಿಂ ಅಕ್ರಂ ಕೊಂಚ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಈ ಜೋಡಿ 35 ಎಸೆತಗಳಲ್ಲಿ 53 ರನ್ ಸಿಡಿಸಿದರು. ಈ ಜೊತೆಯಾಟವನ್ನು ಬೇರ್ಪಡಿಸುವಲ್ಲಿ ಅಂಶುಲ್ ಕಾಂಬೋಜ್ ಯಶಸ್ವಿಯಾದರು.
ಖಾಸಿಂ ಅಕ್ರಂ 27 ರನ್‌ಗಳಿಗೆ ಆಟ ಮುಗಿಸಿದರು. ಅರಾಫತ್ ಮಿನ್ಹಾಸ್ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 41 ರನ್ ಸಿಡಿಸಿ ಔಟ್ ಆದರು. ಅಬ್ದುಲ್ ಸಮದ್, ಅಬ್ಬಾಸ್ ಅಫ್ರಿದಿ ಅಜೇಯ 18 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಭಾರತದ ಪರ ಅನ್ಶುಲ್ ಕಾಂಬೋಜ್ 3, ರಾಸಿಖ್ ಸಲಾಂ, ನಿಶಾಂತ್ ಸಿಂಧು ತಲಾ ಎರಡು ವಿಕೆಟ್ ಕಬಳಿಸಿದರು.