ಇಂದು ಟಿ20 ಎರಡನೇ ಪಂದ್ಯ: ಗೆದ್ದರೆ ಸರಣಿ ಭಾರತದ ವಶ

ಕಾರ್ಡಿಫ್, ಜುಲೈ 6: ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ವಿರಾಟ್ ಕೊಹ್ಲಿ ಪಡೆ ಸೋಫಿಯಾ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುವ ಎರಡನೆಯ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿ ವಶಮಾಡಿಕೊಳ್ಳುವ ತವಕದಲ್ಲಿದೆ.
ಕುಲದೀಪ್ ಯಾದವ್ ಅವರ ಮಣಿಕಟ್ಟಿನ ಸ್ಪಿನ್‌ಗೆ ತತ್ತರಿಸಿದ್ದ ಇಂಗ್ಲೆಂಡ್ ಪಡೆ, ಈ ಪಂದ್ಯದಲ್ಲಿ ಅವರ ಸವಾಲನ್ನು ಎದುರಿಸುವುದು ಹೇಗೆ ಎಂಬ ಚಿಂತೆಯಲ್ಲಿದೆ. ಕುಲದೀಪ್ ಅವರನ್ನು ಸಮರ್ಥವಾಗಿ ಎದುರಿಸಿದರೆ ಭಾರತದ ಉಳಿದ ಬೌಲರ್‌ಗಳನ್ನು ಲೀಲಾಜಾಲವಾಗಿ ದಂಡಿಸಬಹುದು ಎಂಬುದು ಇಂಗ್ಲೆಂಡ್ ಲೆಕ್ಕಾಚಾರ.
ಆದರೆ, ಮೊದಲ ಪಂದ್ಯದಲ್ಲಿ ಅಷ್ಟೇನೂ ಪರಿಣಾಮಕಾರಿಯಾಗದಿದ್ದರೂ ಲೆಗ್‌ಸ್ಪಿನ್ನರ್ ಯಜುರ್ವೇಂದ್ರ ಚಾಹಲ್ ಅವರ ತಿರುವಿನ ಎಸೆತಗಳನ್ನು ಎದುರಿಸುವುದು ಸುಲಭವಲ್ಲ ಎಂಬುದು ಸಹ ಇಂಗ್ಲೆಂಡ್‌ಗೆ ಅರಿವಿದೆ.
ಇಂಗ್ಲೆಂಡ್ ತಂಡದ ಹನ್ನೊಂದೂ ಮಂದಿ ಉತ್ತಮ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆಲ್‌ರೌಂಡರ್‌ಗಳ ಬಲ ಹೆಚ್ಚಿದೆ. ಈ ಪಂದ್ಯದಲ್ಲಿ ಅದು ಸಿಡಿದೇಳುವ ಎಲ್ಲ ಅವಕಾಶವೂ ಇದೆ.
ಮೊದಲ ಪಂದ್ಯದಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದ ಅಲೆಕ್ಸ್ ಹೇಲ್ಸ್ ಅವರ ಬದಲು ಡೇವಿಡ್ ಮಲನ್ ಸ್ಥಾನ ಪಡೆದರೂ ಅಚ್ಚರಿಯಿಲ್ಲ. ಭಾರತದ ಬ್ಯಾಟ್ಸ್‌ಮನ್‌ಗಳಿಂದ, ಮುಕ್ಯವಾಗಿ ರಾಹುಲ್ ಅವರಿಂದ ತೀವ್ರ ದಂಡನೆಗೆ ಒಳಗಾಗಿದ್ದ ಬೌಲರ್ ಲಿಯಾಮ್ ಪ್ಲಂಕೆಟ್ ಅವರ ಬದಲು ಜೇಕ್ ಬಾಲ್ ಅವಕಾಶ ಪಡೆದುಕೊಳ್ಳಬಹುದು.

ಪ್ರಯೋಗ ಮುಂದುವರಿಯುವುದೇ?
ಇನ್ನು ಬ್ಯಾಂಟಿಂಗ್ ವಿಭಾಗದಲ್ಲಿ ಭಾರತದ ಮೇಲಿನ ಕ್ರಮಾಂಕ ಹೆಚ್ಚು ಪ್ರಬಲವಾಗಿದೆ. ವಿರಾಟ್ ಕೊಹ್ಲಿ ಪ್ರಯೋಗಗಳಿಗೆ ಒಡ್ಡಿಕೊಳ್ಳಲು ಸಿದ್ಧರಾಗಿರುವುದರಿಂದ ಮೊದಲ ಪಂದ್ಯದಂತೆಯೇ ಬ್ಯಾಟಿಂಗ್ ಕ್ರಮಾಂಕ ಇರಲಿದೆ ಎಂದು ನಿರೀಕ್ಷಿಸುವಂತಿಲ್ಲ.
ಮೊದಲ ಪಂದ್ಯದಲ್ಲಿ ಅಬ್ಬರದ ಶತಕ ಗಳಿಸಿದ್ದ ಕೆ.ಎಲ್. ರಾಹುಲ್ ಮೇಲೆ ನಿರೀಕ್ಷೆಗಳ ಭಾರ ಹೆಚ್ಚಾಗಿದೆ. ಈ ಪಂದ್ಯದಲ್ಲಿಯೂ ಅವರು ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆಯೇ ಅಥವಾ ಬೇರೆ ಕ್ರಮಾಂಕದಲ್ಲಿ ಆಡುತ್ತಾರೆಯೇ ಎಂಬ ಗುಟ್ಟನ್ನು ಕೊಹ್ಲಿ ಬಿಟ್ಟುಕೊಟ್ಟಿಲ್ಲ.

