ಭರವಸೆಯ ಆಟಗಾರ ಜುಗರಾಜ್ ಸಿಂಗ್ ಬಾರಿಸಿದ ನಾಲ್ಕು ಗೋಲುಗಳ ಸಹಾಯದಿಂದ ಭಾರತ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತ 14-3 ಗೋಲಗಳ ಭರ್ಜರಿ ಪ್ರದರ್ಶನದ ಬಲದಿಂದ ಕೆನಡಾ ತಂಡವನ್ನು ಮಣಿಸಿ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆದಿದೆ.
ಆರಂಭದಿಂದಲೂ ಭಾರತದ ಆಟಗಾರರು ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದರು. ಈ ವೇಳೆ ನೀಲಕಂಠ ಶರ್ಮಾ ಅವರ ಮೊದಲ ಗೋಲಿನ ನಗೆ ಬೀರಿದರು. ಈ ಗೋಲಿನ ಸಂಭ್ರಮ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿ ಇರುವಾಗಲೇ ಭಾರತದ ಪರ ರಾಜೀಂದ್ರ ಸಿಂಗ್ 10ನೇ ನಿಮಿಷದಲ್ಲಿ ಗೋಲು ಬಾರಿಸಿ ಮಿಂಚಿದರು. ಇದೇ ಅವಧಿಯಲ್ಲಿ ಜುಗರಾಜ್ ಸಿಂಗ್ ಹಾಗೂ ಅಮಿತ್ ರೋಹಿದಾಸ್ ಅವರು ಸೊಗಸಾದ ಪ್ರದರ್ಶನ ನೀಡಿ ಗೋಲು ಬಾರಿಸಿದರು. ಈ ಅವಧಿಯಲ್ಲಿ ಕೆನಡಾ ಪರ ಬ್ರೆಂಡನ್ ಗುರಾಲಿಯುಕ್ 11ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರವನ್ನು ಕಡಿಮೆ ಮಾಡುವಲ್ಲಿ ಶ್ರಮಿಸಿದರು. ಈ ಅವಧಿಯಲ್ಲಿ ಭಾರತ 4-1 ರಿಂದ ಮುನ್ನಡೆ ಸಾಧಿಸಿತ್ತು.

ಭಾರತದ ಪರ ಎರಡನೇ ಅವಧಿಯಲ್ಲೂ ರಾಜಿಂದರ್ ಸಿಂಗ್ (24ನೇ ನಿಮಿಷ), ದಿಲ್‌ಪ್ರೀತ್ ಸಿಂಗ್ (25ನೇ ನಿಮಿಷ), ಜುಗರಾಜ್ ಸಿಂಗ್ (26ನೇ ನಿಮಿಷ) ಗೋಲು ಬಾರಿಸಿ ಅಬ್ಬರಿಸಿದರು. ಈ ಅವಧಿಯಲ್ಲಿ ಭಾರತ 7-1 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ಮೂರನೇ ಅವಧಿಯಲ್ಲಿ ಸೆಲ್ವಂ ಕಾರ್ತಿ (43ನೇ ನಿಮಿಷ), ಜುಗರಾಜ್ ಸಿಂಗ್ (39ನೇ ನಿಮಿಷ) ಗೋಲು ಬಾರಿಸಿ ಅಂತರವನ್ನು ಹಿಗ್ಗಿಸಿದರು. ಈ ಅವಧಿಯಲ್ಲಿ ಕೆನಡಾ ಪರ ಮತ್ತೊಂದು ಗೋಲು ದಾಖಲಾಗಿದ್ದರಿಂದ ಅಂತರ 9-2ಕ್ಕೆ ಕಡಿಮೆ ಆಯಿತು.
ಕೊನೆಯ ಅವಧಿಯ ಆಟದಲ್ಲೂ ಭಾರತದ ಭರವಸೆಯ ಆಟಗಾರರು ಸೊಗಸಾದ ಆಟದ ಪ್ರದರ್ಶನ ನೀಡಿದರು. ಈ ಅವಧಿಯಲ್ಲಿ ಅಮಿತ್ ರೋಹಿದಾಸ್ (46ನೇ ನಿಮಿಷ), ಸಂಜಯ್ (56ನೇ ನಿಮಿಷ), ಅಭಿಷೇಕ್ (57, 59ನೇ ನಿಮಿಷ), ಜುಗರಾಜ್ ಸಿಂಗ್ ಸಹ ಈ ಅವಧಿಯಲ್ಲಿ ಒಂದು ಗೋಲು ಬಾರಿಸಿ ಅಂತರವನ್ನು ಹಿಗ್ಗಿಸಿದರು. ಕೊನೆಯ ಅವಧಿಯ ಆಟದಲ್ಲೂ ಕೆನಡಾ ಒಂದು ಗೋಲು ಬಾರಿಸಿ ಅಂತರವನ್ನು ಹೆಚ್ಚಿಸಿಕೊಂಡಿತು. ಈ ಮೂಲಕ ಭಾರತ ತಂಡ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ.