
ನವದೆಹಲಿ, ಸೆಪ್ಟೆಂಬರ್ 27: ಕಿವುಡರ ಐಸಿಸಿ ವರ್ಲ್ಡ್ ಕಪ್ ಟಿ20 ಟೂರ್ನಿಯ ಆತಿಥ್ಯವನ್ನು ಭಾರತ ಇದೇ ಮೊದಲಬಾರಿಗೆ ವಹಿಸಿಕೊಳ್ಳಲಿದೆ. ನವೆಂಬರ್ 23ರಿಂದ 30ರ ವರೆಗೆ ಭಾರತದ ಹರ್ಯಾಣ ರಾಜ್ಯದ ಗುರುಗ್ರಾಮ್ ನಲ್ಲಿ ಟೂರ್ನಿ ಆರಂಭಗೊಳ್ಳಲಿದೆ ಎಂದು ಭಾರತದಲ್ಲಿರುವ ಡೆಫ್ ಕ್ರಿಕೆಟ್ ಸೊಸೈಟಿ (ಡಿಸಿಎಸ್) ಗುರುವಾರ (ಸೆಪ್ಟೆಂಬರ್ 27) ತಿಳಿಸಿದೆ.
ಎಂಟು ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು ಎಂಟು ರಾಷ್ಟ್ರಗಳು ಪಾಲ್ಗೊಳ್ಳಲಿವೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಭಾರತ ಸೇರಿದಂತೆ ಒಟ್ಟು 8 ತಂಡಗಳಿಂದ ಸುಮಾರು 200 ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪಂದ್ಯಗಳಿಗನುಗುಣವಾಗಿ ಪ್ರತಿ ಗ್ರೂಪಿನ ಎರಡು ತಂಡಗಳು ಸೆಮಿಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಡೆಫ್ ಐಸಿಸಿಯ ಸಹಭಾಗಿತ್ವದೊಂದಿಗೆ ಟೂರ್ನಿಯ ಆಯೋಜನೆಯನ್ನು ಭಾರತದಲ್ಲಿರುವ ಡೆಫ್ ಕ್ರಿಕೆಟ್ ಸೊಸೈಟಿ (ಡಿಸಿಎಸ್) ವಹಿಸಿಕೊಳ್ಳಲಿದೆ.
'ದೇಶದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯಗೊಂಡಿರುವ ಕ್ರೀಡೆ. ಹೆಚ್ಚಿನವರ ಮೆಚ್ಚಿನ ಆಟವಿದು. ಕಿವುಡರ ಈ ಅಪರೂಪದ ಟೂರ್ನಿಯನ್ನು 2017ರಲ್ಲಿ ಸುಮಾರು 717 ಮಿಲಿಯನ್ ಟೀವಿ ವೀಕ್ಷಕರು ವೀಕ್ಷಿಸಿ ಸಂಭ್ರಮಿಸಿದ್ದರು, ಪ್ರೋತ್ಸಾಹಿಸಿದ್ದರು. ಈ ಬಾರಿಯೂ ವಿಕಲ ಚೇತನರ ಈ ಟೂರ್ನಿ ನಿಮ್ಮನ್ನು ರಂಜಿಸಲಿದೆ. ಟೂರ್ನಿಗೆ ನಿಮ್ಮೆಲ್ಲರ ಬೆಂಬಲ ಬೇಕು' ಎಂದು ಪತ್ರಿಕಾ ಪ್ರಕಟಣೆಯಲ್ಲಿ ಡಿಸಿಎಸ್ ಮುಖ್ಯ ಕಾರ್ಯದರ್ಶಿ ಸುಮಿತ್ ಜೈನ್ ತಿಳಿಸಿದ್ದಾರೆ.