ಕುಲದೀಪ್ ಮೇಲೆ ಎಲ್ಲರ ಕಣ್ಣು
ಮೊದಲ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಲಯ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಉಮೇಶ್ ಯಾದವ್ ಉತ್ತಮ ಪ್ರದರ್ಶನ ನೀಡಿದ್ದರು. ಈ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಸಫಲರಾದರೆ ಭಾರತಕ್ಕೆ ಮೇಲುಗೈ ಖಚಿತ.
ಕುಲದೀಪ್ ಯಾದವ್ ಮೇಲೆಯೂ ನಿರೀಕ್ಷೆ ಹೆಚ್ಚಳವಾಗಿದೆ. ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ಮೇಲೆ ಕುಲದೀಪ್ ಮತ್ತು ಚಾಹಲ್ ಒತ್ತಡ ಹೇರಬಲ್ಲರು.
ಭಾರತದ ಅಂತಿಮ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ವೇಗದ ಬೌಲರ್‌ಗಳಾದ ದೀಪಕ್ ಚಾಹರ್ ಮತ್ತು ಸಿದ್ಧಾರ್ಥ ಕೌಲ್ ಅವರಿಗೆ ಅನುಭವದ ಕೊರತೆ ಇರುವುದರಿಂದ ಅನುಭವಿಗಳೊಂದಿಗೇ ಕಣಕ್ಕಿಳಿಯುವುದು ಸೂಕ್ತ.

ರೋಹಿತ್ ಶರ್ಮಾಗೆ 19 ರನ್ ಅಗತ್ಯ
ವಿರಾಟ್ ಕೊಹ್ಲಿ ಬಳಿಕ ಟಿ20 ಪಂದ್ಯಗಳಲ್ಲಿ 2000 ರನ್ ಗಳಿಸಿದ ಭಾರತದ ಎರಡನೆಯ ಹಾಗೂ ಜಗತ್ತಿನ ಐದನೇ ಆಟಗಾರ ಎನಿಸಿಕೊಳ್ಳಲು ರೋಹಿತ್ ಶರ್ಮಾಗೆ 19 ರನ್‌ಗಳ ಅವಶ್ಯಕತೆ ಇದೆ.
ಇನ್ನು ಕಾರ್ಡಿಫ್‌ನಲ್ಲಿ ನಡೆದ ಎಲ್ಲ ಪಂದ್ಯಗಳಲ್ಲಿಯೂ ಇಂಗ್ಲೆಂಡ್ ಗೆದ್ದುಕೊಂಡಿದೆ. ಅದೇ ರೀತಿ 2018 ರ ಮಾರ್ಚ್ 8ರಿಂದ ತಾನಾಡಿದ ಸತತ ಏಳು ಟಿ20 ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ.
ಪಂದ್ಯದ ಸಮಯ
ಜುಲೈ 6, ರಾತ್ರಿ 10 (ಭಾರತೀಯ ಕಾಲಮಾನ)
ಸ್ಥಳ: ಸೋಫಿಯಾ ಗಾರ್ಡನ್, ಕಾರ್ಡಿಫ್
ನೇರಪ್ರಸಾರ: ಸೋನಿ ಸಿಕ್ಸ್, ಸೋನಿ ಲೈವ್ ಆಪ್
ಸರಾಸರಿ ಮೊತ್ತ: ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 145 ರನ್.
ಸಂಭಾವ್ಯ ತಂಡಗಳು
ಭಾರತ: ವಿರಾಟ್ ಕೊಹ್ಲಿ, ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಸುರೇಶ್ ರೈನಾ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಕುಲದೀಪ್ ಯಾದವ್, ಯಜುರ್ವೇಂದ್ರ ಚಾಹಲ್
ಇಂಗ್ಲೆಂಡ್: ಇಯಾನ್ ಮಾರ್ಗನ್, ಜೋಸ್ ಬಟ್ಲರ್, ಜೇಸನ್ ರಾಯ್, ಅಲೆಕ್ಸ್ ಹೇಲ್ಸ್/ಡೇವಿಡ್ ಮಲನ್, ಜಾನಿ ಬೈರ್‌ಸ್ಟೋ, ಮೊಯೀನ್ ಅಲಿ, ಆದಿಲ್ ರಶೀದ್, ಲಿಯಾಮ್ ಪ್ಲಂಕೆಟ್/ಜೇಕ್ ಬಾಲ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications