ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಫೈಟ್ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. 2025ರಲ್ಲಿ ಏಷ್ಯಾ ಕಪ್ ನಡೆಯಲಿದೆ. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಕೊಲಂಬೊದಲ್ಲಿ ಐಸಿಸಿ ವಾರ್ಷಿಕ್ ಸಾಮಾನ್ಯ ಸಭೆ ನಡೆಯಲಿದ್ದು,
ಕೊಲಂಬೊದಲ್ಲಿ ನಡೆಯಲಿರುವ ಸಭೆಯಲ್ಲಿ ಏಷ್ಯಾ ಕಪ್ ಕುರಿತು ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ನಡುವೆ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆ ಇದೇ ಜುಲೈ 17 ರಿಂದ 20ರ ನಡುವೆ ನಡೆಯಲಿದ್ದು, ಈ ಸಭೆಗಾಗಿ ಶ್ರೀಲಂಕಾದ ರಾಜಧಾನಿ ಸಿದ್ಧವಾಗಿದೆ.

ಏಷ್ಯ ಕಪ್ ಅಯೋಜನೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಡಿಯಲ್ಲಿ ಬರುತ್ತದೆ. ಈ ಟೂರ್ನಿಗೂ ಮುನ್ನ ಬಿಸಿಸಿಐ ಹಾಗೂ ಪಿಸಿಬಿ ನಡುವೆ ಮಾತುಕತೆ ನಡೆಯದೇ ಇದ್ದರೇ, ಪಂದ್ಯಾವಳಿಯ ಬಗ್ಗೆ ಯಾವುದೇ ನಿರ್ಧಾರವಾಗುವುದಿಲ್ಲ. ಈ ಬಾರಿಯ ಏಷ್ಯಾ ಕಪ್ ಸೆಪ್ಟಂಬರ್‌ನಲ್ಲಿ ನಡೆಯಲಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಸಭೆಯಲ್ಲಿ ಏಷ್ಯಾ ಕಪ್ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಬಿಸಿಸಿಐ ಏಷ್ಯಾ ಕಪ್ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಇದಕ್ಕಾಗಿ ಬಿಸಿಸಿಐ, ಭಾರತದ ಕೇಂದ್ರ ಸರ್ಕಾರದ ಹಸಿರು ನಿಶಾನೆಗಾಗಿ ಕಾಯುತ್ತಿದೆ. ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ, ಪಾಕ್ ವಿರುದ್ಧ ಆಡುವುದನ್ನು ಮುಂದುವರೆಸುತ್ತದೆ ಎಂದು ತಿಳಿಸಿದ್ದಾರೆ. ಆದರೆ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಕ್ರೀಡಾ ಸಚಿವರ ಈ ಹೇಳಿಕೆ ಏಷ್ಯಾ ಕಪ್ ಆಯೋಜಕರಿಗೆ ಕೊಂಚ ಖುಷಿ ನೀಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದಿಂದ ಎಸಿಸಿ ಏಷ್ಯಾ ಕಪ್‌ನಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಮಾಡಿಕೊಳ್ಳುತ್ತಿದೆ.