ಚೆನ್ನೈ: ಎಫ್‌ಐಎಚ್ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನವನ್ನು ನೀಡಿದ್ದು 7-0 ಗೋಲುಗಳ ಅಂತರದಿಂದ ಚಿಲಿ ತಂಡವನ್ನು ಮಣಿಸಿ ಶುಭಾರಂಭವನ್ನು ಮಾಡಿದೆ. ಈ ಗೆಲುವಿನ ಮೂಲಕ ಭಾರತ ಬಿ ಗುಂಪಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.
ಮೇಯರ್ ರಾಧಾಕೃಷ್ಣನ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ತಂಡ ಭರ್ಜರಿ ಪ್ರದರ್ಶನ ನೀಡಿತು. ಭಾರತ ತಂಡ ಮೊದಲಾವಧಿಯಲ್ಲಿ ಗೋಲು ಬಾರಿಸುವ ಪ್ರಯತ್ನವನ್ನು ಪಟ್ಟಿತು. ಆದರೆ ಈ ಆಸೆ ಫಲಿಸಲಿಲ್ಲ. ಆದರೆ ಎರಡನೇ ಅವಧಿಯ ಆಟದಲ್ಲಿ ಭಾರತ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿತು. ಈ ವೇಳೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಭಾರತ ತಂಡ ಗೋಲುಗಳನ್ನು ಬಾರಿಸಿತು.

ಎರಡನೇ ಅವಧಿಯ ಆಟದಲ್ಲಿ ಕುಜೂರ್ ರೋಸನ್ 15, 20ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ ಆಧಾರವಾದರು. ಅಲ್ಲದೆ ಭಾರತ ಗೋಲುಗಳ ಅಂತರ ಸಾಧಿಸಲು ಕಾರಣರಾದರು. ಇದೇ ಅವಧಿಯಲ್ಲಿ ಧೀರಜ್ ಸಿಂಗ್ 24ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪರಿಣಾಮ ಭಾರತ ಈ ಅವಧಿಯಲ್ಲಿ 3-0 ಗೋಲುಗಳ ಅಂತರವನ್ನು ಕಾಯ್ದುಕೊಂಡಿತು. ಮೂರನೇ ಅವಧಿಯ ಆಟದಲ್ಲಿ ಧೀರಜ್ ಸಿಂಗ್ 33ನೇ ನಿಮಿಷ, ಅಜೀತ್ ಯಾದವ್ 34ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪರಿಣಾಮ ಭಾರತ 5-0 ಗೋಲುಗಳ ಮುನ್ನಡೆ ಸಾಧಿಸಿತು.
ಕೊನೆಯ ಅವಧಿಯ ಆಟದಲ್ಲಿ ಎಕ್ಕಾ ಅನ್ಮೋಲ್ ಹಾಗೂ ರೋಹಿತ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ದಾಖಲಿಸಿದರು. ಈ ಅವಧಿಯಲ್ಲಿ ಗೋಲು ಬಾರಿಸಿ ಅಂತರವನ್ನು ಕಡಿಮೆ ಮಾಡುವ ಚಿಲಿ ಯೋಜನೆ ಫಲಿಸಲಿಲ್ಲ. ಪರಿಣಾಮ ಭಾರತ ಎಫ್‌ಐಎಚ್ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದೆ.