
ಕಡೇಯ ಪಂದ್ಯ ನಡೆದಿದ್ದು ಯಾವಾಗ ಗೊತ್ತಾ?!
ಭಾರತ-ಪಾಕಿಸ್ತಾನ ಕಡೇಯ ಸಾರಿ ಮುಖಾಮುಖಿಯಾಗಿದ್ದು 2019ರ ಏಕದಿನ ವಿಶ್ವಕಪ್‌ನಲ್ಲಿ ಅನ್ನೋದು ನಿಜ. ಆದರೆ ಇತ್ತಂಡಗಳ ಮಧ್ಯೆ ದ್ವಿಪಕ್ಷೀಯ ಕಡೇಯ ಪಂದ್ಯ ನಡೆದಿದ್ದು ಯಾವಾಗ ಗೊತ್ತಾ? ಸುಮಾರು 8 ವರ್ಷಗಳಿಗೆ ಹಿಂದೆ. 2012-13ರಲ್ಲಿ ಟಿ20ಐ ಸರಣಿಗಾಗಿ ಭಾರತಕ್ಕೆ ಪ್ರವಾಸ ಬಂದಿದ್ದ ಪಾಕ್, ಕಡೇಯ ಸಾರಿ ಮೆನ್ ಇನ್ ಬ್ಲೂ ವಿರುದ್ಧ ಸರಣಿ ಆಡಿತ್ತು. ಆ ಬಳಿಕ ಎರಡೂ ದೇಶಗಳ ಮಧ್ಯೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ.

ಎರಡೂ ದೇಶಗಳ ಮಧ್ಯೆ ರಾಜಿ ಯಾಕೆ?
ಭಯೋತ್ಪಾದನೆ, ಕದನ ವಿರಾಮ ಉಲ್ಲಂಘನೆ, ಗಡಿ ನುಸುಳುವಿಕೆಗೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಅಂಥ ಸೌಹಾರ್ದತೆಯಿಲ್ಲ. ಇದೇ ಕಾರಣಕ್ಕೆ ಭಾರತ ಮತ್ತು ಪಾಕ್ ನಡುವಿನ ಕ್ರಿಕೆಟ್ ಪಂದ್ಯಗಳು ನಡೆಯದಂತೆ ರಾಜಕೀಯ ಒತ್ತಡವಿತ್ತು. ಆದರೆ ಸೌಹಾರ್ದತೆ, ಸ್ಫೂರ್ತಿಯ ಧ್ಯೇಯ ಹೊಂದಿರುವ ಕ್ರೀಡೆಯಲ್ಲಿ ರಾಜಕೀಯದ ಅಡ್ಡಗಾಲು ಸರಿಯಲ್ಲ ಅನ್ನೋ ಕ್ರೀಡಾ ಪ್ರೇಮಿಗಳಿದ್ದಾರೆ. ಹೀಗಾಗಿ ಕಳೆದ ತಿಂಗಳು ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಉಭಯ ದೇಶಗಳು ನಡೆಸಿದ ಏಕಪಕ್ಷೀಯ ಕದನ ವಿರಾಮ ಯಶಸ್ವಿಯಾಗಿದೆ. ಹೀಗಾಗಿ ಭಾರತ-ಪಾಕ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವ ಆಸೆ ಮೂಡಿದೆ.

ಇಮ್ರಾನ್, ಮೋದಿಯಿಂದ ಗ್ರೀನ್ ಸಿಗ್ನಲ್
ಪಾಕಿಸ್ತಾನದ ಕ್ರಿಕೆಟ್ ದಂತಕತೆಯಾಗಿರುವ ಇಮ್ರಾನ್ ಖಾನ್ ಸದ್ಯ ಪಾಕ್‌ನ ಪ್ರಧಾನಿ ಗದ್ದುಗೆ ಅಲಂಕರಿಸಿದ್ದಾರೆ. ಕ್ರಿಕೆಟ್ ಬಗ್ಗೆ ಪ್ರೀತಿಯಿರುವ ಇಮ್ರಾನ್‌ಗೆ ಭಾರತ-ಪಾಕ್ ಪಂದ್ಯಗಳು ನಿಲುಗಡೆಯಾಗಿರುವುದು ಬೇಸರ ತಂದಿರುವುದು ನಿಜ. ದ್ವಿಪಕ್ಷೀಯ ಸರಣಿ ನಡೆಯಲು ಖಾನ್ ಮನವೊಲಿಕೆಗೆ ಯತ್ನಿಸಿದ್ದೂ ಹೌದು. ಆದರೆ ತೀರಾ ಇತ್ತೀಚೆಗೆ ನರೇಂದ್ರ ಮೋದಿ ಸರ್ಕಾರದ ನಡೆ ಪಾಕಿಸ್ತಾನ ಜೊತೆಗೆ ಸ್ನೇಹ ಸಂಬಂಧದ ಮರು ಬೆಸುಗೆ ಗ್ರೀನ್ ಸಿಗ್ನಲ್ ಕೊಡುವಂತಿದೆ. 'ಪಾಕಿಸ್ತಾನ ರಾಷ್ಟ್ರೀಯ ದಿನ'ದಂದು ಪಾಕ್‌ಗೆ ಶುಭಕೋರಿ ಟ್ವೀಟ್ ಮಾಡಿದ್ದ ಮೋದಿ, 'ಪಾಕಿಸ್ತಾನದ ಜನರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಭಾರತ ಬಯಸುತ್ತದೆ. ಇದಕ್ಕಾಗಿ, ಭಯೋತ್ಪಾದನೆ ಮತ್ತು ಹಗೆತನವಿಲ್ಲದ ನಂಬಿಕೆಯ ವಾತಾವರಣ ಸೃಷ್ಟಿಯಾಗಬೇಕು' ಎಂಬರ್ಥದಲ್ಲಿ ಬರೆದುಕೊಂಡಿದ್ದರು.

ಹೇಳಿಕೆ ನೀಡಿದ್ದ ವಿರಾಟ್ ಕೊಹ್ಲಿ
ಇತ್ತೀಚೆಗೆ 'ಪಾಕಿಸ್ತಾನಿ ಜಂಗ್' ದಿನಪತ್ರಿಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅನ್ನು ಉಲ್ಲೇಖಿಸಿ ಒಂದು ವರದಿ ಮಾಡಿತ್ತು. ಇದರಲ್ಲಿ, ಭಾರತದೊಂದಿಗಿನ ಸರಣಿಗೆ ರೆಡಿಯಾಗಿ ಎಂದು ಪಿಸಿಬಿ ಹೇಳಿರುವುದಾಗಿ ತಿಳಿಸಿತ್ತು. ಅಷ್ಟೇ ಅಲ್ಲ, ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ, ಈ ವರ್ಷ ಅಧಿಕೃತ ಘೋಷಿತ ಸರಣಿಯಲ್ಲದೆ ಇನ್ನೂ ಹೆಚ್ಚುವರಿ ಸರಣಿಗಳು ನಡೆಯುವ ನಿರೀಕ್ಷೆಯಿದೆ ಎಂಬಂತೆ ಹೇಳಿಕೆ ನೀಡಿದ್ದರು. ಅಂದ್ಹಾಗೆ ಸರಣಿ ಆರಂಭಯಾವಾಗ ಅನ್ನೋದು ಇನ್ನೂ ಗೊತ್ತಾಗಿಲ್ಲ. ವರ್ಷದ ಕೊನೆಯ ವೇಳೆ ಬಹುಶಃ ಭಾರತ-ಪಾಕ್ ಟಿ20ಐ ಸರಣಿ ನಡೆಯುವ ನಿರೀಕ್ಷೆಯಿದೆ.


Click it and Unblock the Notifications












