ಭಾರತ ತಂಡ ಪ್ರಸಕ್ತ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಆಡಿರುವ ಎಂಟೂ ಪಂದ್ಯಗಳನ್ನು ಗೆದ್ದಿರುವ ರೋಹಿತ್ ಶರ್ಮಾ ಪಡೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನೀಯವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಸದ್ಯದ ಭಾರತ ತಂಡವನ್ನು ನೋಡಿದರೆ ಇತಿಹಾಸ ನಿರ್ಮಿಸುವ ಸನಿಹದಲ್ಲಿದೆ ಎಂದು ತೋರುತ್ತದೆ. ಈ ಭಾರತ ತಂಡದ ಪ್ರದರ್ಶನ ಬೇರೆ ಖಂಡಗಳ ತಂಡಗಳ ಜೊತೆಗೆ ಬಿಡಿ, ನಮ್ಮದೇ ಖಂಡದ ಇತರೆ ತಂಡಗಳಿಗಿಂತ ಅದ್ಭುತ ಫಾರ್ಮ್‌ನಲ್ಲಿದೆ.

ಟೀಮ್ ಇಂಡಿಯಾ ಈಗ ವಿಶ್ವ ಕ್ರಿಕೆಟ್‌ನಲ್ಲಿ ರಾಜನಂತೆ ಮರೆಯುತ್ತಿದೆ. ಐಸಿಸಿ ಶ್ರೇಯಾಂಕದ ಮೂರು ಮಾದರಿಯಲ್ಲಿ ನಂಬರ್ 1 ತಂಡ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿರುವ ಟೀಮ್ ಇಂಡಿಯಾ ಮುಕುಟಕ್ಕೆ, ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು ಏಕದಿನ ಕ್ರಿಕೆಟ್‌ನ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ನಂ.1 ಸ್ಥಾನ ಪಡೆಯುವ ಮೂಲಕ ಹೊಳಪು ಹೆಚ್ಚಿಸಿದ್ದಾರೆ.
ಐಸಿಸಿ ನಂ.1 ಟೆಸ್ಟ್ ತಂಡ - ಭಾರತ
ಐಸಿಸಿ ನಂ.1 ಏಕದಿನ ತಂಡ - ಭಾರತ
ಐಸಿಸಿ ನಂ.1 ಟಿ20 ತಂಡ - ಭಾರತ
ಐಸಿಸಿ ನಂ.1 ಏಕದಿನ ಬ್ಯಾಟರ್ - ಶುಭ್ಮನ್ ಗಿಲ್
ಐಸಿಸಿ ನಂ.1 ಏಕದಿನ ಬೌಲರ್ - ಮೊಹಮ್ಮದ್ ಸಿರಾಜ್
ಐಸಿಸಿ ನಂ.1 ಟೆಸ್ಟ್ ಬೌಲರ್ - ರವಿಚಂದ್ರನ್ ಅಶ್ವಿನ್
ಐಸಿಸಿ ನಂ.1 ಟೆಸ್ಟ್ ಆಲ್‌ರೌಂಡರ್ - ರವೀಂದ್ರ ಜಡೇಜಾ
ಐಸಿಸಿ ನಂ.1 ಟಿ20 ಬ್ಯಾಟರ್ - ಸೂರ್ಯಕುಮಾರ್ ಯಾದವ್
ಇನ್ನು ವಿಶ್ವಕಪ್ 2023ರ ಸೆಮಿಫೈನಲ್‌ಗೆ ಭಾರತ ತಂಡ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಅದೇ ಸಮಯದಲ್ಲಿ, 1996ರ ಚಾಂಪಿಯನ್ ಶ್ರೀಲಂಕಾ ತಂಡದ ಪ್ರಯಾಣವು ಕೊನೆಗೊಂಡಿದೆ. ಆದರೆ, ಪಾಕಿಸ್ತಾನವು ಸೆಮಿಫೈನಲ್‌ಗೆ ಪ್ರವೇಶಿಸುವುದು ಬಹುತೇಕ ಅಸಾಧ್ಯವಾಗಿದೆ.

ಈ ಮೂಲಕ ಏಷ್ಯಾದ ಒಂದು ತಂಡ ಮಾತ್ರ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಆದರೆ ಏಕದಿನ ವಿಶ್ವಕಪ್‌ನಲ್ಲಿ ಏಷ್ಯನ್ ತಂಡಗಳ ಪ್ರದರ್ಶನ ಹೇಗಿದೆ? ಯಾವ ಏಕದಿನ ವಿಶ್ವಕಪ್‌ನಲ್ಲಿ, ವಿಶ್ವಕಪ್ ಸೆಮಿಫೈನಲ್‌ಗೆ ತಲುಪಲು ಎಷ್ಟು ಏಷ್ಯನ್ ತಂಡಗಳು ಯಶಸ್ವಿಯಾಗಿವೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
1975ರಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಆಡಲಾಯಿತು. ಈ ವಿಶ್ವಕಪ್‌ನಲ್ಲಿ ಏಷ್ಯಾದ ಯಾವುದೇ ತಂಡ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಇದರ ನಂತರ, ಪಾಕಿಸ್ತಾನ ತಂಡವು ವಿಶ್ವಕಪ್ 1979ರ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು.
ಭಾರತ ಮತ್ತು ಪಾಕಿಸ್ತಾನ ತಂಡಗಳು 1983ರ ವಿಶ್ವಕಪ್‌ನಲ್ಲಿ ಏಷ್ಯನ್ ತಂಡಗಳಾಗಿ ಸೆಮಿಫೈನಲ್‌ಗೆ ಪ್ರವೇಶಿಸಿತು. ಆಗ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 1987ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾದವು.

ಆದರೆ 1992ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮಾತ್ರ ಏಷ್ಯನ್ ತಂಡವಾಗಿ ಸೆಮಿಫೈನಲ್ ತಲುಪಲು ಸಾಧ್ಯವಾಗಿತ್ತು. ಆಗ ಪಾಕಿಸ್ತಾನ ತಂಡ ಚೊಚ್ಚಲ ಮತ್ತು ಕೊನೆಯ ಬಾರಿಗೆ ಚಾಂಪಿಯನ್ ಆಗಿತ್ತು.
ಭಾರತ ಮತ್ತು ಶ್ರೀಲಂಕಾ ತಂಡಗಳು 1996ರ ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಿದವು. ಆದರೆ, 1999ರ ವಿಶ್ವಕಪ್‌ನಲ್ಲಿ ಏಷ್ಯನ್ ತಂಡವಾಗಿ, ಪಾಕಿಸ್ತಾನ ಮಾತ್ರ ಸೆಮಿಫೈನಲ್ ತಲುಪಿತು.
2003ರ ವಿಶ್ವಕಪ್‌ನಲ್ಲಿ 2 ಏಷ್ಯನ್ ತಂಡಗಳು ಸೆಮಿಫೈನಲ್ ತಲುಪಿದವು. ಭಾರತವನ್ನು ಹೊರತುಪಡಿಸಿ ಶ್ರೀಲಂಕಾ ತನ್ನ ಸ್ಥಾನವನ್ನು ಪಡೆದುಕೊಂಡಿತು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಹೀನಾಯವಾಗಿ ಸೋತಿತು. ಇನ್ನು 2007ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ಮಾತ್ರ ಸೆಮಿಫೈನಲ್ ತಲುಪಲು ಸಾಧ್ಯವಾಗಿತ್ತು ಹಾಗೂ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತು.

ಇದರ ನಂತರ 2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೆಮಿಫೈನಲ್ ಪ್ರವೇಶಿಸಲು ಯಶಸ್ವಿಯಾದವು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಮತ್ತು ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಭಾರತ ತಂಡವು ಮತ್ತೊಮ್ಮೆ ಚಾಂಪಿಯನ್ ಪಟ್ಟ ಪಡೆಯಿತು.
ಆದರೆ, ನಂತರದ 3 ಏಕದಿನ ವಿಶ್ವಕಪ್‌ಗಳಲ್ಲಿ ಅಂದರೆ 2015, 2019 ಮತ್ತು 2023ರ ವಿಶ್ವಕಪ್‌ಗಳಲ್ಲಿ ಭಾರತ ತಂಡವನ್ನು ಹೊರತುಪಡಿಸಿ, ಯಾವುದೇ ಏಷ್ಯಾದ ತಂಡವು ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ.