ಭಾರತ vs ದ. ಆಫ್ರಿಕಾ: ಮೊದಲ ಟೆಸ್ಟ್‌ನ ಆಡುವ ಬಳಗದಲ್ಲಿ ಯಾರಿಗೆಲ್ಲಾ ಸ್ಥಾನ? ರಹಾನೆ, ವಿಹಾರಿ ಮೇಲೆ ಕಣ್ಣು!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಸರಣಿಯನ್ನು ಗೆಲ್ಲುವ ನಿಟ್ಟಿನಲ್ಲಿ ಭಾರೀ ತಾಲೀಮು ನಡೆಸುತ್ತಿದೆ. ವೈಟ್‌ಬಾಲ್ ಹಾಗೂ ರೆಡ್ ಬಾಲ್ ಮಾದರಿಗೆ ಪ್ರತ್ಯೇಕ ನಾಯಕರನ್ನು ನೇಮಿಸಿದ ಬಳಿಕ ನಡೆಯುತ್ತಿರುವ ಮೊದಲ ಸರಣಿ ಇದಾಗಿದ್ದು ರಾಹುಲ್ ದ್ರಾವಿಡ್ ಕೋಚ್ ಆಗಿ ಕರ್ತವ್ಯ ಆರಂಭಿಸಿದ ಬಳಿಕ ನಡೆಯುತ್ತಿರು ಮೊದಲ ವಿದೇಶಿ ಸರಣಿ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯಾಗಿದೆ.
ಇನ್ನು ಸೀಮಿತ ಓವರ್‌ಗಳ ನಾಯಕತ್ವದಿಂದ ಹೊರಬಂದ ಬಳಿಕ ವಿರಾಟ್ ಕೊಹ್ಲಿ ಈಗ ಟೆಸ್ಟ್ ಮಾದರಿಗೆ ಮಾತ್ರವೇ ನಾಯಕನಾಗಿ ಮುಂದುವರಿದಿದ್ದಾರೆ. ಇನ್ನು ಈ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ನಡುವೆ ನಡೆದ ಮುಸುಕಿನ ಗುದ್ದಾಟದ ಬಳಿಕ ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು ಇದರಲ್ಲಿ ವಿರಾಟ್ ಕೊಹ್ಲಿ ಯಾವ ರೀತಿಯಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕೂಡ ಬಹಳ ಮಹತ್ವ ಪಡೆಯಲಿದೆ. ಹೀಗಾಗಿ ವಿರಾಟ್ ಕೊಹ್ಲಿ ಪ್ರದರ್ಶನದ ಮೇಲೆಯೂ ಎಲ್ಲರ ಗಮನವಿದೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಈ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಆತ್ಮವಿಶ್ವಾಸದೊಮಡಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಬಾಕ್ಸಿಂಡ್ ಡೇಯಂದಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿಯುವ 11 ಆಟಗಾರರು ಯಾರು ಎಂಬುದು ಈಗ ಭಾರತೀಯ ತಂಡದ ಅಭಿಮಾನಿಗಳ ಕುತೂಹಲವಾಗಿದೆ. ಹಾಗಾದರೆ ಭಾರತದ ಸಂಭಾವ್ಯ ತಂಡ ಹೇಗಿದೆ ಎಂಬುದನ್ನು ಈ ವರದಿಯಲ್ಲಿ ಮುಂದೆ ಓದಿ..

ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಕನ್ನಡಿಗರು
ಇನ್ನು ಈ ಸರಣಿಯ ಹಿನ್ನಲೆಯಲ್ಲಿ ಮುಂಬೈನಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾಗ ಭಾರತೀಯ ಟೆಸ್ಟ್ ತಂಡದ ಉಪ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಅವರು ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ಹೀಗಾಗಿ ಕನ್ನಡಿಗ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ಪಮದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಪೂಜಾರ, ಕೊಹ್ಲಿ ನಂತರ ಕಣಕ್ಕಿಳಿಯುವುದು ಯಾರು?
ಇನ್ನು ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಕಣಕ್ಕಿಳಿಯುವುದು ಕೂಡ ಬಹುತೇಕ ಖಚಿತ. ಅನುಭವಿ ಆಟಗಾರನನ್ನು ದಕ್ಷಿಣ ಆಫ್ರಿಕಾದಂತ ಪಿಚ್‌ನಲ್ಲಿ ಹೊರಗಿಡುವ ಸಾಧ್ಯತೆಯಿಲ್ಲ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಆದರೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಯಾರು ಎಂಬುದು ಈಗ ಇರುವ ಪ್ರಶ್ನೆಯಾಗಿದೆ. ಸತತವಾಗಿ ವೈಫಲ್ಯವನ್ನು ಅನುಭವಿಸಿರುವ ಅಜಿಂಕ್ಯಾ ರಹಾನೆಯನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದ ಆಡುವ ಬಳಗದಲ್ಲಿ ಸೇರಿಸಿಕೊಳ್ಳುತ್ತಾರಾ ಅಥವಾ ಚೊಚ್ಚಲ ಪಂದ್ಯದಲ್ಲಿ ದಾಖಲೆಯ ಪ್ರದರ್ಶನ ನೀಡಿದ ಶ್ರೇಯಸ್ ಐಯ್ಯರ್‌ಗೆ ಅವಕಾಶ ನೀಡಲಾಗುತ್ತಾ ಎಂಬುದು ಸದ್ಯಕ್ಕಿರುವ ಪ್ರಶ್ನೆಯಾಗಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ.

ಬೌಲಿಂಗ್ ವಿಭಾಗ
ಇನ್ನು ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿಯುವುದು ಸ್ಪಷ್ಟ. ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ದಕ್ಷಿಣ ಆಫ್ರಿಕಾದ ಪಿಚ್‌ನಲ್ಲಿ ಟೀಮ್ ಇಂಡಿಯಾದ ವೇಗಿಗಳನ್ನು ಸಮರ್ಥವಾಗಿ ಬಳಸಲು ನಾಯಕ ಕೊಹ್ಲಿ ಯೋಜನೆ ರೂಪಿಸಿದ್ದಾರೆ. ಆರ್ ಅಶ್ವಿನ್ ಸ್ಪಿನ್ನರ್ ಆಗಿ ತಂಡದಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಕೊಡುಗೆ ನೀಡುವ ಸಾಮರ್ಥ್ಯವಿರುವುದರಿಂದಾಗಿ ಅಶ್ವಿನ್ ತಂಡಕ್ಕೆ ಹೆಚ್ಚಿನ ಬಲ ನೀಡಲಿದ್ದಾರೆ. ಇನ್ನು ವೇಗಿಗಳ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಜೊತೆಗೆ ಶಾರ್ದೂಲ್ ಠಾಕೂರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇನ್ನು ಶಾರ್ದೂಲ್ ಠಾಕೂರ್ ಕೂಡ ವೇಗದ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಭಾರತದ ಸಂಭಾವ್ಯ ಆಡುವ ಬಳಗ
ಟೀಮ್ ಇಂಡಿಯಾ; ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್ / ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications