ಢಾಕಾ, ಫೆ.11: 19 ವರ್ಷದೊಳಗಿನ ಕಿರಿಯರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಬಾಂಗ್ಲಾ ತಂಡದ ವಿರುದ್ದ ವೆಸ್ಟ್ ಇಂಡೀಸ್ ಜಯಗಳಿಸಿ ಫೈನಲ್ ಗೆ ಲಗ್ಗೆ ಹಾಕಿದೆ. ಈ ಮೂಲಕ ಭಾನುವಾರ (ಫೆಬ್ರವರಿ 14) ದಂದು ಭಾರತದ ಜೊತೆ ಕಪ್ ಗಾಗಿ ಕೆರೆಬಿಯನ್ನರು ಸೆಣಸಲಿದ್ದಾರೆ.
ಗುರುವಾರ ನಡೆದ ಕಿರಿಯರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ತಂಡ 226 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕೆರೆಬಿಯನ್ ತಂಡ 48.4 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 230 ಗಳಿಸಿ ಗುರಿ ತಲುಪಿ 3 ವಿಕೆಟ್ ಗಳಿಂದ ಅಮೋಘವಾದ ಜಯಗಳಿಸಿತು.[ಅಂಡರ್ 19 ವಿಶ್ವಕಪ್: ಲಂಕಾ ಮಣಿಸಿದ ಭಾರತ ಫೈನಲಿಗೆ ಲಗ್ಗೆ]

ಢಾಕಾದ ಬೆಂಗಾಲ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಪ್ರಶಸ್ತಿಗಾಗಿ ಅಂತಿಮ ಹಣಾಹಣಿ ನಡೆಯಲಿದೆ. [ಭಾರತದ ರಿಷಬ್ ರಿಂದ ವಿಶ್ವದಾಖಲೆ]
ಟೂರ್ನಿಯಲ್ಲಿ ಭರ್ಜರಿಯಾಗಿ ಪ್ರದರ್ಶನ ಮಾಡುತ್ತ ಬಂದಿರುವ ರಾಹುಲ್ ದ್ರಾವಿಡ್ ಕೋಚಿಂಗ್ ಪಡೆಯುತ್ತಿರುವ ಭಾರತ ಹುಡುಗರು ಪ್ರಶಸ್ತಿ ಗೆಲ್ಲುವ ಫೆವರೀಟ್ ಎನಿಸಿದ್ದಾರೆ. ಕೆರೆಬಿಯನ್ನರು ಸಹ ಸ್ವಲ್ಪ ಮಟ್ಟಿಗೆ ಲಯ ಕಂಡುಕೊಂಡಿದ್ದು ತೀವ್ರ ಪೈಪೋಟಿ ನೀಡಲಿದ್ದಾರೆ. ಒಟ್ಟಿನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಈ ಎರಡು ತಂಡಗಳ ನಡುವೆ ತುರುಸಿನ ಆಟ ಕಂಡುಬರಲಿದೆ.
ಸ್ಕೋರ್ ವಿವರ :
ಬಾಂಗ್ಲಾದೇಶ 50 ಓವರ್ ಗಳಲ್ಲಿ 226 ರನ್ ಗೆ ಆಲ್ ಔಟ್ ಆಗಿದೆ. ಬಾಂಗ್ಲಾದೇಶ ಪರ ಮೆಹೆದಿ ಹಸನ್ 60 ರನ್ (74 ಎಸೆತಗಳು). ಮೊಹಮ್ಮದ್ ಸೈಫುದೀನ್ 36(55) ಉತ್ತಮ ಪ್ರದರ್ಶನ ನೀಡಿದ್ದಾರೆ, ವೆಸ್ಟ್ ಇಂಡೀಸ್ ಪರ ಕೀಮೋ ಪೌಲ್ 20/3 ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್ 48.4ಓವರ್ ಗಳಲ್ಲಿ 230/7 ಶಿಮ್ರೋನ್ ಹೆಟ್ಮಯರ್ 60 ರನ್ (59 ಎಸೆತ).ಶಮರ್ ಸ್ಪ್ರೀಂಜರ್ ಅಜೇಯ 69 ರನ್(88) (ಒನ್ಇಂಡಿಯಾ ಸುದ್ದಿ)