ದ.ಆಫ್ರಿಕಾ ಸರಣಿ ಮುಕ್ತಾಯ: ಭಾರತದ ಈ ವರ್ಷದ ಉಳಿದ 8 ಕ್ರಿಕೆಟ್ ಇವೆಂಟ್ಸ್‌ನ ವೇಳಾಪಟ್ಟಿ ಹೀಗಿದೆ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸಿತ್ತು. ಪ್ರವಾಸಿ ದಕ್ಷಿಣ ಆಫ್ರಿಕಾ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು ಆದರೆ ನಂತರ ನಡೆದ 3 ಮತ್ತು 4ನೇ ಪಂದ್ಯಗಳಲ್ಲಿ ಗೆದ್ದ ಟೀಮ್ ಇಂಡಿಯಾ ಸರಣಿಯಲ್ಲಿ 2-2ರ ಸಮಬಲ ಸಾಧಿಸಿತು.
ನಂತರ ಇತ್ತಂಡಗಳ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಳೆದ ಭಾನುವಾರ ಆಯೋಜನೆಯಾಗಿದ್ದ ಅಂತಿಮ ಟಿ ಟ್ವೆಂಟಿ ಪಂದ್ಯ ಸರಣಿಯ ಫೈನಲ್ ಪಂದ್ಯವಾಗಿ ಪರಿಣಮಿಸಿತ್ತು. ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಎರಡೂ ತಂಡಗಳು ಟ್ರೋಫಿ ವಶಪಡಿಸಿಕೊಳ್ಳಬೇಕೆಂದು ಕಣಕ್ಕಿಳಿದಿದ್ದವು. ಆದರೆ, ವರುಣನ ಆಗಮನವಾದ ಕಾರಣ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ರದ್ದಾಯಿತು ಹಾಗೂ ಸರಣಿ ಎರಡೂ ತಂಡಗಳಿಗೂ ಸಮವಾಗಿ ಹಂಚಿಕೆಯಾಯಿತು.
ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿ ಮುಕ್ತಾಯವಾದ ನಂತರ ಟೀಮ್ ಇಂಡಿಯಾ ಏಕಕಾಲಕ್ಕೆ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸವನ್ನು ಕೈಗೊಳ್ಳುತ್ತಿದ್ದು, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರೆ, ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಮ್ ಇಂಡಿಯಾ ಇದೇ ತಿಂಗಳ ಕೊನೆಯಲ್ಲಿ ಐರ್ಲೆಂಡ್ ಪ್ರವಾಸ ಕೈಗೊಂಡು ಟಿ ಟ್ವೆಂಟಿ ಸರಣಿಯನ್ನು ಆಡಲಿದೆ. ಹೀಗೆ ಈ ವರ್ಷ ಟೀಮ್ ಇಂಡಿಯಾ ಭಾಗವಹಿಸಲಿರುವ ವಿವಿಧ ಸರಣಿ ಹಾಗೂ ಟೂರ್ನಿಗಳ ಸಂಪೂರ್ಣ ವೇಳಾಪಟ್ಟಿ ಕೆಳಕಂಡಂತಿದೆ.

ಜೂನ್ ಮತ್ತು ಜುಲೈ ತಿಂಗಳ ವೇಳಾಪಟ್ಟಿ
ಇದೇ ತಿಂಗಳ 26 ಮತ್ತು 28ರಂದು ಭಾರತ ಮತ್ತು ಐರ್ಲೆಂಡ್ ತಂಡಗಳು ಟಿ ಟ್ವೆಂಟಿ ಪಂದ್ಯಗಳಲ್ಲಿ ಐರ್ಲೆಂಡ್‌ನ ಡಬ್ಲಿನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿವೆ.
ಜುಲೈ ತಿಂಗಳಿನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಗಳು ಜರುಗಲಿದ್ದು, ವೇಳಾ ಪಟ್ಟಿ ಕೆಳಕಂಡಂತಿದೆ.
• ಐದನೇ ಟೆಸ್ಟ್ ಪಂದ್ಯ ( ಮುಂದೂಡಲ್ಪಟ್ಟ ) - ಜುಲೈ 1 - 5: ಬರ್ಮಿಂಗ್ ಹ್ಯಾಮ್
• ಪ್ರಥಮ ಟಿ ಟ್ವೆಂಟಿ ಪಂದ್ಯ - ಜುಲೈ 7 - ಸೌತಾಂಪ್ಟನ್
• ದ್ವಿತೀಯ ಟಿ ಟ್ವೆಂಟಿ ಪಂದ್ಯ - ಜುಲೈ 9 - ಬರ್ಮಿಂಗ್ ಹ್ಯಾಮ್
• ತೃತೀಯ ಟಿ ಟ್ವೆಂಟಿ ಪಂದ್ಯ - ಜುಲೈ 10 - ನಾಟಿಂಗ್ ಹ್ಯಾಮ್
• ಪ್ರಥಮ ಏಕದಿನ ಪಂದ್ಯ - ಜುಲೈ 12 - ಓವಲ್
• ದ್ವಿತೀಯ ಏಕದಿನ ಪಂದ್ಯ - ಜುಲೈ 14 - ಲಾರ್ಡ್ಸ್

ಆಗಸ್ಟ್ - ಸೆಪ್ಟೆಂಬರ್ ತಿಂಗಳ ವೇಳಾಪಟ್ಟಿ
ಇಂಗ್ಲೆಂಡ್ ಪ್ರವಾಸ ಮುಕ್ತಾಯವಾದ ನಂತರ ಭಾರತ ಆಗಸ್ಟ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಳ್ಳಲಿದ್ದು, 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೆರಿಬಿಯನ್ನರ ವಿರುದ್ಧ ಸೆಣಸಾಟ ನಡೆಸಲಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಶ್ರೀಲಂಕಾದಲ್ಲಿ ಏಷ್ಯಾಕಪ್ ಟೂರ್ನಿ ನಡೆಯಲಿದ್ದು, ಈ ಮಹತ್ವದ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಭಾಗವಹಿಸಲಿದೆ
ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು, 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಸೆಣಸಾಟ ನಡೆಸಲಿದೆ.

ಉಳಿದ ಟೂರ್ನಿ ಹಾಗೂ ಸರಣಿಗಳು
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳಲಿದೆ.
ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಳ್ಳಲಿರುವ ಟೀಮ್ ಇಂಡಿಯಾ 2 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳಲ್ಲಿ ಸೆಣಸಾಟ ನಡೆಸಲಿದೆ.
ಡಿಸೆಂಬರ್ ತಿಂಗಳಿನಲ್ಲಿ ಭಾರತ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿದ್ದು, 5 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications