ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಭಾರತ ತಂಡಗಳ ಸೆಣಸಾಟಕ್ಕೆ ಮತ್ತೊಮ್ಮೆ ವರುಣ ಅಡ್ಡಿಪಡಿಸಿದ್ದಾನೆ.
ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಲು ಭಾರತವನ್ನು ಆಹ್ವಾನಿಸಿತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾಗ ಮಳೆ ಬಂದು ಇನ್ನಿಂಗ್ಸ್ ಸ್ಥಗಿತಗೊಂಡಾಗ ಭಾರತ ತಂಡ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್‌ಗಳನ್ನು ಕಲೆಹಾಕಿದೆ.

ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಡಿಎಲ್ಎಸ್ ವಿಧಾನದಡಿ ಇಂದೇ ಫಲಿತಾಂಶವನ್ನು ಕಾಣಬಹುದು. ಸದ್ಯ ಮಳೆ ನಿಂತಿರುವುದರಿಂದ ಪಂದ್ಯವನ್ನು ಸೋಮವಾರ, ಸೆಪ್ಟೆಂಬರ್ 11ರ ಮೀಸಲು ದಿನಕ್ಕೆ ಹೋಗದಂತೆ ತಡೆಯಬಹುದು.
ಓವರ್‌ಗಳನ್ನು ಕಡಿತಗೊಳಿಸಿ ಇಂದೇ (ಭಾನುವಾರ) ಆಟವನ್ನು ಆರಂಭಿಸಿ, ಭಾರತ ತಂಡ ಮತ್ತೆ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿದ್ದರೆ, ಪಾಕಿಸ್ತಾನ ತಂಡಕ್ಕೆ ಪರಿಷ್ಕೃತ ಗುರಿ ನೀಡಲಾಗುತ್ತದೆ.
ಇಂತಹ ಸನ್ನಿವೇಶದಲ್ಲಿ ಪಾಕಿಸ್ತಾನ ತಂಡಕ್ಕೆ 20 ಓವರ್‌ಗಳಲ್ಲಿ 181 ರನ್‌ಗಳ ಗುರಿಯನ್ನು ನೀಡಲಾಗುವುದು. 21 ಓವರ್‌ಗಳ ಆಟ ನಡೆದರೆ 187 ರನ್, 22 ಓವರ್‌ಗಳ ಆಟ ನಡೆದರೆ 194 ರನ್, 23 ಓವರ್‌ಗಳ ಆಟ ನಡೆದರೆ 200 ರನ್ ಮತ್ತು 24 ಓವರ್‌ಗಳ ಪಂದ್ಯದ ಸಂದರ್ಭದಲ್ಲಿ 206 ರನ್‌ಗಳ ಗುರಿಯನ್ನು ನೀಡಲಾಗುವುದು.